ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲೇ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಲಿದ್ದಾರೆ.
ಅಂದರೆ ಅಣ್ಣ-ತಮ್ಮನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಒಂದೇ ತಂಡ ತನಿಖೆ ನಡೆಸಲಿದೆ.
ಈಗಾಗಲೇ ಪ್ರಜ್ವಲ್ ವಿರುದ್ಧ ಬಿ.ಕೆ. ಸಿಂಗ್ ಮುಖ್ಯಸ್ಥರಾಗಿದ್ದು, ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ. ಪನ್ನೆಕರ್, ಸೀಮಾ ಲಾಟ್ಕರ್ ತಂಡ ತನಿಖೆ ನಡೆಸುತ್ತಿದೆ. ಸೂರಜ್ ಪ್ರಕರಣವನ್ನೂ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಸಿಐಡಿ ಡಿಐಜಿ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಿದ್ದಾರೆ.
ಇಂದು ಸಿಐಡಿ ವಶಕ್ಕೆ ಸೂರಜ್
ಸೋಮವಾರ ಬೆಳಗ್ಗೆಯೇ ಹೊಳೆನರಸೀಪುರ ಪೊಲೀಸರು ಪ್ರಕರಣದ ಕಡತವನ್ನು ಸಿಐಡಿಗೆ ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ. ಆ ಬಳಿಕ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ನೀಡುವಂತೆ ಸಿಐಡಿ ವಿಶೇಷ ಘಟಕ ಕೋರ್ಟ್‌ಗೆ ಮೊರೆ ಹೋಗಲಿದ್ದು, ಬಳಿಕ ಪೊಲೀಸ್ ವಶಕ್ಕೆ ಪಡೆಯಲಿದ್ದಾರೆ.