ಪ್ರಜಾರಾಜ್ಯ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿದೆ. ವೀರೇನ್ ಕ್ರಿಯೇಶನ್ಸ್ ನಡಿ ಡಾ. ವರದರಾಜು ಡಿ.ಎನ್ ನಿರ್ಮಿಸಿ, ವಿಜಯ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ವರದರಾಜು, “ನಾನು ವೈದ್ಯ. ನರರೋಗ ತಜ್ಞ. ಸಮಾಜದ ಕೆಲವು ವಿಷಯಗಳು ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಶಿಕ್ಷಣ ವ್ಯವಸ್ಥೆ, ಆರೋಗ್ಯ ಸಮಸ್ಯೆ ಹಾಗೂ ರೈತರ ಕಷ್ಟಕಾರ್ಪಣ್ಯಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಪೇಂದ್ರ ಅವರ “ಉಪೇಂದ್ರ’ ಚಿತ್ರ ನನಗೆ ಸ್ಫೂರ್ತಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹ ಈ ಚಿತ್ರಕ್ಕಿದೆ.ಪ್ರಜಾರಾಜ್ಯ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ಮಾಣ ಮಾಡಿದ್ದೇನೆ’ ಎಂದು ವಿವರ ನೀಡಿದರು.
ಚಿತ್ರದಲ್ಲಿ ಹಿರಿಯ ನಟರಾದ ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯತ್ ಕುಮಾರ್, ಸುಧಾ ಬೆಳವಾಡಿ, ಸಂಪತ್ ಮೈತ್ರೇಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
“ಈ ಚಿತ್ರದಲ್ಲಿ ನನ್ನದು ಆಟೋ ಡ್ರೈರ್ವ ಪಾತ್ರ. ನನಗೆ ತಪ್ಪು ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿ ಕೂಡ’ ಎಂದರು ನಟ ತಬಲನಾಣಿ. “ನನ್ನ ಮೇಲೆ ಭರವಸೆಯಟ್ಟು ಇಂತಹ ಉತ್ತಮ ಕಥೆಯುಳ್ಳ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಪೋ›ತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ವಿಜಯ್ ಭಾರ್ಗವ್.
ಚಿತ್ರದಲ್ಲಿ ನಟಿಸಿರುವ ಕೆ.ಜಿ.ಎಫ್ ತಾತ ಎಂದೆ ಖ್ಯಾತರಾಗಿರುವ ಕೃಷ್ಣೋಜಿರಾವ್ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಹಾಗೂ ನಿರ್ಮಾಣ ನಿರ್ವಾಹಕ ರವಿಶಂಕರ್ ಚಿತ್ರದ ಕುರಿತು ಮಾತನಾಡಿದರು.