ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸತತ 4ನೇ ಬಾರಿ ಜಯಗಳಿಸಿ ಕೇಂದ್ರದ ಸಚಿವರಾಗಿದ್ದ ಅನಂತಕುಮಾರ ಅವರ ಸ್ಥಾನ ತುಂಬಲಿದ್ದಾರೆ ಎಂದು ಬಿಜೆಪಿ ಧುರೀಣೆ ಹಾಗೂ ಚಿತ್ರನಟಿ ತಾರಾ ಅನುರಾಧಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ ಜೋಶಿ ಕೈಗೊಂಡ ಅಭಿವೃದ್ಧಿ ಕಾರ್ಯ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಸಂಸತ್ತಿನಲ್ಲಿ ಅವರು ಸಕ್ರಿಯರಾಗಿ ಕ್ಷೇತ್ರದ ಅಭಿವೃದ್ಧಿ ಚರ್ಚೆಯಲ್ಲಿ ಪಾಲ್ಗೊಳ್ಳುವ ದೇಶದ 7ನೇ ಸಂಸತ್ ಪಟು ಎಂಬ ಶ್ರೇಯಸ್ಸು ಹೊಂದಿದ್ದಾರೆ ಎಂದರು.
ಜೋಶಿ ಸಾತ್ವಿಕರಾಗಿದ್ದು, ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ, ಎಫ್‌ಐಆರ್ ದಾಖಲಾಗಿಲ್ಲ. ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷ್ಯನಾಶ, ಸಾಕ್ಷಿಗಳ ಮೇಲೆ ಒತ್ತಡ ಹಾಕಿದ ಆರೋಪ ಹೊತ್ತಿರುವ ವಿನಯ ಕುಲಕರ್ಣಿ ಸೋಲು ಖಚಿತ ಎಂದರು. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಜನಪರ ಯೋಜನೆಗಳಿಂದ ದೇಶದ ಜನರು ಮತ್ತೂಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದರು.
ಅನಂತಕುಮಾರ ಪತ್ನಿ ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೇಟ್ ನೀಡಬೇಕಿತ್ತು. ಅವರಿಗೆ ಯಾಕೆ ಟಿಕೆಟ್ ನೀಡಲಿಲ್ಲವೋ ನನಗೆ ಗೊತ್ತಿಲ್ಲ. ಈ ಕುರಿತು ಪಕ್ಷದ ವರಿಷ್ಠರು ಉತ್ತರಿಸುತ್ತಾರೆ ಎಂದರು.
ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವುದು ಸರಿಯಲ್ಲ. ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಇತಿಹಾಸವಿರುತ್ತದೆ. ಅದನ್ನು ನಾವು ಗೌರವಿಸಬೇಕು. ಇದನ್ನು ತಾರತಮ್ಯ ಎನ್ನಲು ಸಾಧ್ಯವಿಲ್ಲ. ಕೇರಳದ ಎಷ್ಟೋ
ಮಂದಿರಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಯಾವುದೇ ಪುರುಷರು ಈ ಬಗ್ಗೆ ತಕರಾರು ಮಾಡಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮುಖಂಡರಾದ ನಾಗೇಶ ಕಲಬುರ್ಗಿ, ಈರಣ್ಣ ಜಡಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ಗೋಪಾಲ ಬದ್ದಿ, ನರೇಂದ್ರ ಕುಲಕರ್ಣಿ, ರಾಘವೇಂದ್ರ ರಾಮದುರ್ಗ ಮೊದಲಾದವರಿದ್ದರು.
ದೇಶ ಲೂಟಿ ಮಾಡಿದ ಪಕ್ಷಕ್ಕೆ ಬುದ್ಧಿ ಕಲಿಸಿ
ಹುಬ್ಬಳ್ಳಿ: ಕುತಂತ್ರದಿಂದ ಮತ ರಾಜಕೀಯ ಮಾಡುತ್ತ ದೇಶ ಲೂಟಿ ಮಾಡಿರುವ ಪಕ್ಷಕ್ಕೆ ಬುದ್ಧಿ ಕಲಿಸಬೇಕೆಂದು ಬಿಜೆಪಿ ಮುಖಂಡ ಶಂಕರಣ್ಣ ಮುನವಳ್ಳಿ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಕೋಟಿಲಿಂಗೇಶ್ವರ ನಗರ, ಡಾಲರ್ಸ್ ಕಾಲೊನಿ, ಇಂದ್ರಪ್ರಸ್ಥನಗರ, ನಾಗಲಿಂಗ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು. ರಾಘವೇಂದ್ರ ರಾಮದುರ್ಗ, ರವಿ ಬಂಕಾಪುರ, ನರೇಂದ್ರ ಕುಲಕರ್ಣಿ, ಎಸ್.ಕೆ.ಕೊಟರೇಶ, ಶಿವಾನಂದ ಭಟ್, ಬಲಭೀಮ ಪೋದ್ದಾರ, ಶಿವರುದ್ರಪ್ಪ ಬಡಿಗೇರ, ಅಕ್ಕಮಹಾದೇವಿ ಬಾಗೇವಾಡಿ, ವಿದ್ಯಾಧರ ಹುರಕಡ್ಲಿ ಮೊದಲಾದವರು ಇದ್ದರು.
ಜೋಶಿ ಪರ ಇಂದು ಯಡಿಯೂರಪ್ಪ ಪ್ರಚಾರ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏ.11ರಂದು ಸಂಜೆ 5:30 ಗಂಟೆಗೆ ಗಾಮನಗಟ್ಟಿಯಲ್ಲಿ ಪಕ್ಷದ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಸಂಜೆ 6:45 ಗಂಟೆಗೆ ಧಾರವಾಡ ತಾಲೂಕು ಅಮ್ಮಿನಭಾವಿಯಲ್ಲಿ ನಡೆಯುವ ವಿಜಯ ಸಂಕಲ್ಪ ಸಮಾವೇಶದಲ್ಲೂ ಯಡಿಯೂರಪ್ಪ ಪಾಲ್ಗೊಳ್ಳಲಿದ್ದು, ಶಾಸಕರಾದ ಜಗದೀಶ ಶೆಟ್ಟರ, ಅಮೃತ ದೇಸಾಯಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗೂ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.