ಗುರು ದೇಶಪಾಂಡೆ ನಿರ್ಮಾಣದ ಚಿತ್ರವೊಂದರಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ ಮತ್ತು ಆ ಚಿತ್ರವನ್ನು ಗುರು ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಜಡೇಶ್ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹೊಸದೇನಲ್ಲ. ಸುದ್ದಿ ಹೊರಬಿದ್ದ ಸಂದರ್ಭದಲ್ಲಿ ಚಿತ್ರದ ಹೆಸರು ಪಕ್ಕಾ ಆಗಿರಲಿಲ್ಲ. “ಕುಂಭಕರ್ಣ’ ಅಥವಾ “ಐ ಆ್ಯಮ್ ಕುಂಬಿ’ ಎಂಬ ಹೆಸರುಗಳನ್ನು ಇಡಬಹುದು ಎಂದು ಹೇಳಲಾಗಿತ್ತು.
ಆದರೆ, ಈಗ ಆ ಎರಡರ ಬದಲಾಗಿ ಚಿತ್ರಕ್ಕೆ “ಜಂಟಲ್ಮನ್’ ಎಂಬ ಹೆಸರನ್ನು ಪಕ್ಕಾ ಮಾಡಲಾಗಿದೆ. ಅಷ್ಟೇ ಅಲ್ಲ, ಚಿತ್ರದ ಮುಹೂರ್ತ ನಾಳೆ ನಡೆಯಲಿದೆ. ಹೌದು, ನಾಳೆ ಪ್ರಜ್ವಲ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದಂದೇ ಚಿತ್ರವನ್ನು ಪ್ರಾರಂಭಿಸುವುದುಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ನಾಳೆ ಬೆಳಿಗ್ಗೆ ಬನಶಂಕರಿ ಎರಡನೇ ಹಂತದಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಚಿತ್ರಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ದರ್ಶನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲಿದ್ದಾರೆ.
ಚಿತ್ರ ಅಂದು ಪ್ರಾರಂಭವಾದರೂ, ಚಿತ್ರದ ಚಿತ್ರೀಕರಣ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಕಾರಣ ಚಿತ್ರಕ್ಕೆ ಇನ್ನೂ ನಾಯಕಿ ಮತ್ತು ಉಳಿದ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅಂದಹಾಗೆ, ಸ್ಲಿಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡು ಈ ಕಥೆ ಸಿದ್ಧವಾಗಿದೆ. ಜಡೇಶ್ ಅವರ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ.
“ಸಾಮಾನ್ಯವಾಗಿ ಮನುಷ್ಯ ದಿನವೊಂದಕ್ಕೆ ಏಳೆಂಟು ಗಂಟೆ ನಿದ್ದೆ ಮಾಡಿದರೆ, ಈ ಸಿಂಡ್ರೋಮ್‌ನಿಂದ ಬಳಲುತ್ತಿರುವವರು ಏಳೆಂಟು ಗಂಟೆ ಮಾತ್ರ ಎದ್ದಿದ್ದು, ಮಿಕ್ಕಂತೆ ಉಳಿದ ಕಾಲ ನಿದ್ದೆಗೆ ಜಾರಿರುತ್ತಾರೆ. ಎದ್ದಿರುವ ಸಮಯದಲ್ಲಿ ಅವರು ಏನೆಲ್ಲಾ ಮಾಡಬಲ್ಲರು ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಾಯಕ ಸಹ ಅಂಥದ್ದೇ ಒಂದು ಸಿಂಡ್ರೋಮ್‌ನಿಂದ ಬಳಲುತ್ತಿರುತ್ತಾನೆ. ಇಲ್ಲಿ ನಾಯಕನ ಪಾತ್ರವನ್ನು ಕುಂಭಕರ್ಣನನ್ನು ಮೂಲವಾಗಿಟ್ಟುಕೊಂಡು ಕಥೆ ಮಾಡಿದ್ದೇವೆ.
ಕುಂಭಕರ್ಣನನ್ನ ಎಬ್ಬಿಸೋದು ಕಷ್ಟ. ಎಬ್ಬಿಸಿದ ಮೇಲೆ ಹಿಡಿಯುವುದು ಕಷ್ಟ. ಇಲ್ಲಿ ನಾಯಕ ಎದ್ದಿರುವ ಏಳೆಂಟು ಗಂಟೆ ಸಮಯದಲ್ಲಿ ತನ್ನ ಎಲ್ಲಾ ಶಕ್ತಿ ಮತ್ತು ಬುದ್ಧಿಯನ್ನು ಹೇಗೆ ಪ್ರದರ್ಶನ ಮಾಡುತ್ತಾನೆ ಎನ್ನುವುದನ್ನು ಥ್ರಿಲ್ಲಿಂಗ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜಡೇಶ್. ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಕೆಲಸ ಶುರು ಮಾಡಿಕೊಂಡಿದ್ದಾರೆ. ಇನ್ನು ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.