Advertisement

ಬೆಂಗಳೂರಿನ ಮನೆಯಲ್ಲಿ ಪ್ರಜ್ವಲ್‌ ಮಹಜರು

12:35 AM Jun 11, 2024 | Team Udayavani |

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಸೋಮವಾರ ಬೆಂಗಳೂರಿನ ಬಸವನಗುಡಿಯ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು.

Advertisement

ಸೋಮವಾರ ಆರೋಪಿಯ ಎಸ್‌ಐಟಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಬೆಳಗ್ಗೆ 11.30ಕ್ಕೆ ಬಸವನಗುಡಿಯಲ್ಲಿರುವ ಎಚ್‌.ಡಿ.ರೇವಣ್ಣ ನಿವಾಸಕ್ಕೆ ಆರೋಪಿಯನ್ನು ಕರೆತಂದ ಎಸ್‌ಐಟಿ ಅಧಿಕಾರಿಗಳು, ಮಧ್ಯಾಹ್ನ 2.30ರ ವರೆಗೂ ಸ್ಥಳ ಮಹಜರು ಮಾಡಿದರು.

ಮನೆಯ ಯಾವ ಸ್ಥಳಗಳಲ್ಲಿ ಸಂತ್ರಸ್ತೆ ಮೇಲೆ ದೌರ್ಜನ್ಯ ನಡೆದಿದೆ ಎಂಬುದನ್ನು ಆರೋಪಿಯಿಂದಲೇ ಮಾಹಿತಿ ಪಡೆದುಕೊಂಡರು. ಈ ಹಿಂದೆ ಸಂತ್ರಸ್ತೆಯನ್ನು ಇದೇ ಮನೆಗೆ ಕರೆದೊಯ್ದು ತನ್ನ ಮೇಲೆ ಮನೆಯ ಯಾವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆಕೆ ತೋರಿಸಿದ್ದಳ್ಳೋ ಅಲ್ಲಿಗೆಲ್ಲ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಲಾಯಿತು. ಇದರ ಜತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪ್ರಜ್ವಲ್‌ನ ಬೆಡ್‌ ರೂಮ್‌ನಲ್ಲಿ ಕೆಲವು ಸಾಕ್ಷಿಗಳನ್ನು ಸಂಗ್ರಹಿಸಿದರು. ಈ ಎಲ್ಲ ಪ್ರಕ್ರಿಯೆಯನ್ನು ಚಿತ್ರೀಕರಿಸಿಕೊಳ್ಳಲಾಯಿತು. ಸಿಪಿಯು, ಮಾನಿಟರ್‌, ಕೀಬೋರ್ಡ್‌, ಪ್ರಿಂಟರ್ಸ್‌ ಮುಂತಾದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಮನೆಗೆ ತಂದಿದ್ದ ಎಸ್‌ಐಟಿ ಅಧಿಕಾರಿಗಳು, ಸ್ಥಳ ಮಹಜರು ಪ್ರಕ್ರಿಯೆಯನ್ನು ದಾಖಲಿಸಿಕೊಂಡರು.

ತುಳಸಿ ಕಟ್ಟೆ ಸುತ್ತುತ್ತಿದ್ದ ಭವಾನಿ
ಪ್ರಜ್ವಲ್‌ನನ್ನು ಸ್ಥಳ ಮಹಜರಿಗೆ ಕರೆ ತರುವುದಾಗಿ ಮೊದಲೇ ಭವಾನಿ ರೇವಣ್ಣನಿಗೆ ಸೂಚಿಸಿ, ಯಾವುದೇ ವಿಚಾರಕ್ಕೂ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಲಾಯಿತು. ಒಂದೆಡೆ ಮನೆಯ 3ನೇ ಮಹಡಿಯ ಆತನ ಬೆಡ್‌ ರೂಮ್‌ನಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿತ್ತು. ಇತ್ತ ಭವಾನಿ ರೇವಣ್ಣ 3ನೇ ಮಹಡಿಯ ತಮ್ಮ ಕೋಣೆಯ ಬಾಲ್ಕನಿಯಲ್ಲಿರುವ ತುಳಸಿ ಗಿಡಕ್ಕೆ ಪೂಜೆ ಮಾಡುತ್ತಿದ್ದರು. ಕೈಯಲ್ಲಿ ಊರುಗೋಲು ಹಿಡಿದುಕೊಂಡು ಭವಾನಿ ರೇವಣ್ಣ ತುಳಸಿ ಕಟ್ಟೆ ಸುತ್ತುತ್ತಿರುವುದು ಕಂಡು ಬಂತು.

ತಾಯಿ ಜತೆ ಮಾತಿಗೆ
ಅವಕಾಶ ಕೊಡಿ ಎಂದ ಪ್ರಜ್ವಲ್‌
ತಾಯಿಗೆ ಕಾಲು ನೋವಾಗಿದೆ. ಅವರನ್ನು ಮಾತನಾಡಿಸಲು ಅವಕಾಶ ಕೊಡಿ ಎಂದು ಪ್ರಜ್ವಲ್‌ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಎಸ್‌ಐಟಿ ಅಧಿಕಾರಿಗಳು, ತಾಯಿ ಮತ್ತು ಮಗನ ಮುಖಾಮುಖಿ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next