Advertisement

MUDA Scam: ಸಿದ್ದರಾಮಯ್ಯ ಮಹಾಭಾರತದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ: ಪ್ರಭು ಚವ್ಹಾಣ್

08:05 PM Aug 21, 2024 | Team Udayavani |

ಬೀದರ್: ಮುಡಾ ಮತ್ತು ವಾಲ್ಮೀಕಿ ನಿಗಮದಲ್ಲಿ ಹಗರಣ ಸಾಬೀತಾದರೂ ರಾಜೀನಾಮೆ ನೀಡದೆ ಭಂಡತನ ತೋರುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಹಾಭಾರತದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ ಎಂದು ಔರಾದ ಶಾಸಕ ಪ್ರಭು ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಅಂದಾಜು ಐದು ಸಾವಿರ ಕೋಟಿ ರೂ. ಹಗರಣ ನಡೆದಿದೆ. ಮುಡಾ ಕುರಿತು ಅಧಿವೇಶನದಲ್ಲಿ ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ನೀಡದೇ, ಸಿಎಂ ಓಡಿ ಹೋಗಿದ್ದಾರೆ. ಇದೀಗ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯನವರು ಪ್ರಾಮಾಣಿಕರಾಗಿದ್ದರೆ ತನಿಖೆಗೆ ಸಹಕರಿಸಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮುಡಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂವಿಧಾನಬದ್ಧ ಅಧಿಕಾರ ಬಳಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅನುಮತಿ ನೀಡಿದ್ದಾರೆ. ಆದರೆ, ಸಂವಿಧಾನಿಕ ಹುದ್ದೆಯಲ್ಲಿರುವ ಅವರ ವಿರುದ್ಧವೇ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ಸಿಗರು ದಲಿತ ಸಮುದಾಯದ ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ. ಗೆಹ್ಲೋತ್ ಕೇಂದ್ರ ಸಚಿವ ಸೇರಿ ಐದು ದಶಕ ಕಾಲ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ ರಾಜಕಾರಣಿಯಾಗಿದ್ದು, ಅವರಿಗೆ ಅಗೌರವ ತೋರುವ ಹೇಳಿಕೆ ನೀಡುವುದು, ಪ್ರತಿಭಟನೆ ನಡೆಸುವ ಮೂಲಕ ದಲಿತ ಸಮುದಾಯಕ್ಕೆ ಅಪಮಾನ ಮಾಡಲಾಗುತ್ತಿದೆ ಹೇಳಿದರು.

ಪಂಚ ಗ್ಯಾರಂಟಿ ಆಮಿಷ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಅವುಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ. ಈ ಗ್ಯಾರಂಟಿಗಳ ಮೂಲಕ ಕರ್ನಾಟಕವನ್ನು ಶ್ರೀಲಂಕಾ ಮತ್ತು ಬಾಂಗ್ಲಾ ಮಡಲು ಹೊರಟಿದ್ದಾರೆ. ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಭ್ರಮಾಂಡ ಭ್ರಷ್ಟಾಚಾರದಲ್ಲಿ ತಲ್ಲೀನವಾಗಿದ್ದು, ಈಗ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ ಮಾಡುತ್ತಿದೆ. ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಮುಡಾ ಹಗರಣದ ತನಿಖೆಗೆ ಸಹಕರಿಸಲಿ ಎಂದು ಆಗ್ರಹಿಸಿದರು.

Advertisement

ಇನ್ನೂ ಮಂತ್ರಿಗಳಾದ ಜಮೀರ್ ಖಾನ್, ದಿನೇಶ್ ಗುಂಡುರಾವ್, ಕೃಷ್ಣ ಭೈರೇಗೌಡ ಮತ್ತು ಎಂಎಲ್‌ಸಿ ಐವಾನ್ ಡಿಸೋಜಾ ಅವರು ರಾಜ್ಯಪಾಲರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರ ಹೇಳಿಕೆಗಳಿಗೆ ಸಂಬಂಧ ಪೊಲೀಸರು ಸಹ ಕಾನೂನು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಎಸ್ಸಿ ಮೋರ್ಚಾ ರಾಷ್ಟ್ರೀಯ ಸದಸ್ಯ ಜಯಕುಮಾರ ಕಾಂಗೆ, ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ಮಾಜಿ ಶಾಸಕ ಗುಂಡಪ್ಪ ವಕೀಲ, ಪ್ರಮುಖರಾದ ಬಾಬು ವಾಲಿ, ವಿಜಯಕುಮಾರ ಪಾಟೀಲ್ ಗಾದಗಿ, ವಸಂತ ಬಿರಾದಾರ್, ಗುರುನಾಥ ಜ್ಯಾಂತಿಕರ್, ಶಿವರಾಜ ಅಲ್ಮಾಜೆ, ಜೈಭೀಮ ಬಂಧು, ರವಿ ನಿಜಾಂಪುರ, ಗುರುನಾಥ ರಾಜಗೀರಾ, ಧೋಂಡಿಬಾ ನರೋಟೆ, ಬಸವರಾಜ ಕಲಬುರಗಿ, ಗುಂಡಪ್ಪ ಬುಧೇರಾ ಇತರರಿದ್ದರು.

ಜಿಲ್ಲಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರಕ್ಕೆ ಆಗುತ್ತಿಲ್ಲ. ಜಿಲ್ಲಾ ಸಂಕೀರ್ಣ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ವಿರುದ್ಧ ಮಾತನಾಡುವುದನ್ನು ಬಿಟ್ಟು, ಅಭಿವೃದ್ಧಿಯತ್ತ ಚಿತ್ತ ಹರಿಸಲಿ. ಜಿಲ್ಲೆಯ ಸಮಸ್ಯೆಗಳ ಕುರಿತು ಬಿಜೆಪಿ ಹೋರಾಟ ನಡೆಸಲಿದೆ.

– ಪ್ರಭು ಚವ್ಹಾಣ, ಔರಾದ ಶಾಸಕ.

‘ಬಿಜೆಪಿಯಿಂದ ಬೃಹತ್ ಹೋರಾಟ ಇಂದು’
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಹಾಗೂ ರಾಜ್ಯಪಾಲರಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಬಿಜೆಪಿಯಿಂದ ಆ. ೨೨ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.

ಅಂದು ಬೆಳಗ್ಗೆ ೧೦ಕ್ಕೆ ಇಲ್ಲಿನ ಗಣೇಶ ಮೈದಾನದಲ್ಲಿ ಸೇರಿ, ಅಲ್ಲಿಂದ ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಲಾಗುವುದು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ದಲಿತಪರ ಸಂಘಟನೆಗಳ ಪ್ರಮುಖರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: BIGG BOSS: ಕನ್ನಡ, ತಮಿಳು, ತೆಲುಗು, ಹಿಂದಿ.. ಬಿಗ್‌ಬಾಸ್‌ ಆರಂಭಕ್ಕೆ ಕೌನ್‌ ಡೌನ್‌ ಶುರು

Advertisement

Udayavani is now on Telegram. Click here to join our channel and stay updated with the latest news.

Next