ಹೊಸದಿಲ್ಲಿ : ಇಲ್ಲಿನ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್ ನ ಎರಡನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನ ನ ಕೊಲೆ ಆರೋಪಿಯಾಗಿರುವ 17ರ ಹರೆಯದ ಇದೇ ಶಾಲೆಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ವಯಸ್ಕನಂತೆ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುವುದು.
ಗುರುಗ್ರಾಮ ನ್ಯಾಯಾಲಯ ಕಳೆದ ವಾರ ಕೊಲೆ ಆರೋಪಿ ಬಾಲಕನ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ್ದ ಸಂದರ್ಭದಲ್ಲಿ ಪ್ರದ್ಯುಮ್ನನ ಹೆತ್ತವರು ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಗುರಿಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಇಂದು ಬುಧವಾರ ಗುರುಗ್ರಾಮದಲ್ಲಿನ ಬಾಲಾಪರಾಧ ನ್ಯಾಯ ಮಂಡಳಿಯು ಪ್ರದ್ಯುಮ್ನನ ಕೊಲೆ ಕೇಸನ್ನು ಇಲ್ಲಿನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿತು. ಆ ಪ್ರಕಾರ ಈ ಕೊಲೆ ಕೇಸಿನ ವಿಚಾರಣೆ ಇದೇ ಶುಕ್ರವಾರ ಆರಂಭವಾಗಲಿದೆ.
ಕೊಲೆ ಆರೋಪಿ ಬಾಲಕನನ್ನು ವಯಸ್ಕನಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸುವ ನಿರ್ಧಾರವನ್ನು ಪ್ರದ್ಯುಮ್ನನ ತಂದೆ ವರುಣ್ ಠಾಕೂರ್ ಸ್ವಾಗತಿಸಿದ್ದಾರೆ.
ಎರಡನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನನ ಶವ ಕುತ್ತಿಗೆ ಕೊಯ್ಯಲ್ಪಟ್ಟ ಸ್ಥಿತಿಯಲ್ಲಿ ಶಾಲೆಯ ಶೌಚಾಲಯದಲ್ಲಿ ಕಳೆದ ಸೆ.8ರಂದು ಪತ್ತೆಯಾಗಿತ್ತು.
ಶಾಲೆ ಪರೀಕ್ಷೆಗಳು ಮುಂದಕ್ಕೆ ಹೋಗಬೇಕೆನ್ನುವ ಅಪೇಕ್ಷೆಯಲ್ಲಿ ಶಾಲೆಯ 11ನೇ ತರಗತಿಯ ಶಂಕಿತ ವಿದ್ಯಾರ್ಥಿಯು ಪ್ರದ್ಯುಮ್ನನನ್ನು ಕೊಂದಿದ್ದ ಆಘಾತಕಾರಿ ವಿಷಯವು ತನಿಖೆಯಲ್ಲಿ ಬಹಿರಂಗವಾಗಿತ್ತು.