Advertisement

Prajwal Revanna ನನಗೇನೂ ಗೊತ್ತಿಲ್ಲ, ಮಹಿಳೆ ಯಾರೆಂದೇ ತಿಳಿಯದು

10:22 PM Jun 01, 2024 | Team Udayavani |

ಬೆಂಗಳೂರು: ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ, ಈ ಮಹಿಳೆ ಯಾರೆಂದು ನನಗೆ ತಿಳಿದಿಲ್ಲ, ನನಗೆ ಅದೆಲ್ಲ ನೆನಪಿಲ್ಲ, ನಾನವನಲ್ಲ…ಇದು ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆ ವೇಳೆ ಸಂಸದ ಪ್ರಜ್ವಲ್‌ ರೇವಣ್ಣ ಕೊಟ್ಟಿರುವ ಉತ್ತರ ಎನ್ನಲಾಗಿದೆ.

Advertisement

ಭಾರೀ ಕೋಲಾಹಲ ಎಬ್ಬಿಸಿರುವ ಹಾಸನದ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದ್ದು, ಸಾಕ್ಷ್ಯ ಮುಂದಿಟ್ಟು ಪ್ರಶ್ನಿಸಿದರೂ ಗೊಂದಲದ ಹೇಳಿಕೆ ಕೊಟ್ಟು ಸಂಸದರು ಮೌನಕ್ಕೆ ಶರಣಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಎಸ್‌ಐಟಿ ತಂಡವೂ ಜಾಣ ನಡೆ ತೋರಿ ಮಾತಿನ ಚಾಟಿ ಮೂಲಕವೇ ಪ್ರಜ್ವಲ್‌ರಿಂದ ತನಿಖೆಗೆ ಬೇಕಿರುವ ಒಂದೊಂದೇ ಅಂಶಗಳನ್ನು ಬಾಯಿ ಬಿಡಿಸಲು ಯತ್ನಿಸುತ್ತಿದೆ ಎನ್ನಲಾಗಿದೆ.

ಹೇಗಿತ್ತು ಪ್ರಜ್ವಲ್‌ ವಿಚಾರಣೆ?
ಪ್ರಜ್ವಲ್‌ ಅವರನ್ನು ಕುರ್ಚಿಯಲ್ಲಿ ಕೂರಿಸಿ, ಎಸ್‌ಐಟಿ ತಂಡದ ಕೆಲವು ತನಿಖಾಧಿಕಾರಿಗಳು ಒಬ್ಬರಾದ ಮೇಲೊಬ್ಬರಂತೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಪ್ರಜ್ವಲ್‌ ನನಗೆ ಏನೂ ಗೊತ್ತಿಲ್ಲ ಎಂದೇ ಹೇಳಿ ಮೌನಕ್ಕೆ ಶರಣಾಗುತ್ತಿದ್ದಾರೆ. ಮತ್ತೂಂದೆಡೆ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ನನ್ನ ವಿರುದ್ಧ ದೂರು ಕೊಟ್ಟ ಮಹಿಳೆ ಯಾರು ಎಂಬುದೇ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಕೆಲಸಕ್ಕೆ ಎಷ್ಟು ಜನರಿದ್ದಾರೆ ಎಂಬುದೇ ನಿಖರವಾಗಿ ತಿಳಿದಿಲ್ಲ. ತೋಟದ ಮನೆ, ಹಾಸನ, ಬೆಂಗಳೂರಿನಲ್ಲಿ ಹಲವು ಮಂದಿ ಕೆಲಸದವರಿದ್ದಾರೆ. ಯಾರು ನನ್ನ ವಿರುದ್ಧ ದೂರು ಕೊಟ್ಟವರು, ಏನೆಂದು ದೂರು ನೀಡಿದ್ದಾರೆ ಎಂದು ಪ್ರಜ್ವಲ್‌ ಅಧಿಕಾರಿಗಳಿಗೇ ಪ್ರಶ್ನಿಸಿದಾಗ, ಎಸ್‌ಐಟಿ ಅಧಿಕಾರಿಗಳೇ ಒಂದು ಕ್ಷಣ ತಬ್ಬಿಬ್ಟಾಗಿದ್ದಾರೆ ಎನ್ನಲಾಗಿದೆ.

ಅನಂತರ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ದೂರು ನೀಡಿರುವ ಸಂತ್ರಸ್ತೆಯ ಫೋಟೋ ತೋರಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪ್ರಶ್ನಿಸಿದಾಗ, ಇದು ಯಾರು ಎಂಬುದೇ ನನಗೆ ತಿಳಿದಿಲ್ಲ. ನಾನು ಇವರನ್ನು ನೋಡಿದ ನೆನಪಿಲ್ಲ. ನಾನು ಹೆಚ್ಚಾಗಿ ಹಾಸನ, ಬೆಂಗಳೂರು, ದಿಲ್ಲಿಯಲ್ಲಿ ಇರುತ್ತೇನೆ. ಕೆಲಸದವರನ್ನೆಲ್ಲ ನಾನು ಅಷ್ಟೊಂದು ಗಮನಿಸಿರಲಿಲ್ಲ ಎಂದು ಉತ್ತರಿಸಿದರು.

ಸಂತ್ರಸ್ತೆಗೆ ದೌರ್ಜನ್ಯ ಎಸಗಿರುವುದಕ್ಕೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳನ್ನು ತೋರಿಸಿದಾಗ ಯಾವುದೇ ಆತಂಕಕ್ಕೆ ಒಳಗಾಗದ ಪ್ರಜ್ವಲ್‌, ಇವರಿಗೆಲ್ಲ ನಾನು ಯಾಕೆ ಹಾಗೆ ಮಾಡಲಿ. ಅಲ್ಲದೆ ನಾಲ್ಕು ವರ್ಷಗಳ ಹಿಂದೆ ನಡೆದಿದೆ ಎನ್ನುತ್ತಾರೆ. ಆಗಲೇ ದೂರು ಕೊಡಬಹುದಿತ್ತಲ್ಲ ಎಂದು ಪ್ರಜ್ವಲ್‌ ಮರುಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Advertisement

ಮೊಬೈಲ್‌ ಮೇಲೆ ಕಣ್ಣು
ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಮೊಬೈಲ್‌ ಎಲ್ಲಿದೆ ಎಂದು ಕೇಳಿದಾಗ, ನೀವು ಜಪ್ತಿ ಮಾಡಿರುವ ಮೊಬೈಲ್‌ ಬಿಟ್ಟು ಬೇರೆ ಮೊಬೈಲ್‌ ನನ್ನಲ್ಲಿಲ್ಲ ಎಂದು ಪ್ರಜ್ವಲ್‌ ಹೇಳಿದ್ದಾರೆ. ನನ್ನ ಮೊಬೈಲ…ಗಳು ಪಿಎ ಬಳಿ ಇರುತ್ತವೆ. ಅವರೇನೊ ಕಳೆದು ಹೊಗಿದೆ ಎನ್ನುತ್ತಿದ್ದರು. ಕಳೆದ ವರ್ಷ ಈ ಬಗ್ಗೆ ದೂರು ದಾಖಲಾಗಿರಬೇಕು ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಅಶ್ಲೀಲ ವೀಡಿಯೋ ಸೆರೆಹಿಡಿದಿದ್ದಾರೆ ಎನ್ನಲಾದ ಮೊಬೈಲ್‌ ನಾಶವಾಗಿದ್ದರೆ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿರುವ ಮೂಲ ದಾಖಲೆಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ಆ ಮೊಬೈಲ್‌ನಿಂದ ಬೇರೆಡೆ ಫಾರ್ವರ್ಡ್‌ ಆಗಿರುವ ವೀಡಿಯೋಗಳು ಎರಡನೇ ಸಾಕ್ಷಿಗಳು ಎನಿಸಿಕೊಳ್ಳುತ್ತವೆ. ಹೀಗಾಗಿ ಅಶ್ಲೀಲ ವೀಡಿಯೋ ಸೆರೆಹಿಡಿದ ಮೊಬೈಲ್‌ ಮೇಲೆ ಎಸ್‌ಐಟಿ ಕಣ್ಣಿಟ್ಟಿದೆ.

3 ರಾತ್ರಿ ಸಿಐಡಿ ಕಚೇರಿಯಲ್ಲೇ ಕಳೆದ ಪ್ರಜ್ವಲ್‌
ಪ್ರಜ್ವಲ್‌ ಸಿಐಡಿ ಕಚೇರಿಯಲ್ಲೇ 3 ರಾತ್ರಿಗಳನ್ನು ಕಳೆದಿದ್ದಾರೆ. ಶನಿವಾರ ಬೆಳಗ್ಗೆ ಎಸ್‌ಐಟಿ ಸಿಬಂದಿ ಕೊಟ್ಟ ಉಪಾಹಾರವನ್ನು ಸೇವಿಸಿ, ಚಹಾ ಕುಡಿದರು. ಬಳಿಕ ಮಧ್ಯಾಹ್ನ 1.30ರ ವರೆಗೆ ಎಸ್‌ಐಟಿ ನಿರಂತರ ವಿಚಾರಣೆ ನಡೆಸಿದೆ. ಅನಂತರ ಪೊಲೀಸ್‌ ಸಿಬಂದಿ ಕೊಟ್ಟಿರುವ ಅನ್ನ, ಸಾಂಬಾರ್‌ ಸೇವಿಸಿ ಕೊಂಚ ಹೊತ್ತು ತಮಗೆ ನೀಡಿರುವ ಕೋಣೆಯಲ್ಲಿ ತಂಗಿದ್ದರು. ಅನಂತರ ಮತ್ತೆ ಎಸ್‌ಐಟಿ ವಿಚಾರಣೆ ಆರಂಭಿಸಿ ರಾತ್ರಿಯವರೆಗೂ ಎಸ್‌ಐಟಿ ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾದ ಪ್ರಜ್ವಲ್‌, ರಾತ್ರಿ ಊಟ ಮಾಡಿ ಗಾಢ ಯೋಚನೆಯಲ್ಲಿದ್ದು, ಸಪ್ಪೆ ಮುಖ ಮಾಡಿ ನಿದ್ದೆಗೆ ಜಾರಿದರು.

ವಕೀಲರ ಭೇಟಿ
ಪ್ರಜ್ವಲ್‌ ರೇವಣ್ಣ ಪರ ನ್ಯಾಯವಾದಿ ಅರುಣ್‌ ಅವರು ಶನಿವಾರ ಸಿಐಡಿ ಕಚೇರಿಗೆ ತೆರಳಿ ಪ್ರಜ್ವಲ್‌ ಜತೆ ಮಾತುಕತೆ ನಡೆಸಿದರು. ಪ್ರಕರಣದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಪ್ರಕರಣದ ಬಗ್ಗೆ ಇದ್ದ ಕೆಲವು ಗೊಂದಲಗಳನ್ನು ಪ್ರಜ್ವಲ್‌ ಅವರು ವಕೀಲರ ಮೂಲಕ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next