ಸಿಡ್ನಿ: ಮಹತ್ವದ ಭಾರತ- ಆಸ್ಟ್ರೇಲಿಯಾ ದ್ವಿಪಕ್ಷೀಯ ಸರಣಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆಸೀಸ್ ನೆಲದಲ್ಲಿರುವ ಟೀಂ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ರವಿವಾರ ಟೀಂ ಇಂಡಿಯಾ ಇನ್ಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯವಾಡಿದೆ.
ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಎರಡು ತಂಡಗಳನ್ನು ಮಾಡಿ ಪಂದ್ಯವಾಡಿದ್ದು, ತಂಡಗಳಿಗೆ ಕ್ರಮವಾಗಿ ಸಿಕೆ ನಾಯ್ಡು ಇಲೆವೆನ್ ಮತ್ತು ರಂಜಿತ್ ಸಿನ್ಹಾಜಿ ಇಲೆವೆನ್ ಎಂದು ಹೆಸರಿಡಲಾಗಿತ್ತು.
40 ಓವರ್ ಗಳ ಪಂದ್ಯ ಇದಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ರಾಹುಲ್ ನಾಯಕತ್ವದ ರಂಜಿತ್ ಸಿನ್ಹಾಜಿ ಇಲೆವೆನ್ ತಂಡ 235 ರನ್ ಗಳಿಸಿತು. ಶಿಖರ್ ಧವನ್ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿದರು. ನಾಯಕ ಕೆ ಎಲ್ ರಾಹುಲ್ 66 ಎಸೆತಗಳಿಂದ 83 ರನ್ ಬಾರಿಸಿ ತನ್ನ ಐಪಿಎಲ್ ಫಾರ್ಮ್ ಅನ್ನು ಮುಂದುವರಿಸಿದರು.
ಇದನ್ನೂ ಓದಿ:ಆಸೀಸ್ ಸರಣಿಗೆ ಪೂರ್ತಿ ಫಿಟ್: ರೋಹಿತ್ ಶರ್ಮಾ ವಿಶ್ವಾಸ
ಸಿಕೆ ನಾಯ್ಡು ಇಲೆವೆನ್ ತಂಡದಲ್ಲಿ ಶುಭ್ಮನ್ ಗಿಲ್ ಮತ್ತು ಪ್ರಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿದರು. ನಾಯಕ ವಿರಾಟ್ ಕೊಹ್ಲಿ ಕೇವಲ 58 ಎಸೆತಗಳಲ್ಲಿ 91 ರನ್ ಬಾರಿಸಿ ಮುಂಚಿದರು. ಇವರ ಬ್ಯಾಟಿಂಗ್ ಸಹಾಯದಿಂದ ಸಿಕೆ ನಾಯ್ಡು ಇಲೆವೆನ್ ಇನ್ನೂ 26 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು.
ಭಾರತ- ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯ ನವೆಂಬರ್ 27ರಂದು ಸಿಡ್ನಿಯಲ್ಲಿ ನಡೆಯಲಿದೆ. ಸರಣಿಯಲ್ಲಿ ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದೆ.