Advertisement

“ಆಸನಕ್ಕಾಗಿ’ಸಾಧ್ವಿ ಪ್ರಜ್ಞಾ ಸಿಂಗ್‌-ಸ್ಪೈಸ್‌ಜೆಟ್‌ ನಡುವೆ ಚಕಮಕಿ

10:19 AM Dec 23, 2019 | Sriram |

ನವದೆಹಲಿ: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಮತ್ತು ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ನಡುವೆ ಶನಿವಾರ ಚಕಮಕಿ ನಡೆದಿದೆ. ಪರಿಣಾಮ ವಿಮಾನದ ಸಂಚಾರ 45 ನಿಮಿಷ ತಡವಾಗಿದೆ. ತಾನು ಮುಂಚೆಯೇ ನಿಗದಿಪಡಿಸಿದ್ದ ಆಸನವನ್ನು ಸ್ಪೈಸ್‌ಜೆಟ್‌ ಸಿಬ್ಬಂದಿ ನೀಡಿಲ್ಲ ಎಂದು ಸಾಧ್ವಿ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ, ಸಾಧ್ವಿ ಗಾಲಿಕುರ್ಚಿಯಲ್ಲಿದ್ದರು. ಅಂತಹ ಪ್ರಯಾಣಿಕರಿಗೆ ತುರ್ತು ವಿಭಾಗಕ್ಕೆ ಬರುವ ಮೊದಲನೇ ಆಸನವನ್ನು ನೀಡುವುದು ಅಸಾಧ್ಯ ಎಂದು ಸ್ಪಷ್ಟೀಕರಣ ನೀಡಿದೆ.

Advertisement

ಆಗಿದ್ದೇನು?:
ಸಾಧ್ವಿ ಪ್ರಜ್ಞಾ ಸಿಂಗ್‌, ದೆಹಲಿಯಿಂದ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ಗೆ ಸ್ಪೈಸ್‌ಜೆಟ್‌ ವಿಮಾನದಲ್ಲಿ ಶನಿವಾರ ಪ್ರಯಾಣಿಸಿದ್ದರು. ಈ ವೇಳೆ ತುರ್ತು ವಿಭಾಗದಲ್ಲಿ ಬರುವ, ಮೊದಲನೇ ಸಾಲಿನ 1ಎ ಆಸನವನ್ನು ನಿಗದಿಪಡಿಸಿದ್ದರು. ಆದರೆ ಸಾಧ್ವಿ ತಮ್ಮದೇ ಖಾಸಗಿ ಗಾಲಿಕುರ್ಚಿಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದು ತಿಳಿಯುತ್ತಿದ್ದಂತೆ ಸಾಧ್ವಿಗೆ ಸುರಕ್ಷತಾ ಕಾರಣಕ್ಕೆ ತುರ್ತು ಸಾಲಿನ ಆಸನವನ್ನು ನಿರಾಕರಿಸಲಾಯಿತು. ಅದಕ್ಕೆ ಸಂಸದೆ ಒಪ್ಪಲಿಲ್ಲ. ಈ ಹಂತದಲ್ಲಿ ನಿಯಮಗಳನ್ನು ತೋರಿಸಿದ ನಂತರ ಸಾಧ್ವಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ನಂತರ ಅವರಿಗೆ 2ಎ/ಬಿ ಆಸನ ನೀಡಲಾಗಿದೆ. ಈ ಗಲಾಟೆಯ ಕಾರಣ ಬೇಸತ್ತ ಪ್ರಯಾಣಿಕರು, ಪ್ರಜ್ಞಾ ಸಿಂಗ್‌ರನ್ನು ವಿಮಾನದಿಂದ ಕೆಳಕ್ಕಿಳಿಸುವಂತೆ ಮನವಿ ಮಾಡಿದ್ದಾರೆ ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next