Advertisement

ಬಾಲ್ಯ ವಿವಾಹ ತಡೆಗೆ ಶ್ರಮಿಸುವಂತೆ ಪ್ರಭಾಕರ್‌ರಾವ್‌ ಕರೆ

03:45 PM Oct 07, 2018 | |

ವಿಜಯಪುರ: ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಬಾಲ್ಯ ವಿವಾಹ ತಡೆಗೆ ವ್ಯಾಪಕವಾಗಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭಾಕರರಾವ್‌ ಕರೆ
ನೀಡಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಬೆಂಗಳೂರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ ಇವರ ಸಹಯೋಗದೊಂದಿಗೆ ನಗರದ ರುಡ್‌ಸೆಟ್‌ನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿ ಕಾರಿಗಳಿಗೆ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2016 ಹಾಗೂ ಬಾಲ್ಯವಿವಾಹ ನಿಷೇಧ (ಕರ್ನಾಟಕ) ನಿಯಮಗಳು 2014 ಕುರಿತು ಕಾರ್ಯಗಾರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮ ಹಾಗೂ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ್ಯವಿವಾಹ ತಡೆಗೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಇಂತ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಕಳವಳ ವ್ಯಕ್ತಪಡಿಸಿದರು. ಸದರಿ ಕಾಯ್ದೆಯ ನೈಜ ಅನುಷ್ಠಾನದ ಕುರಿತು ಜಿಲ್ಲೆ ಎಲ್ಲ ಹಂತದ ಅಧಿಕಾರಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಅಶೋಕ ಕೆಲವಡಿ ಮಾತನಾಡಿ, ಬಾಲ್ಯವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರಲ್ಲಿ ಒಂದಾದ ಬಾಲ್ಯವಿವಾಹ ನಿಷೇಧ ಕಾಯ್ದೆ ಅರಿವು ಮತ್ತು ಮಾಹಿತಿಯ ಪೋಸ್ಟರ್‌ ವಿತರಿಸಿ, ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯವಿವಾಹ ತಡೆಗೆ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಿದ್ದೇವೆ. ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುವುದಾಗಿ ಹೇಳಿದರು.
 
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ ಕುಲಕರ್ಣಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವಿಕೆ ಕೇವಲ ಅಧಿಕಾರಿಗಳ ಕೆಲಸವಾಗದೆ, ಅದು ಸೇವೆಯಾಗಬೇಕೆಂದು ಹೇಳಿ, ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ವಿವಿಧ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಪ್ರಾಸ್ತಾವಿಕ ಮಾತನಾಡಿದರು. ಮೌನೇಶ ಪೋತದಾರ ನಿರೂಪಿಸಿದರು. ಗುರುರಾಜ ಇಟಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next