Advertisement

ಸಾಮಾನ್ಯ ಕೈದಿಯಂತೆ ಜೈಲಲ್ಲಿ 2 ರಾತ್ರಿ ಕಳೆದ ಪ್ರಜ್ವಲ್‌!

09:05 PM Jun 11, 2024 | Team Udayavani |

ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಾಮಾನ್ಯ ಕೈದಿಯಂತೆ ಜೈಲೂಟ ಸೇವಿಸಿ ಮೌನಕ್ಕೆ ಶರಣಾಗಿದ್ದಾರೆ.

Advertisement

ಐಷಾರಾಮಿ ಜೀವನ ನಡೆಸುತ್ತಿದ್ದ ಪ್ರಜ್ವಲ್‌ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್‌ ಬ್ಯಾರಕ್‌ನಲ್ಲಿ ಜೈಲೂಟ ಸೇವಿಸಿ ಎರಡು ರಾತ್ರಿ ಕಳೆದಿದ್ದಾರೆ. ಮಂಗಳವಾರ ಬೆಳಗ್ಗೆ ಎದ್ದು ಜೈಲಿನಲ್ಲಿ ಕೈದಿಗಳೇ ತಯಾರಿಸಿದ ಟಮೋಟ ಬಾತ್‌ ಸೇವಿಸಿ, ಟೀ ಕುಡಿದು ಜೈಲಿನ ಬ್ಯಾರಕ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ಮಧ್ಯಾಹ್ನ ಹಾಗೂ ರಾತ್ರಿ ಜೈಲಿನ ಮೆನುವಿನಂತೆ ಮುದ್ದೆ, ಅನ್ನ, ಸಾರು, ಮಜ್ಜಿಗೆ ಸೇವಿಸಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಜೈಲು ಸಿಬ್ಬಂದಿ ಜತೆಗೂ ಮಾತನಾಡಿಲ್ಲ ಎಂದು ತಿಳಿದು ಬಂದಿದೆ.

ಶಾಸಕ ರೇವಣ್ಣ ಅವರಿಗೆ ಜೈಲಿನಲ್ಲಿ ಮಲಗಲು ಮಂಚ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಆದರೆ ಪ್ರಜ್ವಲ್‌ ರೇವಣ್ಣ ಅವರಿಗೆ ಸಾಮಾನ್ಯ ಕೈದಿಗಳಿಗೆ ಕೊಡುವ ಸೌಲಭ್ಯವನ್ನೇ ಕಲ್ಪಿಸಲಾಗಿದೆ. ವಿಶೇಷ ಸವಲತ್ತು ಕೊಟ್ಟಿಲ್ಲ.

ಜೈಲಿನ ಕೋಣೆಯಲ್ಲಿ ಪ್ರಜ್ವಲ್‌ ಒಂಟಿ:
ಎಲ್ಲ ಕೈದಿಗಳಿಗೆ ನೀಡುವ ಆಹಾರವನ್ನೇ ಜೈಲು ಸಿಬ್ಬಂದಿ ತಳ್ಳುವ ಗಾಡಿಯಲ್ಲಿ ಪ್ರಜ್ವಲ್‌ ಬ್ಯಾರಕ್‌ಗೆ ತಂದು ನೀಡಿದ್ದಾರೆ.

Advertisement

ಬ್ಯಾರಕ್‌ನಲ್ಲಿರುವ ಜೈಲಿನ ಒಂದು ಕೋಣೆಯಲ್ಲಿ ಪ್ರಜ್ವಲ್‌ ಪ್ರತ್ಯೇಕವಾಗಿ ಇದ್ದಾರೆ. ಇವರ ಸೆಲ್‌ ಸಮೀಪ ಭದ್ರತೆಗಾಗಿ ಒಬ್ಬರನ್ನು ನಿಯೋಜಿಸಲಾಗಿದೆ.

ಆರೋಪಿಯು ನಟೋರಿಯಸ್‌ ಆಗಿದ್ದರೆ ಅಥವಾ ಅವರ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿದ್ದರೆ ಹೆಚ್ಚಿನ ಭದ್ರತೆ ನೀಡಬೇಕಾಗುತ್ತದೆ. ಆದರೆ ಪ್ರಜ್ವಲ್‌ ರೇವಣ್ಣ ಸಾಮಾನ್ಯರಾಗಿದ್ದು ಅವರಿಗೆ ಹೆಚ್ಚಿನ ಭದ್ರತೆ ನೀಡುವ ಅಗತ್ಯ ಕಂಡು ಬಂದಿಲ್ಲ. ಆರೋಪಿಗಳು ಜೈಲಿನ ಆವರಣದ ಹೊರಾಂಗಣದಲ್ಲಿ ಓಡಾಡಬೇಕು ಎಂದು ಜೈಲಿನ ಅಧಿಕಾರಿಗಳಿಗೆ ತಿಳಿಸಿದರೆ ದಿನದಲ್ಲಿ 30 ನಿಮಿಷ ಬಿಡಲಾಗುತ್ತದೆ ಎಂದು ಜೈಲಿನ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ:
ಎಸ್‌ಐಟಿ ವಶದಲ್ಲಿದ್ದ ಪ್ರಜ್ವಲ್‌ ರೇವಣ್ಣ ಅವರಿಗೆ ನ್ಯಾಯಾಲಯವು ಜೂನ್‌ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಜ್ವಲ್‌ ರೇವಣ್ಣ ಇದುವರೆಗೆ ಎಸ್‌ಐಟಿ ವಶದಲ್ಲಿದ್ದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಜೈಲು ಸೇರಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ವಶಕ್ಕೆ ಪಡೆಯಲಿದೆ ಎಸ್‌ಐಟಿ?
ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣನನ್ನು ಎಸ್‌ಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದನ್ನು ಹೊರತುಪಡಿಸಿ ಎಸ್‌ಐಟಿಯಲ್ಲಿ ಪ್ರಜ್ವಲ್‌ ವಿರುದ್ಧ ಇನ್ನೂ 3 ಪ್ರಕರಣ ದಾಖಲಾಗಿದ್ದು ಆ ಕೇಸ್‌ನಲ್ಲಿ ವಿಚಾರಣೆ ನಡೆಸುವುದು ಬಾಕಿ ಇದೆ. ಹೀಗಾಗಿ ಆ 3 ಪ್ರಕರಣಗಳಲ್ಲಿ ಶೀಘ್ರದಲ್ಲೇ ಪ್ರಜ್ವಲ್‌ ರೇವಣ್ಣ ಅವರನ್ನು ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next