ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ನಾಗಿದ್ದ ಗ್ಯಾಂಗ್‌ಸ್ಟರ್ ದಿ. ಇಕ್ಬಾಲ್ ಮಿರ್ಚಿಯೊಂದಿಗೆ ಹೊಂದಿದ್ದಾರೆ ಎನ್ನಲಾದ ವ್ಯವಹಾರಕ್ಕೆ ಸಂಬಂಧಿಸಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್, ತಾವು ಯಾವುದೇ ವ್ಯವಹಾರ ವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ, ಕೆಲವು ಮಾಧ್ಯಮ ಗಳಲ್ಲಿ ಬಂದಿದ್ದ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.
ಮಿರ್ಚಿಯ ಕಾನೂನುಬಾಹಿರ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಕುರಿತಂತೆ, ಜಾರಿ ನಿರ್ದೇ ಶನಾಲಯ (ಇ.ಡಿ.) ನಡೆಸುತ್ತಿರುವ ತನಿಖೆಯಲ್ಲಿ ಪ್ರಫುಲ್ ಪಟೇಲ್ ಹೆಸರು ಕೇಳಿಬಂದಿದೆ. ಜತೆಗೆ, ಮಿರ್ಚಿ, 2013ರಲ್ಲಿ ನಿಧನನಾಗಿದ್ದಾನೆ. ಪಟೇಲ್ ಕುಟುಂಬವು ನಡೆಸಿದ್ದ ಒಂದು ಆಸ್ತಿ ಖರೀದಿ ಪ್ರಕ್ರಿಯೆಯಲ್ಲಿ ಮಿರ್ಚಿಯ ಪತ್ನಿ ಹಜ್ರಾ ಮೆಮನ್ ಅವರ ಪಾತ್ರವಿದೆ ಎಂದು ವರದಿಗಳಲ್ಲಿ ಉಲ್ಲೇಖೀಸಲಾಗಿತ್ತು.
ಇ.ಡಿ. ಹೇಳ್ಳೋದೇನು? ಪ್ರಫುಲ್ ಪಟೇಲ್ ಮಾಲೀಕತ್ವದ ಮಿಲೇನಿಯಂ ಡೆವಲಪರ್ಸ್ ಕಂಪೆನಿಯು, 2007ರಲ್ಲಿ ಮುಂಬಯಿನ ಹಾಜ್ರಾದಲ್ಲಿರುವ ಸೀಜಯ್ ಹೌಸ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿನ ಎರಡು ಮಹಡಿಗಳನ್ನು ಮಿರ್ಚಿ ಕುಟುಂಬಕ್ಕೆ ಹಸ್ತಾಂತರಿಸಿದೆ. ಈ ಅಪಾರ್ಟ್‌ಮೆಂಟ್ ಕಟ್ಟಿರುವ ಭೂಮಿಯನ್ನು ಕೊಳ್ಳುವ ವ್ಯವಹಾರದಲ್ಲಿ ಮಿರ್ಚಿ ಕುಟುಂಬವೂ ಭಾಗಿಯಾಗಿದ್ದು, ವ್ಯಾವಹಾರಿಕ ಒಪ್ಪಂದವಾಗಿ ಆ ಎರಡು ಮಹಡಿಗಳನ್ನು ಮಿರ್ಚಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ.
ಪಟೇಲ್ ಉತ್ತರ: ಇ.ಡಿ. ಆರೋಪಗಳನ್ನು ತಳ್ಳಿ ಹಾಕಿರುವ ಪಟೇಲ್, “”ಮಿಲೇನಿಯಂ ಡೆವಲ ಪರ್ಸ್ ಕಂಪೆನಿಯನ್ನು ನನ್ನ ಕುಟುಂಬದವರೇ ನಿರ್ವ ಹಿಸುತ್ತಿದ್ದಾರೆ. ನಮ್ಮ ಕಂಪೆನಿಯಲ್ಲಿ ಮಿರ್ಚಿ ಸೇರಿದಂತೆ ಯಾರೂ ಪಾಲುದಾರರಾಗಿಲ್ಲ, ಒಂದು ನಯಾ ಪೈಸೆಯಷ್ಟು ಆಸ್ತಿಯನ್ನು ಮಿರ್ಚಿ ಪತ್ನಿ ಹಾಜ್ರಾ ಮೆಮನ್‌ರಿಗೆ ನೀಡಿಲ್ಲ” ಎಂದಿದ್ದಾರೆ.