ನಟ ಪ್ರಜ್ವಲ್ ದೇವರಾಜ್ ಈ ವಾರ “ಅಬ್ಬರ’ ಸಿನಿಮಾದ ಮೂಲಕ ಮತ್ತೂಮ್ಮೆ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಲುಕ್‌ನಲ್ಲಿ ಥಿಯೇಟರ್‌ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಹೌದು, “ಇನ್ಸ್‌ಪೆಕ್ಟರ್ ವಿಕ್ರಂ’ ನಂತರ ಪ್ರಜ್ವಲ್ ದೇವರಾಜ್ ಅಭಿನಯಿಸಿರುವ “ಅಬ್ಬರ’ ಮತ್ತೂಂದು ಮಾಸ್ ಸಿನಿಮಾವಾಗಿದ್ದು, ಈಗಾಗಲೇ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇಂದು “ಅಬ್ಬರ’ವನ್ನು ತೆರೆಗೆ ತರುತ್ತಿದೆ.
“ಸಿ. ಎಂ ಮೂವೀಸ್’ ಬ್ಯಾನರ್‌ನಡಿಯಲ್ಲಿ ಬಸವರಾಜ್ ಮಂಚಯ್ಯ ಹಿತ್ತಲ್‌ಪುರ ನಿರ್ಮಿಸಿರುವ “ಅಬ್ಬರ’ ಸಿನಿಮಾಕ್ಕೆ ಕೆ. ರಾಮ್ ನಾರಾಯಣ್ ನಿರ್ದೇಶನವಿದೆ. ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್‌ಗೆ ನಿಮಿಕಾ ರತ್ನಾಕರ, ಲೇಖಾ ಚಂದ್ರ, ರಾಜಶ್ರೀ ಪೊನ್ನಪ್ಪ ಮೂವರು ನಾಯಕಿಯರಾಗಿ ಜೋಡಿಯಾಗಿದ್ದಾರೆ.
ಉಳಿದಂತೆ ರವಿಶಂಕರ್, ಶೋಭರಾಜ್, ಉಮೇಶ್, ಶಂಕರ ಅಶ್ವಥ್, ಮೋಹನ್ ಜುನೇಜಾ, ವಿಜಯ್ ಚೆಂಡೂರ್, ಕೋಟೆ ಪ್ರಭಾಕರ್, ಅರಸು ಮಹಾರಾಜ್ ಹೀಗೆ ಬೃಹತ್ ಕಲಾವಿದರ ತಾರಾಗಣವೇ ಚಿತ್ರದಲ್ಲಿದೆ
ಇನ್ನು “ಅಬ್ಬರ’ದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತ ನಾಡುವ ನಟ ಪ್ರಜ್ವಲ್ ದೇವರಾಜ್, “ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಇರುವಂಥ ಸಿನಿಮಾ. ಆರಂಭದಿಂದ ಕೊನೆವರೆಗೂ ಸಿನಿಮಾ ಆಡಿಯನ್ಸ್ ಮುಖದಲ್ಲಿ ನಗು ತರುತ್ತದೆ. ಒಂದು ಫ್ಯಾಮಿಲಿ ಅಮ್ಯುಸ್ಮೆಂಟ್ ಪಾರ್ಕ್‌ಗೆ ಹೋದರೆ ಒಂದು ದಿನವಿಡೀ ಹೇಗೆ ಎಂಜಾಯ್ ಮಾಡುತ್ತಾರೋ, “ಅಬ್ಬರ’ ಸಿನಿಮಾ ನೋಡಿದರೂ ಅದೇ ರೀತಿ ಎಂಜಾಯ್ಮೆಂಟ್ ಸಿಗಲಿದೆ’ ಎನ್ನುತ್ತಾರೆ.
“ಈಗಾಗಲೇ ಬಿಡುಗಡೆಯಾಗಿರುವ ‘ಅಬ್ಬರ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. “ಅಬ್ಬರ’ ಎಂಬ ಹೆಸರಿಗೆ ತಕ್ಕಂತೆ ಥಿಯೇಟರ್‌ನಲ್ಲೂ ಸಿನಿಮಾ “ಅಬ್ಬರ’ವಾಗಿರಲಿದೆ. ಇಲ್ಲಿಯವರೆಗೆ ಕಾಣಿಸಿಕೊಂಡಿರದ ವಿಭಿನ್ನ ಪಾತ್ರ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗಿದೆ. ಪ್ರಜ್ವಲ್ ಅವರ ಡಿಫರೆಂಟ್ ಶೇಡ್ಸ್ ನೋಡಿ ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಹೊಸ ಕಂಟೆಂಟ್ ಇರುವ ಸಬ್ಜೆಕ್ಟ್ ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎಂಬುದು ನಿರ್ದೇಶಕ ರಾಮ್ ನಾರಾಯಣ್ ಭರವಸೆಯ ಮಾತು. “ಸಿನಿಮಾದ ಹೆಸರೇ “ಅಬ್ಬರ’, “ಅಬ್ಬರ’ ಅಂದ್ರೆ ಸಡನ್ ಆಗಿ, ತುಂಬಾ ರಿಚ್ ಆಗಿ ಬರೋದು . ನಮ್ಮ ಸಿನಿಮಾ ಕೂಡ ಹಾಗೇ ಇದೆ’ ಎಂಬುದು ನಿರ್ಮಾಪಕ ಬಸವರಾಜ್ ಅವರ ಅಚಲ ವಿಶ್ವಾಸ.
“ಅಬ್ಬರ’ ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜನೆಯಿದ್ದು, ಜೆ. ಕೆ ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಸಂಕಲನವಿದೆ. ಅಂದಹಾಗೆ, “ಅಬ್ಬರ’ ಇಂದು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ವಾಣಿ ಭಟ್ಟ