ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನದಿಂದ ಅಸಿಂಧುಗೊಳಿಸಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಮೂಲ ಅರ್ಜಿದಾರರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಳೆದ ಲೋಕಸಭಾ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಎ. ಮಂಜು ಹಾಗೂ ವಕೀಲ ಜಿ. ದೇವರಾಜೇಗೌಡ ಅವರ ಅರ್ಜಿಗಳನ್ನು ಆಧರಿಸಿ, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದ ಹಾಗೂ ಚುನಾವಣಾ ಅಕ್ರಮಗಳನ್ನು ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಸೆ.1ಕ್ಕೆ ಆದೇಶಿಸಿತ್ತು.
ಈ ಮಧ್ಯೆ ಅಸಿಂಧು ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬೇಕಾಗಿದೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಬೇಕಾಗಿದೆ.
ಅದಕ್ಕೆ ಕಾಲಾವಕಾಶದ ಅಗತ್ಯವಿದ್ದು, ಅಲ್ಲಿವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯಂತರ ಅರ್ಜಿಯು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು, ಈ ವೇಳೆ ಮೂಲ ಅರ್ಜಿದಾರ ಹಾಗೂ ಮೇಲ್ಮನವಿಯಲ್ಲಿನ ಪ್ರತಿವಾದ ದೇವರಾಜೇಗೌಡ ಪರ ವಕೀಲರು, ಅಸಿಂಧು ಆದೇಶಕ್ಕೆ ತಡೆ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಆಕ್ಷೇಪಗಳನ್ನು ಲಿಖೀತ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಪ್ರತಿವಾದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿತು.