ರಾಮನಾಥಪುರ: ಜೀವನದಿ ಕಾವೇರಿ ಸ್ವಚ್ಛತೆ ಹಾಗೂ ನದಿ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ರಾಷ್ಟ್ರದ ಪವಿತ್ರ ನದಿಗಳನ್ನು ರಾಷ್ಟ್ರೀಕರಣಗೊಳಿಸಿ ನದಿ ಸಂರಕ್ಷಣೆಗೆ ಕೇಂದ್ರ ಹಾಗೂ ಸರ್ಕಾರದ ಗಮನ ಸೆಳೆಯಲು ರಾಮನಾಥಪುರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕಾವೇರಿ ನದಿ ಮಹಾ ಅರತಿ ಪೂಜೆ ಬಹಳ ಮಹತ್ವವಾಗಿದೆ ಎಂದು ನಿವೃತ್ತ ಅಧಿಕಾರಿ ಬಿ.ಎನ್. ಬೋರೇಗೌಡ ತಿಳಿಸಿದರು.
ಕಾವೇರಿ ನದಿಗೆ ಆರತಿ: ರಾಮನಾಥಪುರ ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿಯಿಂದ ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ಸುತ್ತ ಹಾಗೂ ಕಾವೇರಿ ನದಿ ದಂಡೆ ಯಲ್ಲಿ ಸ್ವಚ್ಛತೆ ಮಾಡಿದ ನಂತರ ನಡೆದ ಕಾವೇರಿ ನದಿ ವಹ್ನಿ ಪುಷ್ಕರಣಿಯಲ್ಲಿ ಹುಣ್ಣಿಮೆಯ 40 ನೇಯ ಕಾವೇರಿ ನದಿ ಆರತಿ ಪೂಜೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನ ಎಂದು ಕೆಲವು ಸಂಘ ಸಂಸ್ಥೆಗಳು ಕಾಟಾಚಾರಕ್ಕೆ ಕಸ ಗುಡಿಸುವ ಪೊರಕೆ ಹಿಡಿದು ಪೋಟೋ ತೆಗೆಸಿಕೊಳ್ಳುತ್ತಾರೆ. ಅದರೆ ರಾಮನಾಥಪುರದ ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ವತಿಯಿಂದ ಪ್ರತಿ ಹುಣ್ಣಿಮೆಯ ದಿನ ಸ್ವಚ್ಛತೆ ಕಾರ್ಯ ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಗಣ್ಯರ ಉಪಸ್ಥಿತಿ: ಸಮಾಜ ಸೇವಕ ಚನ್ನರಾಯ ಪಟ್ಟಣ ತಾಲೂಕು ಬಿಳಗುಲಿ ಗ್ರಾಮದ ಮಾಜಿ ಸೈನಿಕ ಎಸ್.ಅರ್. ದೊರೆ, ರಾಮನಾಥಪುರದ ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ಜಿಲ್ಲಾ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು.
ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ಜಿಲ್ಲಾ ಖಜಾಂಚಿ ರಘು, ತಾಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಕಾಳಬೋವಿ ಸದಸ್ಯ ರಾದ ಬಳಗುಲಿ ಭರತ್, ಶಿಲ್ಪ, ನಂದಿತಾ, ಭಾಗಮ್ಮ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.