ತೀರ್ಥಹಳ್ಳಿ: ಕರ್ನಾಟಕದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು, ತತ್‌ಕ್ಷಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮತ್ತು ಕರ್ನಾಟಕ ಸರ್ಕಾರ ತಕ್ಷಣ ಬಂಧಿಸಿ ಸೂಕ್ತ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕೆಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಚುನಾವಣಾಧಿಕಾರಿಗಳಿಗೆ ದೂರು ನೀಡಿದರು.
ಸದಾ ಮಹಿಳೆಯರ ಮಂಗಳ ಸೂತ್ರ, ರಾಮಾಯಣ ಮಹಾಭಾರತದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದ ಬಗ್ಗೆ ಮೌನ ವಹಿಸಿರುವುದೇಕೆ? ಭಾರತೀಯ ಜನತಾ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ಜನ ಪ್ರತಿನಿಧಿಗಳು ಮುಖಂಡರುಗಳು ದೇಶದ ಹೆಮ್ಮೆಯ ಒಲಂಪಿಕ್ ಪದಕ ವಿಜೇತ ಮಹಿಳಾ ಕ್ರೀಡಾಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಲಿಲ್ಲ ಎಂದರು.
ಹಾಗೆಯೇ ಮಣಿಪುರದಲ್ಲಿ ಸಾವಿರಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದ ಸಂದರ್ಭ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರುಗಳು ಹಾಗೂ ವಿಶ್ವ ಗುರು ಎಂದು ಬಿಜೆಪಿಯವರಿಂದ ಕರೆಯಲ್ಪಡುವ ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿರುವುದು ಆಶ್ಚರ್ಯಕರ. ಇವರ ತಾರತಮ್ಯ ನೀತಿ ದ್ವೇಶದ ರಾಜಕಾರಣ ಪ್ರಧಾನಿ ಪದವಿಗೆ ಗೌರವ ತರುವಂತ ನಡವಳಿಕೆಯಲ್ಲ ಎಂದು ಹೇಳಿದರು.
ಇಡಿ ರಾಷ್ಟ್ರಕ್ಕೆ ಗೊತ್ತಿರುವಂತೆ ಪ್ರಧಾನ ಮಂತ್ರಿ ಮೋದಿಯವರು ಕರ್ನಾಟಕಕ್ಕೆ ಬರಗಾಲ, ಅತಿವೃಷ್ಠಿಗೆ ಹಣ ನೀಡಿರುವುದಿಲ್ಲ. ದೇಶದ ಕೃಷಿ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ಬಿಡುಗಡೆ ಮಾಡಬೇಕಾದ ಮಹಾತ್ಮಗಾಂಧಿ ರಾಷ್ಟ್ರೀಯಾ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಕಡಿತಗೊಳಿಸಿದ್ದು ಹಾಗೂ ಸಮರ್ಪಕ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
ಬಡವರು, ಮಧ್ಯಮ ವರ್ಗದವರು, ರೈತರು ಕೊಳ್ಳುವ ದಿನ-ನಿತ್ಯದ ವಸ್ತುಗಳ ಬೆಲೆ ಇಳಿಸಲಿಲ್ಲ.ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಒಂದೇ ಒಂದು ಶಬ್ದವು ಇಲ್ಲದೆ ಇರುವ ಖಾಸಗಿ ಆಸ್ತಿ ಹಣವನ್ನು ಅರ್ಧ ಭಾಗ ಸರ್ಕಾರಕ್ಕೆ ಮುಟ್ಟುಗೋಲು ಹಾಕುತ್ತೇವೆಂದು ಸಾರ್ವಜನಿಕ ಸಭೆಗಳಲ್ಲಿ ಪಕ್ಷಕ್ಕೆ ಸಂಬಂಧಿಸಿದ ವಿಚಾರವಾಗಿ ಸುಳ್ಳು ಹೇಳಿ ಅಪಪ್ರಚಾರ ಮಾಡುವ ಪ್ರಧಾನಿ ನಡವಳಿಕೆ ಪ್ರಧಾನಿ ಪದವಿಯ ಘನತೆಗೆ ಕುಂದು ತರುವಂತ ಪ್ರವೃತ್ತಿಯಾಗಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಈ ಮೇಲ್ಕಂಡ ವಿಚಾರಗಳನ್ನು ಖಂಡಿಸದ ಕರ್ನಾಟಕ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ನಿಲುವುಗಳಿಗೆ ಬೆಂಬಲಿಸುತ್ತ ಬಂದಿರುವ 27 ಜನ ಬಿಜೆಪಿ ಬೆಂಬಲಿತ ಸಂಸದರು ಹಾಗೂ ಕೇಂದ್ರ ಸಚಿವರಾಗಿ ಕೆಲಸ ಮಾಡುವವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ಹಾಗೂ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಅನ್ನಪೂರ್ಣ ಮೋಹನ್ ಮತ್ತು ಜಯ ಜಿ ರಾವ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಜೀನಾ ವಿಕ್ಟರ್ ಡಿಸೋಜ, ಪ.ಪಂ ಸದಸ್ಯರುಗಳಾದ ಶಬನಂ, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ಮುಖಂಡರುಗಳಾದ ಗೀತಾ ರಾಘವೆಂದ್ರ, ಅನಿತಾ ಪ್ರವೀಣ್, ಲಕ್ಷ್ಮಿ ಗೋಪಾಲ, ಅನುಸೂಯ ಶೆಟ್ಟಿ ಉಪಸ್ಥಿತರಿದ್ದರು.