Advertisement

ಬ್ರೈಲ್‌ ಲಿಪಿಯಲ್ಲಿ ಪ್ರಭುಲಿಂಗ ಲೀಲೆ

01:34 PM Apr 08, 2017 | |

ಧಾರವಾಡ: ಸಂಸ್ಕೃತ, ಮರಾಠಿ, ತಮಿಳು, ತೆಲಗು ಭಾಷೆಗಳಿಗೆ ಅನುವಾದ ಆಗಿರುವ ಶೂನ್ಯಪೀಠದ ಅಲ್ಲಮಪ್ರಭು ದೇವರ ಜೀವನ ಚರಿತ್ರೆ ಒಳಗೊಂಡ ಚಾಮರಸ ವಿರಚಿತ ಪ್ರಭುಲಿಂಗಲೀಲೆ ಈಗ ಬ್ರೈಲ್‌ ಲಿಪಿಗೆ ತುರ್ಜುಮೆಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

Advertisement

ಈ ಹಿಂದೆ ಬಸವಣ್ಣನವರ 108 ವಚನಗಳನ್ನು ಆಯ್ಕೆ ಮಾಡಿ ಅವುಗಳಿಗೆ ಭಾವಾರ್ಥ ಬರೆದು “ಒಳಗಣ್ಣಿಗೊಂದು ಬೆಳಕು’ ಶೀರ್ಷಿಕೆಯಿಂದ ಬ್ರೈಲ್‌ಲಿಪಿನಲ್ಲಿ ಮುದ್ರಿಸಿದ್ದ ಧಾರವಾಡದ ಸಹನಾ ಅಂಗವಿಕಲರ ಸೇವಾ ಪತಿಷ್ಠಾನವು ಈಗ “ಪ್ರಭುಲಿಂಗ ಲೀಲೆ’ಯನ್ನು ಕೇವಲ ಒಂದು ತಿಂಗಳಲ್ಲಿ ಬ್ರೈಲ್‌ ಲಿಪಿಗೆ ತರ್ಜುಮೆಗೊಳಿಸಿ, ಏ.9ರಂದು ಮನಗುಂಡಿಯ ಶ್ರೀಗುರುಬಸವ ಮಹಾಮನೆಯ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಿದೆ. 

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಿಂದ 1976 ರಲ್ಲಿ ಡಾ| ಎಂ.ಎಸ್‌.ಸುಂಕಾಪುರ ಅವರ ಸಂಪಾದಕತ್ವದಲ್ಲಿ ಕವಿ ಚಾಮರಸ ವಿರಚಿತ ಪ್ರಭುಲಿಂಗಲೀಲೆ ಬಿಡುಗಡೆ ಆಗಿದ್ದು, ಇದು ಅಲ್ಲಮಪ್ರಭುಗಳ ಜೀವನ ಚರಿತ್ರೆಯನ್ನು 25 ಕಂದಕಗಳಲ್ಲಿ ವಿಂಗಡಿಸಿದೆ.

ಹಳೆಗನ್ನಡದಿಂದ ಕೂಡಿರುವ ಒಟ್ಟು 1113 ದಿಗಳು ಇಲ್ಲಿದ್ದು, ಇದೆಲ್ಲವೂ ಈಗ ಯಥವತ್ತಾಗಿ ಬ್ರೈಲ್‌ಲಿಪಿಗೆ ತರ್ಜುಮೆಗೊಂಡಿದೆ. ಇದಕ್ಕೆ ಮನಗುಂಡಿಯ ಬಸವಾನಂದ ಶ್ರೀಗಳೇ ಮುನ್ನಡೆ ಬರೆದಿದ್ದಾರೆ. ಸದ್ಯ ಹಳೆಗನ್ನಡ ಓದಬಲ್ಲ ಹಾಗೂ ಅವುಗಳ ಅರ್ಥ ಅರಿಯಬಲ್ಲ ಅಂಧರಷ್ಟೇ ಇದನ್ನು ಓದಿ ಅರ್ಥ ಮಾಡಿಕೊಳ್ಳಬಹುದಾಗಿದೆ. 

ಬಸವಾನಂದ ಶ್ರೀಗಳೇ ಪ್ರೇರಣೆ: ಹುಟ್ಟಿನಿಂದ ಅಂಧರಾಗಿದ್ದರೂ ಪ್ರಭುಲಿಂಗಲೀಲೆ ಪ್ರವಚನ ಮೂಲಕ ಹೆಸರು ಮಾಡಿರುವ ಮನಗುಂಡಿಯ ಬಸವಾನಂದ ಸ್ವಾಮೀಜಿ ಅವರು 23 ವರ್ಷಗಳ ಹಿಂದೆ ತಾವೇ ತಮ್ಮ ಕೈಯಿಂದ ಪ್ರಭುಲಿಂಗ ಲೀಲೆಯನ್ನು ಬ್ರೈಲ್‌ಲಿಪಿಗೆ ಸಿದ್ಧಪಡಿಸಿಕೊಂಡಿದ್ದರು.

Advertisement

ಇದರ ಸಹಾಯದಿಂದ ಪ್ರಭುಲಿಂಗಲೀಲೆ ಪ್ರವಚನ ಹೇಳಿ ಹೆಸರು ಮಾಡಿದ್ದರು. ಇದೀಗ ಮತ್ತೆ ಪ್ರಭುಲಿಂಗಲೀಲೆ ಪ್ರವಚನ ನೀಡಲು ಮುಂದಾಗಿರುವ ಶ್ರೀಗಳಿಗೆ ತಾವು ಸಿದ್ಧಪಡಿಸಿಕೊಂಡಿದ್ದ ಬ್ರೈಲ್‌ಲಿಪಿಯ ಪ್ರಭುಲಿಂಗಲೀಲೆ ಪುಸ್ತಕ ಹಳೆಯದಾಗಿತ್ತು.

ಹೀಗಾಗಿ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನದ ರಾಮಚಂದ್ರ ಧೋಂಗಡೆ ಅವರಿಗೆ ಬ್ರೈಲ್‌ಲಿಪಿಯ ಪ್ರಭುಲಿಂಗಲೀಲೆ ಸಿದ್ಧಪಡಿಸಿ ನೀಡುವಂತೆ ಕೋರಿಕೆ ಇಟ್ಟಿದ್ದರು. ಶ್ರೀಗಳ ಕೋರಿಕೆ-ಪ್ರೇರಣೆಯಿಂದ ಒಂದು ತಿಂಗಳ ಕಾಲ ಸತತ ಶ್ರಮದಿಂದ ಕೃತಿ ಸಿದ್ಧವಾಗಿದೆ. 

ಒಂದು ತಿಂಗಳ ಶ್ರಮದ ಫಲ: ಅಂಧರಾಗಿದ್ದರೂ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್‌ ಲಿಪಿಯ ಪುಸ್ತಕ ಸಿದ್ಧಪಡಿಸುವ ಕಾರ್ಯದಲ್ಲಿ ಪ್ರತಿಷ್ಠಾನದಲ್ಲಿ ಕೆಲಸ ಮಾಡುವ ದೇವಿಕಾ ಹಾಗೂ ಶಿವಕುಮಾರ ದಂಪತಿ ಇದಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಮಚಂದ್ರ ಧೋಂಗಡೆ ಒಂದು ತಿಂಗಳ ಕಾಲ ಇಡೀ ಪುಸ್ತಕ ಓದಿ ಹೇಳಿದರೆ ಅದನ್ನು ಕೇಳಿ ದೇವಿಕಾ ಕನ್ನಡ ಬರಹ ರೂಪಕ್ಕೆ ತಂದಿದ್ದಾರೆ.

ಆ ಬಳಿಕ ಬರಹ  ರೂಪವನ್ನು ಶಿವಕುಮಾರ ಅವರು ಕಂಪ್ಯೂಟರ್‌ ನ ಸಾಫ್ಟವೇರ್‌ವೊಂದರ ಸಹಾಯದಿಂದ ಬ್ರೈಲ್‌ ಲಿಪಿಗೆ ತರ್ಜಮೆ ಮಾಡಿದ್ದಾರೆ. ಒಂದು ತಿಂಗಳ ಕಾಲ ಪ್ರಭುಲಿಂಗಲೀಲೆಯ ಹಳೆಗನ್ನಡದ ಪದಗಳ ಕೇಳಿದ್ದು, ಅವು ಅರ್ಥ ಆಗಲಿಲ್ಲ. ಕುತೂಹಲ ತಡೆಯಲಾಗದೇ ಒಂದಿಷ್ಟು ಅರ್ಥವನ್ನು ರಾಮಚಂದ್ರ ಅವರಿಂದ ಕೇಳಿ ತಿಳಿದುಕೊಂಡಿರುವೆ. ಇದು ಗದ್ಯರೂಪದಲ್ಲಿ ಬಂದರೆ ನಮಗೂ ಅರ್ಥವಾಗಲು ಸಾಧ್ಯವಿದೆ ಎಂದು ಹೇಳುತ್ತಾರೆ ದೇವಿಕಾ. 

* ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next