Advertisement

Prabhu Mundkur: ʼಮರ್ಫಿʼಯಿಂದ ಹಾಡು ಬಂತು: ಸೆ.27ಕ್ಕೆ ತೆರೆಗೆ

06:35 PM Aug 10, 2024 | Team Udayavani |

ಹೊಸ ಬಗೆಯ ಸಿನಿಮಾ ಮಾಡಬೇಕು, ರೆಗ್ಯುಲರ್‌ ಶೈಲಿಯನ್ನೇ ಬ್ರೇಕ್‌ ಮಾಡ ಬೇಕು, ಆ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಬೇಕು ಎಂದು ಕನಸು ಕಾಣುವ ಸಿನಿ ಮನಸ್ಸುಗಳಿಗೇನು ಕೊರತೆಯಿಲ್ಲ. ಆದರೆ, ಕನಸು ನನಸು ಮಾಡುವುದು ಸುಲಭದ ಮಾತಲ್ಲ. ಈ ವಿಚಾರದಲ್ಲಿ “ಮರ್ಫಿ’ ತಂಡ ಕನಸನ್ನು ಸಾಕಾರಗೊಳಿಸಿದೆ.

Advertisement

ಹೌದು, “ಮರ್ಫಿ’ ಹೀಗೊಂದು ಸಿನಿಮಾ ಕನ್ನಡದಲ್ಲಿ ತಯಾರಾಗಿದ್ದು, ಸೆಪ್ಟೆಂಬರ್‌ ಕೊನೆಯ ವಾರ (27) ತೆರೆಕಾಣಲಿದೆ. ಈ ಹಿಂದೆ “ಉರ್ವಿ’ ಸಿನಿಮಾ ನಿರ್ದೇಶನ ಮಾಡಿರುವ ಪ್ರದೀಪ್‌ ವರ್ಮಾ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಪ್ರಭು ಮುಂಡ್ಕೂರು ಈ ಸಿನಿಮಾದ ನಾಯಕ. ಈ ಸಿನಿಮಾ ಮೂಲಕ ಹೊಸ ಬ್ರೇಕ್‌ ಸಿಗುವ ನಿರೀಕ್ಷೆ ಪ್ರಭು ಅವರಿಗಿದೆ. ಈ ಚಿತ್ರವನ್ನು ಸೋಮಣ್ಣ ಟಾಕೀಸ್‌ ಹಾಗೂ ವರ್ಣಸಿಂಧು ಸ್ಟುಡಿಯೋಸ್‌ ಸೇರಿ ನಿರ್ಮಿಸಿದೆ. ನಿರ್ದೇಶನದ ಜೊತೆಗೆ ಪ್ರದೀಪ್‌ ವರ್ಮಾ ನಿರ್ಮಾಣದಲ್ಲೂ ಸಾಥ್‌ ನೀಡಿದ್ದಾರೆ.

ಚಿತ್ರದಲ್ಲಿ ಪ್ರಭು ಮುಂಡ್ಕೂರ್‌, ರೋಶಿನಿ ಪ್ರಕಾಶ್‌, ಇಳಾ, ಮಹಾಂತೇಶ್‌, ದತ್ತಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಧನಂಜಯ್‌ ರಂಜನ್‌ ಸಾಹಿತ್ಯಕ್ಕೆ ರಜತ್‌ ಹೆಗ್ಡೆ ಧ್ವನಿಯಾಗಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ಈ ಹಾಡಿಗಿದೆ. “ಮಫ್ತಿ’ ಸಂಬಂಧಗಳ ಮೌಲ್ಯ ಸಾರುವ ಸಿನಿಮಾ ಎನ್ನುವುದು ನಾಯಕ ಪ್ರಭು ಮಾತು.

ಈ ಕುರಿತು ಮಾತನಾಡುವ ಅವರು, “ಇವತ್ತು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಾರರ್‌, ಆ್ಯಕ್ಷನ್‌, ಅಂಡರ್‌ವರ್ಲ್ಡ್ ನಂತಹ ಡಾರ್ಕ್‌ ಶೇಡ್‌ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಆದರೆ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯದಂತಹ ಮೌಲ್ಯ ಸಾರುವ ಸಿನಿಮಾಗಳು ಬರುತ್ತಿಲ್ಲ. ಇದೇ ಕಾರಣದಿಂದ ನಾನು ಹಾಗೂ ಪ್ರದೀಪ್‌ ವರ್ಮಾ ಒಂದು ಮೌಲ್ಯಯುತ “ಯು’ ಸರ್ಟಿಫಿಕೇಟ್‌ನ, ಇಡೀ ಕುಟುಂಬ ನೋಡುವ ಸಿನಿಮಾ ಮಾಡಬೇಕೆಂಬ ಕನಸು ಕಂಡೆವು. ಆ ಕನಸು ಈಗ ನನಸಾಗಿದೆ. ಸಂಬಂಧಗಳ ಮೌಲ್ಯವೇನು, ಅದನ್ನು ಹೇಗೆ ಉಳಿಸಿಕೊಳ್ಳ ಬೇಕು ಎಂಬ ಅಂಶವಿದೆ. ಸಿನಿಮಾದ ಜಾನರ್‌ ಬಗ್ಗೆ ಹೇಳುವುದಾದರೆ ಇದೊಂದು ರೊಮ್ಯಾಂಟಿಕ್‌ ಡ್ರಾಮಾ. ಹಲವು ಶೇಡ್‌ ನೊಂದಿಗೆ ಕಥೆ ಸಾಗಿದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next