ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರೈತರಿಗೆಂದೇ ಮಾಡಲಾದ ವಿಶೇಷ ಗೀತೆಯೊಂದನ್ನು “ಪ್ರಜಾರಾಜ್ಯ’ ಚಿತ್ರತಂಡ ಬಿಡುಗಡೆ ಮಾಡಿದೆ. “ಜಗದಲ್ಲಿ ರೈತನೆಂಬ ಬ್ರಹ್ಮ…’ ಎಂಬ ಸಾಲುಗಳಿಂದ ಶುರುವಾಗುವ ಈ ಗೀತೆಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ಶಂಕರ್ ಮಹದೇವನ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಇತ್ತೀಚೆಗೆ ಹಿರಿಯ ನಿರ್ದೇಶಕ ಟಿ. ಎಸ್ ನಾಗಾಭರಣ ಈ ಗೀತೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಮಾತನಾಡಿದ ಟಿ. ಎಸ್ ನಾಗಾಭರಣ, “ರೈತ ಗೀತೆಗಳು ನಮಗೆಲ್ಲ ಹೊಸದಲ್ಲ. ಕುವೆಂಪು ಮಾದರಿ ಕಲ್ಪಿಸಿ ಕೊಟ್ಟಿದ್ದಾರೆ. ಈ ಚಿತ್ರದ ರೈತಗೀತೆಯಲ್ಲಿ ಹೊಸದನ್ನು ಹುಟ್ಟುಹಾಕುವ ಪ್ರಯತ್ನವನ್ನು ನಾಗೇಂದ್ರ ಪ್ರಸಾದ್ ಚೆನ್ನಾಗಿ ಮಾಡಿದ್ದಾರೆ. ನಮ್ಮ ಮೂಲ ಸಂಸ್ಕೃತಿ ಜೊತೆ ಕೃಷಿ ಹೆಣೆಯಬೇಕು ಎನ್ನುವ ವಿಷಯವನ್ನು ಜನರಿಗೆ ತಲುಪಿಸುವ ಪ್ರಯತ್ನ ಈ ತಂಡ ಮಾಡಿದೆ. ಪ್ರಜೆಗಳಿಗೆ ಮುಖ್ಯವಾಗಿ ಇರಬೇಕಾದ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಹೊಸತನವನ್ನು ಹುಡುಕುತ್ತಾ ಬಂದಿರುವ ಈ ಸಿನಿಮಾ ಪ್ರಜೆಗಳಿಗೆ ತಲುಪಬೇಕು’ ಎಂದರು.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ಡಾ. ವರದರಾಜು ಡಿ. ಎಸ್ ಮಾತನಾಡಿ, “ನಾನು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ನನ್ನ ಮೂಲ ಕೃಷಿ. ಇಂದು ದೇಶ ಕಾಪಾಡತ್ತ ಇರೋದು ಕೃಷಿ ಹಾಗೂ ರೈತ. ಆ ರೈತರಿಗೆ ಈ ಸಾಂಗ್ ಸಮರ್ಪಣೆ. ಹಾಗಾಗಿ ನಾವು ಈ ಗೀತೆಯನ್ನು ರೈತರ ಹಬ್ಬವಾದ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಪ್ರಜಾಪ್ರಭುತ್ವ ಮರೆತಿರುವುದು ನಮ್ಮ ಸಾಧನೆ. ಹಾಗಾಗಿ ಅದನ್ನು ನೆನಪು ಮಾಡುವುದಕ್ಕೆ ಈ ಸಿನಿಮಾ ಮಾಡಲಾಗಿದೆ’ ಎಂದರು.
ಚಿತ್ರದ ನಿರ್ದೇಶಕ ವಿಜಯ್ ಭಾರ್ಗವ, ಹಿರಿಯ ನಟ ಚಿಕ್ಕ ಹೆಜ್ಜಾಜಿ ಮಹಾದೇವ, ವಿತರಕ ವೆಂಕಟ್ ಮೊದಲಾದವರು ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ವಿಜೇತ ಮಂಜಯ್ಯ ಸಂಗೀತ, ರಾಕೇಶ್ ತಿಲಕ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ನಿರ್ಮಾಪಕ ವರದರಾಜು ಹಾಗೂ ನಿರ್ದೇಶಕ ವಿಜಯ್ ಭಾರ್ಗವ, ದಿವ್ಯಾ ಗೌಡ, ದೇವರಾಜ್, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ತಬಲಾ ನಾಣಿ, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ “ಪ್ರಜಾರಾಜ್ಯ’ ಚಿತ್ರ ಇದೇ ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.