ಬೆಂಗಳೂರು: ಉಪ ಚುನಾವಣೆ ಸೋಲಿನ ಬೆನ್ನಲ್ಲೇ ಜೆಡಿಎಸ್ ಸಂಘಟನೆಯಲ್ಲಿ ಸಕ್ರಿಯರಾಗಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೂರನೇ ತಲೆಮಾರು ಸಜ್ಜಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ಗೆ ಯುವ ಸಮೂಹವನ್ನು ಸೆಳೆಯಲು ಮುಂದಾಗಿದ್ದಾರೆ.
ಎಲ್ಲ ಜಾತಿ ಸಮುದಾಯದ ಯುವ ನಾಯಕರನ್ನು ಸಂಪರ್ಕಿಸಿ ಪಕ್ಷಕ್ಕೆ ಕರೆತಂದು ಸೂಕ್ತ ಸ್ಥಾನಮಾನ ನೀಡಿ ಪಕ್ಷದ ಹೊಣೆಗಾರಿಕೆ ವಹಿಸಿ, ಮುಂದಿನ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಹೊಸಮುಖಗಳಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಈ ಕುರಿತು ಪ್ರಸ್ತಾವಿಸಿದ್ದು, ನಮಗೆ ಯಾವುದೇ ಹುದ್ದೆ ಬೇಡ. ಆದರೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು
ತಿಳಿದು ಬಂದಿದೆ.
ಯುವಕರು ಪಕ್ಷಕ್ಕೆ ಬರುತ್ತಿಲ್ಲ. ಹೀಗಾಗಿ ಪಕ್ಷದ ಸದಸ್ಯತ್ವ ಅಭಿಯಾನ ಕೈಗೊಂಡು ಸಕ್ರಿಯವಾಗಿ ತೊಡಗಿಕೊಂಡು ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಬೇಕು ಎಂದು ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿಗೆ ದೇವೇಗೌಡರು ಕಿವಿಮಾತು ಹೇಳಿದರು ಎಂದು ಹೇಳಲಾಗಿದೆ.
ಈ ನಡುವೆ ಯುವ ಘಟಕಕ್ಕೆ ಪ್ರಜ್ವಲ್ ರೇವಣ್ಣ ಹೆಸರು ಕೇಳಿಬಂದಿದೆಯಾದರೂ ಪ್ರಸ್ತುತ ಆ ಹುದ್ದೆಯಲ್ಲಿ ನಿಖಿಲ್ ಕುಮಾರಸ್ವಾಮಿ ಇರುವುದರಿಂದ ಪಕ್ಷದ ಪ್ರಮುಖ ಹುದ್ದೆ ಪ್ರಜ್ವಲ್‌ಗೆ ಸಿಗಬಹುದು, ಇಲ್ಲವೇ ನಿಖೀಲ್‌ಗೆ ರಾಜ್ಯ ಘಟಕಕ್ಕೆ ಭಡ್ತಿ ನೀಡಿ ಪ್ರಜ್ವಲ್‌ಗೆ ಯುವ ಘಟಕ ಅಧ್ಯಕ್ಷ ಸ್ಥಾನ ನೀಡಬಹುದು ಎಂದು ಹೇಳಲಾಗುತ್ತಿದೆ.
ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವುದು ಮಾತ್ರ ನನ್ನ ಕೆಲಸ. ಯಾವುದೇ ಕೆಲಸ ಕೊಟ್ಟರೂ ಮಾಡುತ್ತೇನೆ. ಪಕ್ಷ ಸಂಘಟನೆ ವಿಚಾರದಲ್ಲಿ ದೇವೇಗೌಡರ ಜತೆ ಮಾತನಾಡಿದ್ದೇನೆ. ಹುದ್ದೆಯ ಅಗತ್ಯವಿಲ್ಲ, ಹುದ್ದೆಯ ಆಕಾಂಕ್ಷಿಯೂ ಅಲ್ಲ.
– ಪ್ರಜ್ವಲ್ ರೇವಣ್ಣ, ಜೆಡಿಎಸ್ ಸಂಸದ