ನಟ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ “ಜಾತರ’ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ “ಜಾತರ’ ಸಿನಿಮಾದ ಟೈಟಲ್ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.
ಇನ್ನು “ಜಾತರ’ ಲವ್, ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಸಿನಿಮಾವಾಗಿದ್ದು, ಇಲ್ಲಿಯವರೆಗೂ ಕಾಣಿಸಿಕೊಂಡಿರದ ವಿಭಿನ್ನ ಗೆಟಪ್‌ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ.
ಈಗಾಗಲೇ ತೆಲುಗಿನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ “ಜಾತರ’ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ವರ್ಧಮಾನ್ ಫಿಲಂಸ್’ ಹಾಗೂ “ಲೋಟಸ್ ಎಂಟರ್‌ಟೈನ್‌ಮೆಂಟ್ಸ್’ ಬ್ಯಾನರ್ ಮೂಲಕ ಹೈದರಾಬಾದ್ ಮೂಲದ ಗೋವರ್ಧನ್ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ “ಜಾತರ’ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರಲಿದೆ.
ಇದನ್ನೂ ಓದಿ:Meghalaya: 6 ತಿಂಗಳ ಹಿಂದೆ ಉದ್ಘಾಟನೆಗೊಂಡ ಫುಟ್ಬಾಲ್ ಕ್ರೀಡಾಂಗಣದ ತಡೆಗೋಡೆ ಕುಸಿತ
ಸದ್ಯ “ಜಾತರ’ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಸಿರುವ ಚಿತ್ರತಂಡ, ಇದೇ ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಿಸಿ, ಮುಂದಿನ ವರ್ಷದ ಜನವರಿ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಇನ್ನು “ಜಾತರ’ ಸಿನಿಮಾದ ಹಾಡುಗಳಿಗೆ ಭೀಮ್ಸ್ ಸೆಸಿರೋಲಿಯೋ ಸಂಗೀತ ಸಂಯೋಜನೆಯಿದ್ದು, ಸಾಯಿಶ್ರೀರಾಂ ಛಾಯಾಗ್ರಹಣವಿದೆ. ಚಿತ್ರಕ್ಕೆ ಬಿ. ವಾಸುದೇವರೆಡ್ಡಿ ಕಥೆ, ಮಾಸ್ತಿ ಸಂಭಾಷಣೆಯಿದೆ. ಸದ್ಯ “ಜಾತರ’ ಸಿನಿಮಾದ ನಾಯಕಿ, ಮತ್ತು ಉಳಿದ ಪ್ರಮುಖ ಪಾತ್ರವರ್ಗ ಹಾಗೂ ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.