Advertisement

ಪ್ರಭು ಪ್ರಸಾದ…

05:01 AM Jun 16, 2020 | Lakshmi GovindaRaj |

ಲಾಕ್‌ಡೌನ್‌ ಸಮಯದಲ್ಲಿ ಬಸ್‌ಗಳ ಸಂಚಾರವೇ ನಿಂತುಹೋದರೆ, ಹೃದ್ರೋಗ, ಬಿ. ಪಿ., ಶುಗರ್‌ ಪೇಶಂಟ್‌ಗಳು ಏನು ಮಾಡಬೇಕು? ಹೀಗೊಂದು ಯೋಚನೆ ಬಂದಾಗ ಪ್ರಭುದೇವ್‌ ಅವರು ಸುಮ್ಮನೆ ಕೂರಲಿಲ್ಲ, ಮೊದಲು ತಮ್ಮ  ಮೆಡಿಕಲ್‌ ಸ್ಟೋರಿನಲ್ಲಿದ್ದ ಔಷಧ ಕೊಟ್ಟರು. ನಂತರ, ದಾನಿಗಳ ನೆರವಿನಿಂದ ಔಷಧ ತರಿಸಿ ಹಂಚಿದರು. ಇವತ್ತಿಗೂ ದುಡ್ಡಿಲ್ಲ ಅಂತ ಬಂದವರಿಗೆ, ತಮ್ಮ ಮೆಡಿಕಲ್‌ ಸ್ಟೋರಿಂದ ಔಷಧ ತೆಗೆದುಕೊಟ್ಟು ನಿರುಮ್ಮಳರಾಗುತ್ತಾರೆ ಪ್ರಭು… 

Advertisement

ಲಾಕ್‌ಡೌನ್‌ ಘೋಷಣೆಯಾದಾಗ ಮೊದಲು ಕಷ್ಟವಾದದ್ದು ಬಿ.ಪಿ., ಶುಗರ್‌, ಹೃದಯ ಸಮಸ್ಯೆ ಇದ್ದ ರೋಗಿಗಳಿಗೆ. ಏಕೆಂದರೆ, ಎಷ್ಟೋ ಮಾತ್ರೆಗಳು ಬೆಂಗಳೂರು ಗ್ರಾಮಾಂತರದ ವಿಜಯಪುರ ಪಟ್ಟಣದಲ್ಲಿ ಸಿಗುತ್ತಿರಲಿಲ್ಲ. ಅವನ್ನು  ಬೆಂಗಳೂರಿಂದ ತರಿಸಿಕೊಳ್ಳಬೇಕಿತ್ತು. ಲಾಕ್‌ ಡೌನ್‌ ಕಾರಣಕ್ಕೆ ಬಸ್‌ ಓಡಾಟವೇ ನಿಂತುಹೋದ ಮೇಲೆ, ಬೆಂಗಳೂರಿಂದ ಮಾತ್ರೆ ತರಿಸುವುದು ಹೇಗೆ? ಈ ಸಮಸ್ಯೆಯ ವಾಸನೆ ಮೊದಲು ಮೂಗಿಗೆ ಬಡಿದದ್ದು, ವಿಜಯಪುರದ ಅಲ್ಲಮ  ಕೆಮಿಸ್ಟ್‌ನ ಮಾಲೀಕ ಪ್ರಭುದೇವ ಅವರಿಗೆ. ತಕ್ಷಣ, ಅವರು ತಮ್ಮ ಮೆಡಿಕಲ್‌ ಸ್ಟೋರ್‌ನಲ್ಲಿದ್ದ ಔಷಧಗಳನ್ನು ಬಡ ರೋಗಿಗಳಿಗೆ ಕೊಡಲು ಶುರುಮಾಡಿದರು.

ಕೈಯಿಂದ ದುಡ್ಡು ಹಾಕಿ 70 ಜನಕ್ಕೆ ಊಟ, ಔಷಧ ವಿತರಣೆಗೆ ಮುಂದಾದರು.  ಔಷಧ ಬೇಕೆನ್ನುವವರ ಸಂಖ್ಯೆ 300 ದಾಟಿದಾಗ, ಅವರೆಲ್ಲರಿಗೂ ಔಷಧ ಒದಗಿಸುವಷ್ಟು ಆರ್ಥಿಕ ಚೈತನ್ಯ ಪ್ರಭು ಅವರಿಗೆ ಇರಲಿಲ್ಲ. ಹಾಗಂತ ಸೇವೆಯನ್ನು ಅರ್ಧಕ್ಕೆ ನಿಲ್ಲಿಸಲೂ ಮನಸ್ಸಿರಲಿಲ್ಲ. ಆಗ, ಸ್ಥಳೀಯ ಜೇಸಿಸ್‌  ಸಂಸ್ಥೆಯ ಮೊರೆ ಹೋದರು. ಆರ್‌.ಎಸ್‌.ಎಸ್‌. ಗೆಳೆಯರೂ ಹೆಗಲು ಕೊಟ್ಟರು. ಸೇವೆ ಮುಂದುವರಿಯಿತು. ಆನಂತರದಲ್ಲೂ ಪ್ರಭು ಅವರು ಸುಮ್ಮನೆ ಕೂರಲಿಲ್ಲ. ಒಂದಷ್ಟು ದಾನಿಗಳನ್ನು ಹುಡುಕಿ, ರೋಗಿಗಳಿಗೆ ಬೇಕಿರುವ ಔಷಧದ  ಟ್ಟಿ ಮುಂದಿಟ್ಟರು.

ಮುದ್ದೇನಹಳ್ಳಿಯ ಸಾಯಿಬಾಬಾ ಟ್ರಸ್ಟ್‌ನವರು ತಿಂಗಳಿಗೆ ಒಂದು ಲಕ್ಷ ರೂ.ನಷ್ಟು ಉಚಿತ ಔಷಧ ಕೊಡುತ್ತಾರೆ. ಅವರ ಮನವೊಲಿಸಿ, ಅವರಿಂದಲೂ ಔಷಧವನ್ನು ಪಡೆದರು. ಮಾತ್ರೆಗಳನ್ನು ರವಾನೆ ಮಾಡುವ ಉಸಾಬರಿಯನ್ನು ತಮ್ಮ  ಹೆಗಲಿಗೇರಿಸಿಕೊಂಡರು. ಬೆಳಗ್ಗೆ ಮತ್ತು ಸಂಜೆಊರಿನ ನಗರೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಕೂತು, ತಾವೇ ರೋಗಿಗಳಿಗೆ ಕರೆ ಮಾಡಿ, ಪುಕ್ಕಟ್ಟೆಯಾಗಿ ಔಷಧ ವಿತರಣೆ ಮಾಡುವುದು, ಇವರ ಲಾಕ್‌ಡೌನ್‌  ಸಮಯದ ಕೆಲಸವಾಯಿತು. “ಗ್ರಾಮಾಂತರ ಪ್ರದೇಶದಲ್ಲಿ ಡಾಕ್ಟರ್‌ ಇವತ್ತು ಚೀಟಿ ಬರೆದುಕೊಟ್ಟರೆ, ಜನ ಮೆಡಿಕಲ್‌ ಶಾಪ್‌ಗೆ ನಾಳೆ ಬರ್ತಾರೆ.

ಕಾರಣ ದುಡ್ಡಿರಲ್ಲ. ಬರೆದುಕೊಟ್ಟ ಎಲ್ಲಾ ಮಾತ್ರೆಗಳನ್ನ ಕೊಂಡುಕೊಳ್ಳೋಕೆ ಅವರಿಗೆ  ಆಗೋಲ್ಲ. ಎರಡು ದಿನಕ್ಕೆ ಔಷಧ ಕೊಡಿ, ಮೂರು ದಿನಕ್ಕೆ ಕೊಡಿ ಅಂತಾರೆ. ಲಾಕ್‌ಡೌನ್‌ ಆದಾಗ ಇವರೆಲ್ಲಾ ಎಂಥ ಕಷ್ಟ ಪಡ್ತಾರೆ ಅಂತ ಗೊತ್ತಿತ್ತು. ಅದಕ್ಕೇ ನನ್ನ ಚೌಕಟ್ಟಿನಲ್ಲೇ ಸೇವೆ ಮಾಡಲು ಶುರುಮಾಡಿದೆ’ ಅಂತಾರೆ ಪ್ರಭುದೇವ. ಕೊರೊನಾ ಕಾರಣಕ್ಕೆ, ಈ ಬಾರಿ  ವಿಜಯಪುರದಲ್ಲಿ ಬಸವ ಜಯಂತಿ ಮಾಡಲಿಲ್ಲ.

Advertisement

ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಗುರುದೇವ್‌ ಹಣದ ಸಹಾಯ ಮಾಡುತ್ತಿದ್ದರು. ಗುರುದೇವ್‌ ಅವರ ಮನವೊಲಿಸಿ, ಈ ಬಾರಿ “ಜನರ ಜಯಂತಿ’  ಮಾಡೋಣ ಎಂದು ಒಪ್ಪಿಸಿ, “ಬಸವ ಜಯಂತಿಗೆಂದು’ ಇಟ್ಟಿದ್ದ ಹಣದಿಂದ 40 ಸಾವಿರ ರೂ. ನಷ್ಟು ಆಹಾರದ ಕಿಟ್‌, ಔಷಧಗಳನ್ನು ಕೊಡಿಸಿದ ಕೀರ್ತಿ ಪ್ರಭು ಅವರದ್ದು. ಇದೇ ರೀತಿ ಊರಲ್ಲಿರುವ ಆರ್ಯ ಶಿವಾಚಾರ್ಯ ನಗರ್ತ ಸೇವಾ  ಸಮಿತಿಯ ಸದಸ್ಯರ ಮನವೊಲಿಸಿದಾಗ ದೊರೆತ 60 ಸಾವಿರದಷ್ಟು ಮೊತ್ತದ ಹಣವನ್ನು ಸೇವೆಯ ಹಾದಿಗೆ ತಿರುಗಿಸಿ, ಬಡವರಿಗೆ ಆಹಾರ ಮತ್ತು ಔಷಧ ಪೂರೈಸುವಲ್ಲಿ ಪ್ರಭು ಅವರು ಯಶಸ್ಸು ಕಂಡಿದ್ದಾರೆ.

ಪ್ರಭುಗಳದ್ದು ಸೇವೆಗೆ  ಮಿಡಿವ ಹೃದಯ. ಮೆಡಿ  ಕಲ್‌ ಸ್ಟೋರಿಗೆ ಬರುವ ಎಷ್ಟೋ ಬಡವರಿಗೆ ಎಡಗೈಗೂ ಗೊತ್ತಾಗದ ಹಾಗೇ ಪುಕ್ಕಟ್ಟೆ ಔಷಧ ಕೊಡ್ತಾರೆ. ಇದರಂತೆ, ಊರಲ್ಲಿ ದಶಕಗಳಿಂದ ಮುಚ್ಚಿದ್ದ ನಗರೇಶ್ವರ ದೇವಾಲಯ ತೆರೆಯುವಲ್ಲಿ ಇವರ ಕೈವಾಡ  ಇದೆ. ಹಾಗೆಯೇ, ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪಾಠ ಶಾಲೆ ವಿದ್ಯಾರ್ಥಿಗಳು ತಣ್ಣಗೆ ನಿಂತು ಪ್ರಾರ್ಥನೆ ಮಾಡುವುದಕ್ಕೆ ಪ್ರಭುಗಳು ನೆಟ್ಟ 150 ಮರಗಳೇ ಕಾರಣ. ಹೀಗೆ, ಪ್ರಜೆಗಳ ಕಷ್ಟಕ್ಕೆ ಹೆಗಲು ಕೊಡುವ ಪ್ರಭುಗಳಾಗಿದ್ದಾರೆ ಪ್ರಭು.

Advertisement

Udayavani is now on Telegram. Click here to join our channel and stay updated with the latest news.

Next