Advertisement

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

11:15 PM Jun 08, 2024 | Team Udayavani |

ಹಾಸನ: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವೀಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್‌ (ಪ್ರಜ್ವಲ್‌ ಮಾಜಿ ಕಾರು ಚಾಲಕ)ನನ್ನು ಎಸ್‌ಐಟಿ ಶನಿವಾರ ಸಂಜೆ ಬಂಧಿಸಿದೆ.

Advertisement

ಹಾಸನ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗಡಿಭಾಗದಲ್ಲಿ ಕಾರ್ತಿಕ್‌ನನ್ನು ಎಸ್‌ಐಟಿ ಪೊಲೀಸರು ಬಂಧಿಸಿ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಅಶ್ಲೀಲ ವೀಡಿಯೋಗಳನ್ನು ಹಂಚಿದ ಸಂಬಂಧ, ಕಾರ್ತಿಕ್‌ ಸಹಿತ ಐವರ ವಿರುದ್ಧ ಎ. 23ರಂದು ಹಾಸನದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಗಳಾದ ಬೇಲೂರು ತಾಲೂಕು ನಲ್ಕೆ ಗ್ರಾಮದ ನವೀನ್‌ಗೌಡ ಮತ್ತು ಚೇತನ್‌ ಗೌಡ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಕಾರ್ತಿಕ್‌, ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು ಅಲಿಯಾಸ್‌ ಪುಟ್ಟಿ, ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಕ್ವಾಲಿಟಿ ಬಾರ್‌ ಶರತ್‌ ಬಂಧನವಾಗಿರಲಿಲ್ಲ. ಇನ್ನು ಪುಟ್ಟರಾಜು ಮತ್ತು ಶರತ್‌ ಬಂಧನವಾಗಬೇಕಾಗಿದೆ.

ಒಂದೂವರೆ ತಿಂಗಳ ಬಳಿಕ ಬಂಧನ
ಕಾರ್ತಿಕ್‌ ಮತ್ತು ಐವರ ಮೇಲೆ ಎ. 23ರಂದು ಜೆಡಿಎಸ್‌ ಮುಖಂಡ, ವಕೀಲ ಪೂರ್ಣಚಂದ್ರ ತೇಜಸ್ವಿ ಪ್ರಕರಣ ದಾಖಲಿಸಿ ದ್ದರು. ಅನಂತರ ಆರೋಪಿಗಳು ಹಾಸನದ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಬಳಿಕ ಹೈಕೋರ್ಟ್‌ನಲ್ಲಿ ಪ್ರಯತ್ನಿಸಿದ್ದರೂ ಜಾಮೀನು ಸಿಕ್ಕಿರಲಿಲ್ಲ.ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಫ‌ಲಿತಾಂಶ ಪ್ರಕಟವಾದ ಜೂ.4ರಂದು ಹಾಸನದಲ್ಲಿ ಕಾರ್ತಿಕ್‌ ಮತ್ತು ಶರತ್‌ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಪೊಲೀಸರ ಎದುರೇ ಸಂಭ್ರಮಾಚರಣೆಯಲ್ಲಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಒಂದೂವರೆ ತಿಂಗಳನಿಂದ ಆರೋಪಿಗಳನ್ನು ಬಂಧಿಸದ ಎಸ್‌ಐಟಿ ಧೋರಣೆ ಬಗ್ಗೆ ಜೆಡಿಎಸ್‌ ಮುಖಂಡರು ಕಾನೂನು ಹೋರಾಟಕ್ಕೂ ಸಜ್ಜಾಗಿದ್ದ ಹೊತ್ತಿನಲ್ಲೇ ಕಾರ್ತಿಕ್‌ನನ್ನು ಬಂಧಿಸಲಾಗಿದೆ.

Advertisement

ಎಚ್‌.ಡಿ.ರೇವಣ್ಣ ಕುಟುಂಬದಲ್ಲಿ 15 ವರ್ಷ ಕಾರು ಚಾಲಕ ನಾಗಿದ್ದ ಕಾರ್ತಿಕ್‌, ಹೊಳೆನರಸೀಪುರ ಪಟ್ಟಣ ಸಮೀಪದ ಕಡವಿನ ಕೋಟೆ ಗ್ರಾಮದವನು. ಪ್ರಜ್ವಲ್‌ ಕಾರು ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಕಾರ್ತಿಕ್‌ ಮತ್ತು ರೇವಣ್ಣ ಕುಟುಂಬದ ನಡುವೆ ಜಮೀನು ಖರೀದಿ ಸಂಬಂಧ ಮನಸ್ತಾಪ ಉಂಟಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎನ್ನಲಾದ ಅಶ್ಲೀಲ ವೀಡಿಯೋಗಳನ್ನು ಕಾರ್ತಿಕ್‌ ಸಂಗ್ರಹಿಸಿಟ್ಟುಕೊಂಡಿದ್ದರು. ಅನಂತರ ಅದನ್ನು ಬಹಿರಂಗ ಮಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next