ಚಿಕ್ಕೋಡಿ: ಕೊರೊನಾ ಹಿನ್ನೆಲೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಟಾನಗೊಳ್ಳಲು ವಿಳಂಭವಾಗಿದೆ ಮುಂದಿನ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಾಡೇ ಮಾಡುತ್ತೇವೆ. ಗೋಮಾತಾ ನಮ್ಮ ಮಾತೆ ಆಗಿದ್ದು ಅದರ ರಕ್ಷಣೆಗೆ ನಾವು ಬದ್ಧರಿದ್ದೇವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದಲ್ಲಿರುವ ಗೋಶಾಲೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಪಶು ವೈದ್ಯರು ಹಳ್ಳಿಗಳಿಗೆ ಹೋಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದಲ್ಲದೇ ರೈತರಿಗಾಗಿ ವಾರ್ ರೂಂ ರಚಿಸುವುದಾಗಿ ಹೇಳಿದರು.
ಪಶು ಆರೋಗ್ಯದಲ್ಲಿ ವ್ಯತ್ಯಾಸವಾದರೂ ರೈತರು ವಾರ್ ರೂಂಗೆ ಕರೆ ಮಾಡಿದರೆ ಸಾಕು ವೈದ್ಯರು ರೈತರನ್ನು ಸಂಪರ್ಕಿಸಿ ಪಶುಗಳಿಗೆ ಚಿಕಿತ್ಸೆ ನೀಡುವರು. ಅಲ್ಲದೇ, ರಾಜ್ಯದಲ್ಲಿ 73 ಕೋಟಿ ಜಾನುವಾರು, 6 ಕೋಟಿ ಕೋಳಿಗಳಿವೆ. 15 ಜಿಲ್ಲೆಗಳಲ್ಲಿ ಪಶು ಸಂಜೀವಿನಿ 1962ಗೆ ಚಾಲನೆ ಕೊಟ್ಟಿದ್ದು ಎಲ್ಲ ಕಡೆ ಸಿಬ್ಬಂದಿ ಹೋಗುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ಬಂಧಿಸಲು ಹೋದ ಪೋಲೀಸರ ಮೇಲೆ ಮಾರಾಕಾಸ್ತ್ರದಿಂದ ದಾಳಿ! ಆರೋಪಿ ಕಾಲಿಗೆ ಗುಂಡೇಟು
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠಾ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ 50 ಕೋಟಿ ರೂ. ಅನುದಾನ ನೀಡಿದ್ದಾರೆ. ಇದೀಗ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಆ ಮೂಲಕ ದೀಪಾವಳಿ ಬಂಪರ್ ಆಫರ್ ನೀಡಿದ್ದಾರೆ. ಸಾಮಾಜಿಕ ನ್ಯಾಯ ಕಾಪಾಡುತ್ತಿರುವ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಭು ಚವಾಣ್ ತಿಳಿಸಿದರು.