Advertisement

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಠಿಣವಾಗಿ ಜಾರಿಗೊಳಿಸಲು ಇಲಾಖೆ ಸಿದ್ದ: ಸಚಿವ ಪ್ರಭು ಚವ್ಹಾಣ್

06:52 PM Dec 29, 2020 | Team Udayavani |

ಬೆಂಗಳೂರು : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಠಿಣವಾಗಿ ಜಾರಿಗೆ ತರಲು ಇಲಾಖೆಯಿಂದ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಪಾಲರಿಂದ ಅಂಕಿತವಾದ ತಕ್ಷಣ ಇಲಾಖೆ ತೀವ್ರಗತಿಯಲ್ಲಿ ಗೋವು ಸಂರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಲಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

Advertisement

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಸದ್ಯ ರಾಜ್ಯದಲ್ಲಿ ಜನಿಸುತ್ತಿರುವ ವಿದೇಶಿ ತಳಿಯ ಗಂಡು ಕರುಗಳನ್ನು ಕಟುಕರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೊಸ ಕಾಯ್ದೆಯ ಪ್ರಕಾರ ಇದು ಶಿಕ್ಷಾರ್ಹ. ಪಶುಪಾಲಕರು ಗಂಡು ಕರುಗಳನ್ನು ಕನಿಷ್ಠ 6 ತಿಂಗಳವರೆಗೆ ತಾಯಿಯೊಂದಿಗೆ ಸಾಕಿ ನಂತರ ಕರುವನ್ನು ಗೋಶಾಲೆಗೆ ನೀಡಿ ಎಂದು ಸಚಿವರು ಪಶುಪಾಲಕರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ರೈತರಲ್ಲಿ, ಪಶುಪಾಲಕರಲ್ಲಿ ವಯಸ್ಸಾದ ಗೋವುಗಳಿದ್ದರೆ ಅವುಗಳನ್ನು ವಧೆಗಾಗಿ ಕಟುಕರಿಗೆ ನೀಡದೆ ಹತ್ತಿರದ ಗೋಶಾಲೆಗೆ ನೀಡಿ ಎಂದು ರೈತರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಕೌಶಲ್ಯಾಧಾರಿತ ಶಿಕ್ಷಣ :ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಗೋವುಗಳನ್ನು ಪಡೆಯಲು ಗೋಶಾಲೆಗಳು ನಿರಾಕರಿಸುವಂತಿಲ್ಲ :
ರಾಜ್ಯದಲ್ಲಿ 159 ಗೋಶಾಲೆಗಳಿದ್ದು ಅವುಗಳಲ್ಲಿ 75ಕ್ಕೂ ಹೆಚ್ಚು ಗೋಶಾಲೆಗಳಿಗೆ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈಗಿರುವ ಎಲ್ಲ ಗೋಶಾಲೆಗಳಲ್ಲಿ ಗೋವುಗಳ ಸಾಕಣೆಯ ಸಾಮರ್ಥ್ಯ ಹೆಚ್ಚಿಸಲು ಎಲ್ಲ ಗೋಶಾಲೆಗಳಿಗೆ ತಿಳಿಸಲಾಗಿದ್ದು. ಒಂದು ವೇಳೆ ಗೋವು ಸಾಕಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದವರು ಗೋಶಾಲೆಗಳಿಗೆ ತಮ್ಮ ಜಾನುವಾರು ಬಿಡಲು ಮುಂದಾದರೆ ಗೋಶಾಲೆಗಳು ಗೋವುಗಳನ್ನು ಪಡೆಯಲು ನಿರಾಕರಿಸುವಂತಿಲ್ಲ. ಹೊಸದಾಗಿ ಗೋಶಾಲೆಗಳನ್ನು ಆರಂಭಿಸುವವರಿಗೆ ಇಲಾಖೆ ಹಾಗೂ ಸರ್ಕಾರದ ಕಡೆಯಿಂದ ಪ್ರೋತ್ಸಾಹ ನೀಡಲಿದ್ದೇವೆ ಎಂದಿದ್ದಾರೆ.

ಅಧಿಕಾರಿಗಳಿಗೆ ಎಚ್ಚರಿಕೆ
ರಾಜ್ಯದಲ್ಲಿ ಬೀಡಾಡಿ ದನಗಳ ನಿರ್ವಹಣೆಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಂತಹ ದನಗಳನ್ನು ತಕ್ಷಣದಲ್ಲಿ ಹತ್ತಿರದ ಗೋಶಾಲೆಗಳಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಹೊಸದಾಗಿ ಗೋಶಾಲೆಗಳನ್ನು ತೆರೆದು ಮೇವು, ನೀರು, ಚಿಕಿತ್ಸೆ ಹಾಗೂ ಬೀಡಾಡಿ ದನಗಳ ನಿರ್ವಹಣೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಒಂದು ವೇಳೆ ರಸ್ತೆಯಲ್ಲಿ ಬೀಡಾಡಿ ಜಾನುವಾರು ಕಂಡುಬಂದಲ್ಲಿ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

ಆಹಾರದ ಹಕ್ಕು ಕಸಿಯುತ್ತಿಲ್ಲ:
ಮಾಂಸ ತಿನ್ನುವವರ ಹಕ್ಕನ್ನು ಈ ಕಾಯ್ದೆಯ ಮೂಲಕ ಮೊಟಕು ಗೊಳಿಸುತ್ತಿಲ್ಲ. ಈ ಮಸೂದೆಯಲ್ಲೇ ತಿಳಿಸಿದಂತೆ ೧೩ ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಕೈಬಿಡಲಾಗಿರುವುದರಿಂದ ಆಹಾರದ ಹಕ್ಕನ್ನು ಈ ಕಾಯ್ದೆ ಕಸಿಯುತ್ತಿದೆ ಎಂಬ ಹೇಳಿಕೆಗಳು ನಿರಾಧಾರ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next