ಹೊಸವರ್ಷದ ಆರಂಭದಲ್ಲಿಯೇ ನಟ ಪ್ರಜ್ವಲ್ ದೇವರಾಜ್ “ಜಂಟಲ್ ಮನ್’ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ಮನ್’ ಚಿತ್ರದ ಪ್ರಮೋಶನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, (ಜ. 6) ರಂದು ವೈಕುಂಠ ಏಕಾದಶಿಯ ಶುಭ ಸಂದರ್ಭದಲ್ಲಿ “ಜಂಟಲ್ ಮನ್’ ಟ್ರೇಲರ್ ಅದ್ಧೂರಿಯಾಗಿ ಹೊರಬಂದಿದೆ.
ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ “ಜಂಟಲ್ ಮನ್’ ಚಿತ್ರದ ಟೀಸರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ “ವೈಕುಂಠ ಏಕಾದಶಿ ದಿನ ಟೀಸರ್ ಬಿಡುಗಡೆ ಮಾಡಿರುವುದರಿಂದ ಒಳ್ಳೆಯದೇ ಆಗುತ್ತದೆ. ದೃಶ್ಯಗಳನ್ನು ನೋಡಿದಾಗ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತಿದೆ. ಇತ್ತೀಚೆಗೆ ಪ್ರೇಕ್ಷಕರು ಹೊಸಥರದ ಚಿತ್ರಗಳನ್ನು ಹೆಚ್ಚಾಗಿ ಸ್ವೀಕರಿಸುತ್ತಿರುವುದರಿಂದ, ಈ ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದರು. ನಟ ಧ್ರುವ ಸರ್ಜಾ ಮಾತನಾಡಿ, “ಚಿತ್ರದ ಟೈಟಲ್‌ಗೆ ಪ್ರಜ್ವಲ್ ದೇವರಾಜ್ ಪಕ್ಕಾ ಸೂಟ್ ಆಗುತ್ತಾರೆ. ಇದಕ್ಕಿಂತ ಇನ್ನೇನು ಬೇಕು. ಇಡೀ ಚಿತ್ರತಂಡಕ್ಕೆ “ಜಂಟಲ್ ಮನ್’ ಒಂದೊಳ್ಳೆ ಸಕ್ಸಸ್ ತಂದುಕೊಡಲಿ’ ಎಂದರು.
ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಮಾತನಾಡಿ, “ನನಗೆ ಸಿನಿಮಾ ರಂಗಕ್ಕೆ ಬರಲು ಸ್ಪೂರ್ತಿಯೇ ಪುನೀತ್ ರಾಜಕುಮಾರ್. ವಯಸ್ಸಿನಲ್ಲಿ ಚಿಕ್ಕವನಾದರೂ ಧ್ರುವ ನನಗೆ ಸದಾ ಪ್ರೇರಣೆ. ಇವರಿಬ್ಬರೂ ಬಂದು ನಮ್ಮ ಸಿನಿಮಾಕ್ಕೆ ಸಾಥ್ ನೀಡಿದ್ದು ಖುಷಿಕೊಟ್ಟಿದೆ. ಸದ್ಯ ಚಿತ್ರವನ್ನು ಜನರಿಗೆ ತಲುಪಿಸುವ ಪ್ರಯತ್ನದಲ್ಲಿದ್ದೇವೆ. ಇನ್ನು ಎಲ್ಲವು ಜನರಿಗೆ ಬಿಟ್ಟದ್ದು. ಕಥೆಗಾಗಿ ಎಂಟು ತಿಂಗಳು ಸಮಯ ತೆಗೆದುಕೊಂಡಿದೆ. ಸೋಲು ಗೆಲುವು ಎಲ್ಲವು ತಂಡಕ್ಕೆ ಸೇರುತ್ತದೆ’ ಎಂದರು.
ಜಡೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ “ಜಂಟಲ್ ಮನ್’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದಾರೆ. ಉಳಿದಂತೆ ಸಂಚಾರಿ ವಿಜಯ್, ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗುರುದೇಶಪಾಂಡೆ ನಿರ್ಮಾಣದ ಈ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಸದ್ಯ “ಜಂಟಲ್ ಮನ್’ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಹಂತದ ಕಸರತ್ತಿನಲ್ಲಿರುವ ಚಿತ್ರತಂಡ, ಇದೇ ತಿಂಗಳ ಕೊನೆಗೆ ಚಿತ್ರವನ್ನು ಥಿಯೇಟರ್‌ಗೆ ತರುವ ಪ್ಲಾನ್ ಹಾಕಿಕೊಂಡಿದೆ.