Advertisement

ಕುವೆಂಪು ಅವರ ಶಿಷ್ಯ ಪ್ರೊ.ಪ್ರಭುಶಂಕರ್‌ ನಿಧನ

07:15 AM Apr 09, 2018 | |

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಪರಮ ಶಿಷ್ಯ ರಾಗಿದ್ದ ಸಾಹಿತಿ ಪ್ರೊ.ಕೆ.ಪ್ರಭುಶಂಕರ್‌ (89) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ನಗರದ ಒಂಟಿಕೊಪ್ಪಲಿನ ಶ್ರೀರಾಮಕೃಷ್ಣ ಆಶ್ರಮ ಸಮೀಪದ ಶ್ರೀವರ ವಸತಿ ಗೃಹದಲ್ಲಿ ವಾಸವಿದ್ದ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.

Advertisement

1929ರ ಫೆಬ್ರವರಿ 15ರಂದು ಜನಿಸಿದ ಅವರು, ಪ್ರಥಮ ರ್‍ಯಾಂಕ್‌ ಮತ್ತು ಚಿನ್ನದ ಪದಕ ದೊಂದಿಗೆ ಬಿ.ಎ ಆನರ್ಸ್‌ ಪಡೆದಿದ್ದರು. ಎಂ.ಎ. ಪದವಿ ಯಲ್ಲೂ ಪ್ರಥಮ ರ್‍ಯಾಂಕ್‌ ನೊಂದಿಗೆ ಚಿನ್ನದ ಪದಕ ಪಡೆದಿದ್ದರು. ಪ್ರಭುಶಂಕರ ಅವರು, ಎಂ.ಎ, ಪಿಎಚ್‌.ಡಿ ಪದವಿ ನಂತರ ಮೈಸೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, 14 ವರ್ಷಗಳ ಕಾಲ ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಜತೆಗೆ ಬನಾರಸ್‌ ಹಿಂದೂ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕ, ಮಂಗಳೂರು ವಿವಿ ಸಂದರ್ಶಕ ಪ್ರಾಧ್ಯಾಪಕ , ಸ್ವಾಮಿ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರುರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಸಂದಿವೆ. ಕನ್ನಡದಲ್ಲಿ ಭಾಗಗೀತೆ, ದರ್ಶನ ವಿಮರ್ಶೆ, ಕಾವ್ಯಯೋಗ, ಖಲೀಲ್‌ ಗಿಬ್ರಾನ್‌,ಸಾಹಿತ್ಯ ಮತ್ತು
ಆಧುನಿಕತೆ, ಕಾವ್ಯ ಸೃಷ್ಟಿಯ ಸ್ವರೂಪ, ಶ್ರೀಸಾಮಾನ್ಯರ ಶ್ರೀರಾಮಾಯಣ ದರ್ಶನಂ, ಅಂಗುಲೀಮಾಲ ಕೃತಿಗಳನ್ನು
ರಚಿಸಿದ್ದಾರೆ. ಜತೆಗೆ ಅಂಗುಲೀಮಾಲ, ಅಮ್ರಪಾಲಿ, ಸುಜಾತ, ಗಾಳಿ ಎಂಬ ಕುದುರೆಯೇರಿ, ಗೋರಿಗೊಂದು ಹಾಡು ಮೊದಲಾದ ನಾಟಕಗಳನ್ನೂ ರಚಿಸಿದ್ದಾರೆ.

ಪ್ರಭುಶಂಕರ್‌ ಅವರಿಗೆ ಇಬ್ಬರು ಹೆಣ್ಣುಮಕ್ಕಳು.ನಿವೇದಿತಾ ಹಾಗೂ ಅಶಿತಾ. ಪತ್ನಿ ಡಾ.ಶಾಂತಾ ಅವರು 1995ರಲ್ಲಿಯೇ ನಿಧನರಾಗಿದ್ದಾರೆ. ಸೋಮವಾರ ಪ್ರಭುಶಂಕರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರಭುಶಂಕರರ ಜತೆಗೆ ನನ್ನದು 50 ವರ್ಷಗಳ ಒಡನಾಟ. ದೊಡ್ಡ ಮಾನವತಾವಾದಿ,ಹೃದಯವಂತ, ಕನ್ನಡದ ಧೀಮಂತ ಸಾಹಿತಿಯನ್ನು ಕಳೆದು ಕೊಂಡಿದ್ದೇವೆ. ಶನಿವಾರ ರಾತ್ರಿ ಅವರನ್ನು ಭೇಟಿ ಮಾಡಿದ್ದೆ, ಯಾರನ್ನೂ ಗುರುತು ಹಿಡಿಯುತ್ತಿರಲಿಲ್ಲ. ಅವರನ್ನು ಕಳೆದುಕೊಂಡಿದ್ದಕ್ಕೆ ಬಹಳ ದುಃಖ ಆಗುತ್ತಿದೆ.
– ಶಿವಪ್ಪ ಕೆ.ಸಿ., ಬೆಂಗಳೂರು ವಿವಿಯ
ಪ್ರಸಾರಾಂಗದ ನಿವೃತ್ತ ನಿರ್ದೇಶಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next