ಶಿವಮೊಗ್ಗ/ಹುಬ್ಬಳ್ಳಿ: ಉತ್ತಮ ಮುಂಗಾರಿಗಾಗಿ ಪ್ರಾರ್ಥಿಸಿ ರಾಜ್ಯ ಸರ್ಕಾರದಿಂದಲೇ ಪರ್ಜನ್ಯ ಹೋಮ ನಡೆಸುತ್ತಿರುವುದನ್ನು
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಶ್ಲಾಘಿಸಿದರೆ, ಹೋಮ ಮೂಲಕ ಮಳೆ ತರಿಸುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸ ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕಳೆದೆರಡು ವರ್ಷಗಳಿಂದ ಮಳೆ ಇಲ್ಲದೆ ಬರದಿಂದ ರಾಜ್ಯದ ಜನತೆ ಕಂಗೆಟ್ಟಿದ್ದ ಹಿನ್ನೆಲೆಯಲ್ಲಿ ಉತ್ತಮ ಮುಂಗಾರಿಗಾಗಿ ಪ್ರಾರ್ಥಿಸಿ ರಾಜ್ಯ ಸರ್ಕಾರದಿಂದಲೇ ಪರ್ಜನ್ಯ ಹೋಮ ನಡೆಸುತ್ತಿರುವುದನ್ನು
ಶ್ಲಾಘಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗಾಗಿ ಪ್ರಾರ್ಥಿಸಿ ಸರ್ಕಾರ ಹೋಮ- ಹವನ ನಡೆಸಲು ಮುಂದಾಗಿರುವುದನ್ನು ವೈಯಕ್ತಿಕವಾಗಿ ಸ್ವಾಗತಿಸುವುದಾಗಿ ಹೇಳಿದ ಈಶ್ವರಪ್ಪ, ತಾವು ನೀರಾವರಿ ಮಂತ್ರಿಯಾಗಿದ್ದ ವೇಳೆ ಮಳೆಗಾಗಿ ಶೃಂಗೇರಿ ಸಮೀಪದ ಕಿಗ್ಗಾ ಬಳಿ ಹೋಮ ನಡೆಸಲಾಗಿತ್ತು ಎಂದರು.
ಮಳೆ ತರಿಸುವ ಪ್ರಯತ್ನ ವಿಪರ್ಯಾಸ: ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರುವ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ನೀರಾವರಿ ಸಚಿವ ಎಂ.ಬಿ.ಪಾಟೀಲ ಹೋಮ ಮಾಡಿಸುವ ಮೂಲಕ ಮಳೆ ತರಿಸುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸ ಎಂದು ಹುಬ್ಬಳ್ಳಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ. ಪಾಟೀಲ ಅವರು 50 ಲಕ್ಷ ವೆಚ್ಚ ಮಾಡಿ ಕೇರಳದಿಂದ ಅರ್ಚಕರನ್ನು ಕರೆಸಿ ಮಳೆಗಾಗಿ ಹೋಮ ಮಾಡಿಸುತ್ತಿರುವುದನ್ನು ಗಮನಿಸಿದರೆ ಸರ್ಕಾರ ಮೂಢನಂಬಿಕೆಗಳನ್ನು ಎಷ್ಟರ ಮಟ್ಟಿಗೆ ನಂಬುತ್ತದೆ ಎಂಬುದು ದೃಢವಾಗುತ್ತದೆ ಎಂದರು. ಹೋಮ ಮಾಡಿಸುವುದರಿಂದ ಮಳೆಯಾ ಗುವುದಾದರೆ 3 ವರ್ಷಗಳಿಂದ ರಾಜ್ಯದಲ್ಲಿ ಬರಗಾಲ ತಲೆದೋರಿದ್ದರೂ, ಸರ್ಕಾರ ಹೋಮ ಮಾಡಿಸುವ ಮೂಲಕ ಮಳೆ ಏಕೆ ಬರಿಸಲಿಲ್ಲ ಎಂದು ಪ್ರಶ್ನಿಸಿದರು.