ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಪಿಪಿಇ ಕಿಟ್ ಎಸೆದರೆ ಸಂಬಂಧ ಪಟ್ಟವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾ ಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ.ನಗರದಲ್ಲಿ ಬುಧವಾರ ಶಿವಾಜಿನಗರ ಬೌರಿಂಗ್ ಆಸ್ಪತ್ರೆ, ಜೆ.ಪಿ.ನಗರ ಹಾಗೂ ಕೋರಮಂಗಲದ ಬಳಿ ಬಳಕೆ ಮಾಡಿದ ಪಿಪಿಇ ಕಿಟ್ ಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪಣೆ ವ್ಯಕ್ತವಾಗಿತ್ತು.
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಆಯುಕ್ತರು, ಈಗಾಗಲೇ ಸೋಂಕಿತರ ವೈದ್ಯ ಕೀಯ ತ್ಯಾಜ್ಯ ಹಾಗೂ ಪಿಪಿಇ ಕಿಟ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ಪ್ರತ್ಯೇಕ ಸಂಸ್ಥೆಗಳನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿದೆ. ಈ ಮೂಲಕ ಸೋಂಕು ಹಬ್ಬದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಿಪಿಇ ಕಿಟ್ ಅಥವಾ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಎಸೆಯುವುದು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅಂತ್ಯಕ್ರಿಯೆಯಲ್ಲಿ ಲೋಪ; ಆರೋಪ: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ನಿರ್ವಹಣೆ ಯಲ್ಲಿ ಪಾಲಿಕೆ ಅಧಿಕಾರಿಗಳು ಎಡುವುತ್ತಿದ್ದಾರೆ. ಸ್ಮಶಾನದಲ್ಲಿ ಅಂತ್ಯಕ್ರಿಯೆ, ಪಿಪಿಇ ಕಿಟ್ ವಿಲೇವಾರಿಯಲ್ಲಿ ನಿರ್ಲಕ್ಷ ವಹಿಸುತ್ತಿರುವ ಬಗ್ಗೆ ನಿರಂತರ ಆರೋಪಗಳು ಕೇಳಿಬರುತ್ತಿವೆ. ಜೆ.ಸಿ. ನಗರ ಸ್ಮಶಾನದಲ್ಲಿ ಮೃತಪಟ್ಟ ಸೋಂಕಿತರನ್ನು ಕೇವಲ ಮೂರು ಅಡಿ ಅಗೆದು ಹೂಳಲಾಗಿದ್ದು, ಸರ್ಕಾರ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ಮಾಡಿಲ್ಲ.
ಅಲ್ಲದೆ, ಇದೇ ಸ್ಮಶಾನದಲ್ಲಿ ಪಾಲಿಕೆ ಅಧಿಕಾರಿಗಳು ಪಿಪಿಇ ಕಿಟ್‌ಗಳನ್ನು ಎಸೆದಿದ್ದು, ಬೀದಿ ನಾಯಿಗಳು ಸ್ಮಶಾನದಲ್ಲಿ ಓಡಾಡುತ್ತಿವೆ.ಇದರಿಂದ ಸೋಂಕು ವಾರ್ಡ್‌ನಲ್ಲಿ ಹರಡುವ ಭೀತಿ ಎದುರಾಗಿದೆ. ಪಾಲಿಕೆ ಸದಸ್ಯರು ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಲೇವಾರಿಯಾಗದ ಪಿಪಿಇ ಕಿಟ್: ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುತ್ತಾರೆ. ಈ ಕಿಟ್ ಬಳಕೆಯಾದ ನಂತರ ಪಾಲಿಕೆ ವಿಲೇ ವಾರಿ ಮಾಡಬೇಕು. ಆದರೆ, ಆಸ್ಪತ್ರೆಯಲ್ಲಿ ಕಿಟ್‌ಗಳ ರಾಶಿ ಬಿದ್ದಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವೈದ್ಯರೊಬ್ಬರು ಆರೋಪಿಸಿದ್ದಾರೆ. ಮಾಸ್ಕ್, ಪಿಪಿಇ ಕಿಟ್ ಕೋರಮಂಗಲ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.