ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಸದ್ಯ ʼಸಲಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾದ ಬಗ್ಗೆಯೂ ಟಾಲಿವುಡ್ ರಂಗದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ.
ಬಹು ನಿರೀಕ್ಷಿತ ʼಆದಿಪುರುಷ್ʼ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಅಷ್ಟೇ ದೊಡ್ಡಮಟ್ಟದಲ್ಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತ್ತು. ಸದ್ಯ ಅವರ ʼಸಲಾರ್ʼ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಈ ಸಿನಿಮಾದ ಹೊಸ ರಿಲೀಸ್ ಡೇಟ್ ಇನ್ನಷ್ಟೇ ಹೊರಬೀಳಬೇಕಿದೆ.
ಈ ನಡುವೆ ಪ್ರಭಾಸ್ ಅವರು ಮತ್ತೊಂದು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವಿಷ್ಣು ಮಂಚು ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ “ಕಣ್ಣಪ್ಪ” ಸಿನಿಮಾದಲ್ಲ ಡಾರ್ಲಿಂಗ್ ಪ್ರಭಾಸ್ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಈ ಬಗ್ಗೆ ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲಾ ಅವರು ಟ್ವೀಟ್ ಮಾಡಿದ್ದು “ವಿಶ್ವಾಸಾರ್ಹ ಮೂಲಗಳ ಪ್ರಕಾರ, ನಟ ವಿಷ್ಣುಮಂಚು ಅವರ ಡ್ರೀಮ್ ಪ್ರಾಜೆಕ್ಟ್ “ಕಣ್ಣಪ್ಪ” – ಎ ಟ್ರೂ ಎಪಿಕ್ ಇಂಡಿಯನ್ ಟೇಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಲಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ವೈರಲ್ ಆಗಿದ್ದು, ಇದಕ್ಕೆ ವಿಷ್ಣುಮಂಚು ಅವರು ಕೂಡ ಪಾಸಿಟಿವ್ ಆಗಿ “ಹರ್ ಹರ್ ಮಹಾದೇವ್” ಎಂದು ರಿಯಾಕ್ಟ್ ಮಾಡಿರುವುದುಚಿತ್ರದಲ್ಲಿ ಪ್ರಭಾಸ್ ಇರುವಿಕೆ ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ಶಿವನ ಪಾತ್ರದಲ್ಲಿ ಪ್ರಭಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ‘ಕಣ್ಣಪ್ಪʼ ಸಿನಿಮಾದ ಪೂಜಾ ಕಾರ್ಯಕ್ರಮಗಳು ನೆರವೇರಿದೆ. ಈ ಚಿತ್ರದಲ್ಲಿ ಕೃತಿ ಸನನ್ ಸಹೋದರಿ ನೂಪುರ್ ಸನೋನ್ ಕೂಡ ನಟಿಸಲಿದ್ದಾರೆ. ಮುಕೇಶ್ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ಬುರ್ರಾ ಸಾಯಿ ಮಾಧವ್ ಮತ್ತು ತೋಟ ಪ್ರಾಸಾ ಕಥೆ ಬರೆದಿದ್ದಾರೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.