Advertisement

ಪೋಯಸ್‌ನಲ್ಲೇ ಆಸ್ತಿ ಕಬಳಿಸಲು ಸಂಚು

03:40 AM Feb 15, 2017 | |

ನವದೆಹಲಿ: ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ ತೀರ್ಪಿನ ಕೊನೆಯ ಮೊಳೆ ಜಡಿದಿದೆ. ಮಾಜಿ ಸಿಎಂ ಜಯಲಲಿತಾ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿಯಲ್ಲಿ ಫ‌ಲಾನುಭವಿಗಳಾದ ಇತರೆ ಮೂವರು (ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ) ದೋಷಿಗಳೆಂದು ಸುಪ್ರೀಂ ಹೇಳಿದ್ದು, ಈ ಸಂಬಂಧ 570 ಪುಟಗಳ ತೀರ್ಪು ನೀಡಿದೆ. ತೀರ್ಪು ನೀಡುವ ವೇಳೆ ಜಯಲಲಿತಾ ಪಾತ್ರದ ಬಗ್ಗೆ ಕಟುವಾಗಿ ಟೀಕಿಸಿದೆ. ಜನಪ್ರತಿನಿಧಿಯಾಗಿದ್ದುಕೊಂಡು ಜಯಲಲಿತಾ ಅವರು ಅಕ್ರಮ ಆಸ್ತಿ ಸಂಪಾದಿಸಲು ನೆರವಾಗಿ, ಅದರಲ್ಲಿ ತಾವೂ ಫ‌ಲಾನುಭವಿಯಾಗಲು ಮುಂದಾಗಿರುವುದೇ ದೊಡ್ಡ ಪ್ರಮಾದ ಎನ್ನುವುದು ಸುಪ್ರೀಂ ತೀರ್ಪಿನ ಒಟ್ಟು ಧ್ವನಿ.

Advertisement

ಈ ಅಕ್ರಮ ಗಳಿಕೆಯ ಪ್ರಕರಣದಲ್ಲಿ ಜಯಲಲಿತಾ ಅವರದ್ದು ಸಿಂಹಪಾಲು ಇದ್ದರೂ, ಸಮಾನ ಶಿಕ್ಷೆಯನ್ನು ಇತರೆ ಮೂವರಿಗೂ ಕೋರ್ಟ್‌ ವಿಧಿಸಿದೆ. ಜಯಲಲಿತಾ ಕಟ್ಟಬೇಕಿರುವ 100 ಕೋಟಿ ರೂ. ದಂಡ ಸೇರಿದಂತೆ, ಇತರೆ ಮೂವರಿಗೂ ತಲಾ 10 ಕೋಟಿ ರೂ. ದಂಡ ಪಾವತಿಸುವಂತೆ ಕೋರ್ಟ್‌ ಹೇಳಿದೆ. ಅಧಿಕಾರದಲ್ಲಿದ್ದ ವ್ಯಕ್ತಿಯ ದುರ್ವವಹಾರದಲ್ಲಿ ಇತರೆ ಮೂವರೂ ನೇರಭಾಗಿ ಆಗಿದ್ದಾರೆಂದೇ ನ್ಯಾಯಾಲಯ ಹೇಳಿದೆ.

ಜಯಲಲಿತಾ ವಿರುದ್ಧ ಹೇಳಿದ್ದೇನು?
ಅಧಿಕಾರದ ಮೊದಲ ಅವಧಿಯಲ್ಲಿ ಜಯಲಲಿತಾ ಅವರು ಅಧಿಕಾರದ ದುರುಪಯೋಗ ಮಾಡಿದ್ದರು. ಸಾರ್ವಜನಿಕ ಪ್ರತಿನಿಧಿಯಾಗಿದ್ದರೂ ಜಯಾ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಲು ಮುಂದಾಗಿದ್ದರು. ಅದಕ್ಕಾಗಿ ಶಶಿಕಲಾ, ಸುಧಾಕರನ್‌, ಇಳವರಸಿ ಸಹಕಾರ ನೀಡಿದ್ದರು.

ಜಯಲಲಿತಾರ ಖಾತೆಯಿಂದ ಶಶಿಕಲಾ ಅವರ ಖಾತೆಗೆ ಹಣ ವರ್ಗಾವಣೆ ಯಾಗುತ್ತಿದ್ದದ್ದೇ ಪ್ರಕರಣಕ್ಕೆ ಸಾಕ್ಷಿಯಾಗಿದೆ. 

ಪೊಯೆಸ್‌ ಗಾರ್ಡನ್‌ ನಿವಾಸದಲ್ಲಿರುವ ವೇಳೆ 12 ಶೆಲ್‌ ಕಂಪನಿಗಳನ್ನು ಆರಂಭಿಸಿದ್ದು ಜಯಲಲಿತಾರಿಗೆ ಗೊತ್ತಿರಲಿಲ್ಲ ಎಂದು ಹೇಳಿದ್ದು ನಂಬಲು ಸಾಧ್ಯವೇ ಇಲ್ಲ. 

Advertisement

ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ಅವರು ಈ ಸಂಚಿನಲ್ಲಿ ಸಕ್ರಿಯವಾಗಿದ್ದರು. ಜಯಲಲಿತಾ ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿಯನ್ನು ಅವರು ಆಸ್ತಿ ಖರೀದಿಗೆ ಬಳಕೆ ಮಾಡಿಕೊಂಡರು. 

ಆಪಾದಿತರೆಲ್ಲರೂ ಮಾರುಕಟ್ಟೆ ದರಕ್ಕಿಂತ ಕಡಿಮೆ ಮೌಲ್ಯದಲ್ಲಿ ಆಸ್ತಿ ಖರೀದಿ ನಡೆಸಿದರು. ಅದಕ್ಕಾಗಿ ಮಾರಾಟಗಾರರ ಮೇಲೆ ಒತ್ತಡ ಹೇರಿದರು. ಜಯಲಲಿತಾ ಅವರ ನಿವಾಸದಲ್ಲಿಯೇ ಆಸ್ತಿ ನೋಂದಣಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ನಡೆಸಲಾಯಿತು.

ಅಕ್ರಮ ಆಸ್ತಿ ಸಂಪಾದಿಸಲೆಂದೇ ಶಶಿಕಲಾ ಜಯಲಲಿತಾ ಜತೆ ಇದ್ದರು. 

1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಂತೆ ಸಾರ್ವಜನಿಕ ಸೇವೆಯಲ್ಲಿದ್ದವರು ಇಂಥ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅವರ ಅಧಿಕಾರವನ್ನು ಹಿಂಪಡೆಯಬೇಕಾಗುತ್ತದೆ. ಹಾಗೆ ಸಾಧ್ಯತೆಯಿದ್ದ ಜಯಲಲಿತಾ ಈಗ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಪೀಠ, ಮಿಕ್ಕ ಖಾಸಗಿ ವ್ಯಕ್ತಿಗಳನ್ನೂ ಕಾನೂನಿನ ಅಡಿಯಲ್ಲಿ ಪರಿಶೀಲಿಸಿದ್ದು, 1988ರ ತಿದ್ದುಪಡಿ ಕಾಯ್ದೆಯಂತೆ ಜನಪ್ರತಿನಿಧಿ ಜೊತೆ ಸೇರಿ ಅವ್ಯವಹಾರ ನಡೆಸಿದ್ದಕ್ಕೆ ಇವರೂ ಆರೋಪಿಗಳಾಗುತ್ತಾರೆ.

ಜಯಲಲಿತಾ  ಜನರಲ್‌ ಪವರ್‌ ಅಟಾರ್ನಿ (ಸಾಮಾನ್ಯ ಅಧಿಕಾರ ಪತ್ರ)ಯನ್ನು ಶಶಿಕಲಾ ಅವರಿಗೆ ಸಂಬಂಧಿಸಿದ ಜಯಾ ಪಬ್ಲಿಕೇಶನ್‌ಗೆ ನೀಡಿದ್ದಾರೆ. ತಮ್ಮ ಅಕ್ರಮ ಆದಾಯದಲ್ಲಿ ಅದಕ್ಕೂ ಹಣ ವರ್ಗಾಯಿಸಿದ್ದಾರೆ. ಜಯ ಪಬ್ಲಿಕೇಶನ್‌ನ ಆದಾಯ 2.84 ಕೋಟಿ ರೂಪಾಯಿ ಇದೆ

1994 ಜನವರಿ 25ರಂದು ಒಂದೇ ದಿನದಲ್ಲಿ 6, 1995 ಫೆ.15ರಂದು 10 ಕಂಪನಿಗಳನ್ನು ಆರಂಭಿಸಲಾಗಿದೆ. ಶಶಿಕಲಾ, ಸುಧಾಕರನ್‌, ಇಳವರಸಿ ಹೆಸರಿನಲ್ಲಿ ಒಟ್ಟು 34 ಕಂಪನಿಗಳಿಗೆ ಅಕ್ರಮ ಆದಾಯ ಗಳಿಕೆಯ ಹಣ ಸಂದಾಯವಾಗಿದೆ. ಇವೆಲ್ಲ ಕಂಪನಿಗಳು ಜಯಲಲಿತಾ ಅವರ ಹೊರತಾಗಿ ಕಾರ್ಯನಿರ್ವಹಿಸುತ್ತಿದ್ದವು. 

ಶಶಿ ಎಂಟರ್‌ಪ್ರೈಸಸ್‌ಗಾಗಿ ಜಯಲಲಿತಾ 1 ಕೋಟಿ ರೂಪಾಯಿ ಸಾಲ ತೆಗೆದಿದ್ದರು. ಶಿಶಕಲಾ ಅವರ ಉದ್ಯಮದಲ್ಲಿ ಜಯಲಲಿತಾ ಭಾಗಿ ಆಗಿಲ್ಲ ಎನ್ನಲು ಸಾಧ್ಯವೇ ಇಲ್ಲ.

ಬಹಳ ವ್ಯವಸ್ಥಿತವಾಗಿ ಮೇಲಿನ ಆರೋಪಿಗಳ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇಷ್ಟೆಲ್ಲದರ ನಡುವೆ, ನಗದುರೂಪದ ಹಣವೆಲ್ಲ ಒಂದೇ ಖಾತೆಗೆ ಜಮೆ ಆಗುತ್ತಿತ್ತು. ಆ ಖಾತೆದಾರನ ವಿಳಾಸ ನಂ.36, ಪೋಯೆಸ್‌ ಗಾರ್ಡನ್‌, ಚೆನ್ನೈ. ಎಲ್ಲ ಖಾತೆಗಳಿಗೂ ಈ ಒಂದು ಖಾತೆಯಿಂದಲೇ ಹಣ ಹಂಚಿಕೆಯಾಗುತ್ತಿತ್ತು. 

ಪಳನಿಸ್ವಾಮಿ ಸಿಎಂ ಸಾಧ್ಯತೆ
ತಮಿಳುನಾಡಿನ ರಾಜಕೀಯದ ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಆಪ್ತ, ಹಾಲಿ ಲೋಕೋಪಯೋಗಿ ಸಚಿವ ಇ.ಕೆ. ಪಳನಿಸ್ವಾಮಿ ಎಐಎಡಿಎಂಕೆಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ದ್ದಾರೆ. ರಾಜ್ಯಪಾಲರು ಬುಧವಾರ ಪಳನಿಸ್ವಾಮಿ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಲಿದ್ದಾರೆ. 

ಅಕ್ರಮ ಆಸ್ತಿ ಹೊಂದಿರುವ ಸಂಬಂಧ ಆರೋಪ ಸಾಬೀ ತಾದ ಬಳಿಕ ಶಶಿಕಲಾರಿಗೆ ಸಿಎಂ ಆಗುವ ಅವಕಾಶ ತಪ್ಪಿತು. ಕೂಡಲೇ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ತಮ್ಮ ಆಪ್ತ ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಪನ್ನೀರ ಸೆಲ್ವಂರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಿದ್ದಾರೆ.

5 ಬಾರಿ ಶಾಸಕರಾಗಿರುವ ಪಳನಿಸ್ವಾಮಿ ಸೇಲಂ ಜಿಲ್ಲೆಯಲ್ಲಿ ಹೆಚ್ಚು ಪ್ರಭಾವ ಹೊಂದಿರುವ ರಾಜಕಾರಣಿ. ತಮಿಳುನಾಡಿನ ಪಶ್ಚಿಮ ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಗೌಂಡರ್‌ ಸಮುದಾಯಕ್ಕೆ ಸೇರಿರುವವರು. ಅಂದಿನ ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಪಳನಿಸ್ವಾಮಿ ಹೆಸರೂ ಕೇಳಿಬಂದಿತ್ತು. ಸ್ವತಃ ಶಶಿಕಲಾ ಅವರೇ ಅನುಮೋದಿಸಿದ್ದರು. 

ಶಾಸಕಾಂಗ ಪಕ್ಷದ ನಾಯಕರಾದವರೇ ಮುಖ್ಯಮಂತ್ರಿ ಯಾಗುವುದರಿಂದ, ಪಳನಿಸ್ವಾಮಿ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ.

ಎಂಟೇ ನಿಮಿಷದಲ್ಲಿ ಮುಗಿದ ಪ್ರಕ್ರಿಯೆ
ಸುಪ್ರೀಂ ಕೋರ್ಟ್‌ನ ಜಡ್ಜ್ಗಳು ಮಂಡಿಸಿದ 8 ನಿಮಿಷದ ತೀರ್ಪು ಶಶಿಕಲಾ ಅವರ ರಾಜಕೀಯ ಹುದ್ದೆಯನ್ನೇ ಕಸಿದುಕೊಂಡಿದೆ. ತೀರ್ಪು ನೀಡಲು ಇನ್ನು 5 ನಿಮಿಷ ಇದೆ ಎನ್ನುವಾಗ ತೀರ್ಪಿನ ಪ್ರತಿ ಭದ್ರ ಸೀಲ್‌ನ ಪಾಕೆಟ್‌ನಲ್ಲಿ ಕೋರ್ಟ್‌ ರೂಂ ನಂ.6ಕ್ಕೆ ಬಂದಿತ್ತು. ದ್ವಿಸದಸ್ಯ ಪೀಠದ ನ್ಯಾ. ಪಿ ಸಿ ಬೋಸ್‌ ಮತ್ತು ನ್ಯಾ. ಅಮಿತಾವ ರಾಯ್‌ 10.32ಕ್ಕೆ ಕೋರ್ಟನ್ನು ಪ್ರವೇಶಿಸಿದರು. 

ನ್ಯಾಯಾಲಯದ ಸಿಬ್ಬಂದಿ ಸೀಲ್‌ ಆಗಿದ್ದ 
ಪ್ಯಾಕೆಟ್‌ ಅನ್ನು ಒಡೆದು, ಇಬ್ಬರು ನ್ಯಾಯಾಧೀ ಶರ ಮುಂದಿಟ್ಟಾಗ ಅಲ್ಲಿ ಸೂಜಿ ಬಿದ್ದ ಸದ್ದೂ ಇರಲಿಲ್ಲ. ಕೆಲ ಕ್ಷಣ ಇಬ್ಬರೂ ಚರ್ಚಿಸುವಾಗ ಎಲ್ಲರ ಗಮನವೂ ಜಡ್ಜ್ಗಳ ಮೇಲಿತ್ತು. ತೀರ್ಪು ಆರಂಭಿಸುವಾಗ ನ್ಯಾ. ಪಿ.ಸಿ. ಬೋಸ್‌, “ನಿಮಗೂ ಗೊತ್ತು, ಇದು ಬಹುದೊಡ್ಡ ತೀರ್ಪು ಎನ್ನುವುದು. ನಾವು ಆ ಹೊರೆಯನ್ನು ಹೊತ್ತುಕೊಂಡಿದ್ದೇವೆ. ಮುಖ್ಯಾಂಶಗಳನ್ನಷ್ಟೇ ಓದುತ್ತೇವೆ’ ಎಂದು ಹೇಳಿದರು. ಕೂಡಲೇ ಅವರು ತೀರ್ಪಿನ ಆರಂಭಿಕ ಪ್ರಮುಖಾಂಶಗಳನ್ನು ಓದತೊಡಗಿದರು. ಅದು ಮುಗಿಯುವಾಗ ಗಂಟೆ 10.38. 
ಕೊನೆಯ 7- 8ನೇ ನಿಮಿಷದಲ್ಲಿ ನ್ಯಾ. ಅಮಿತವ ರಾಯ್‌ ದ್ವಿಸದಸ್ಯ ಪೀಠ ತೀರ್ಪನ್ನು ಮಂಡಿಸುತ್ತಾ, “ರಾಜಕೀಯ ರಂಗದಲ್ಲಿನ ಭ್ರಷ್ಟಾಚಾರ ಆತಂಕಕಾರಿ. ಅಧಿಕಾರದಲ್ಲಿ ಇರುವವರು ಭ್ರಷ್ಟಾಚಾರದಲ್ಲಿ ಮುಳುಗು ವುದು ತಪ್ಪು. ಈ ಆಸ್ತಿ ಪ್ರಕರಣವನ್ನು ಕೋರ್ಟು ಗಂಭೀರವಾಗಿ ಪರಿಗಣಿಸಿದೆ. ಇಲ್ಲಿ ಎಲ್ಲರೂ ಆರೋಪಿಗಳು’ ಎಂದು ಹೇಳಿ ಕರ್ನಾಟಕ ಹೈಕೋರ್ಟಿನ ತೀರ್ಪು ವಜಾಗೊಳಿಸಿ, ವಿಶೇಷ ಕೋರ್ಟಿನ ತೀರ್ಪನ್ನು ಎತ್ತಿಹಿಡಿದರು.

ಅಸೆಂಬ್ಲಿಯಿಂದ ಜಯಾ ಫೋಟೋ ಮಾಯ
ಸುಪ್ರೀಂನಲ್ಲಿ ಶಶಿಕಲಾ ಅವರ ಜೊತೆಗೆ ಜಯಲಲಿತಾ ಅವರೂ ಅಪರಾಧಿ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆ ಸಂಕೀರ್ಣ ದೊಳಗಿದ್ದ ಜಯಲಲಿತಾ ಅವರ ಪೋಟೋಗಳನ್ನು ತೆಗೆದುಹಾಕಲಾಗಿದೆ. ಹೀಗಾಗಿ, ಅಮ್ಮಾ ಅವರ ಫೋಟೋವನ್ನೇ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ಪನ್ನೀರ್‌ಸೆಲ್ವಂ ಅವರು ಮತ್ತೂಮ್ಮೆ ಸಿಎಂ ಗಾದಿಗೆ ಏರಿದರೆ, ಜಯಾ ಫೋಟೋ ಇಲ್ಲದೆಯೇ ಆಡಳಿತ ನಡೆಸಬೇಕಾಗುತ್ತದೆ.

ಇಂದು ಶಶಿಕಲಾ ಶರಣು
ಮಂಗಳವಾರ ಬೆಳಗ್ಗೆ ಶಶಿಕಲಾ ಅವರು ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಯಿದೆ. ಇನ್ನೊಂದೆಡೆ, ಇದೇ ವೇಳೆ, ರೆಸಾರ್ಟ್‌ನಿಂದ ಮಂಗಳವಾರ ಸಂಜೆ ಹೊರಬಂದ ಶಶಿಕಲಾ ಪೋಯೆಸ್‌ ಗಾರ್ಡನ್‌ನಲ್ಲಿ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. “ಸಮಸ್ಯೆಗಳು ನನಗೆ ಹೊಸದೇನಲ್ಲ. ಎಲ್ಲ ಕಷ್ಟಗಳನ್ನು ಎದುರಿಸಲೂ ನಾನು ಸಿದ್ಧಳಾಗಿದ್ದೇನೆ. ನನಗೆ ಬೆಂಬಲ ನೀಡಿದ ಎಲ್ಲ ಶಾಸಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ಕೇಸನ್ನು ಹಾಕಿದ್ದು ಡಿಎಂಕೆ. ಅದನ್ನು ನಾನು ನಿರ್ವಹಿಸುತ್ತೇನೆ. ಆದರೆ, ಶಾಸಕರಾದ ನೀವೆಲ್ಲರೂ ಡಿಎಂಕೆಯ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡಬೇಕು’ ಎಂದರು.

ಬಿಕ್ಕಟ್ಟಿನ ಹಿಂದೆ ಕೇಂದ್ರ ಸಚಿವರು: ಸ್ವಾಮಿ
ತಮಿಳುನಾಡಿನ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ಹಿಂದೆ ಇಬ್ಬರು ಕೇಂದ್ರ ಸಚಿವರ ಪಾತ್ರವಿದೆ ಎಂದು ಬಿಜೆಪಿ ಮುಖಂಡ, ಸಂಸದ ಸುಬ್ರಮಣಿಯನ್‌ ಸ್ವಾಮಿ ನೇರವಾಗಿ ಆರೋಪಿಸಿದ್ದಾರೆ. 1996ರಲ್ಲಿ ಜಯಲಲಿತಾ ಮೇಲೆ ಅಕ್ರಮ ಆಸ್ತಿ ವಿರುದ್ಧ ಪ್ರಕರಣ ಮೊಕದ್ದಮೆ ಹೂಡಿದ್ದ ಸ್ವಾಮಿ, “ನಾನು ಸೂಕ್ತ ಸಮಯದಲ್ಲಿ ಆ ಇಬ್ಬರು ಸಚಿವರ ಹೆಸರನ್ನು ಬಹಿರಂಗ ಪಡಿಸುವೆ. ಈ ಇಬ್ಬರು ಸಚಿವರು ಎಐಎಡಿಎಂಕೆ ಒಳಗಿನ ಗುದ್ದಾಟಕ್ಕೆ ನೇರ ಕಾರಣರಾಗಿದ್ದಾರೆ’ ಎಂದು ಹೇಳಿದ್ದಾರೆ.

“20 ವರ್ಷ ಕಾದಿದ್ದಕ್ಕೆ ಉತ್ತಮ ಫ‌ಲಿತಾಂಶವೇ ಬಂದಿದೆ. ನ್ಯಾಯಾಲಯ ಕಠಿಣ ನಿಲುವು ತೆಗೆದುಕೊಂಡಿದೆ. ಇಲ್ಲಿ ಯಾವ ಪಕ್ಷ ಭ್ರಷ್ಟಾಚಾರ ಮಾಡಿದೆ ಎಂಬುದು ಮುಖ್ಯವಲ್ಲ’ ಎಂದು ಅವರು ಹೇಳಿದ್ದಾರೆ.

ಜಯಾ ಆಸ್ತಿ, ಚಪ್ಪಲಿ, ಸೀರೆ ಏನಾಗುತ್ತೆ?
ವಿ.ಕೆ. ಶಶಿಕಲಾ ಜತೆಗೆ ಈಗ ಜೈಲು ಸೇರುತ್ತಿರುವ ಜೆ. ಇಳವರಸಿ, ವಿ.ಎನ್‌. ಸುಧಾಕರನ್‌ ಅವರಿಗೆ ಕೋರ್ಟ್‌ ದಂಡ ವಿಧಿಸಿ, ಒಟ್ಟಾರೆ 130 ಕೋಟಿ ರೂ. ದಂಡ ಕಟ್ಟಲು ಸೂಚಿಸಿದೆ. ಜಯಲಲಿತಾ ಅವರನ್ನೂ ಒಳಗೊಂಡಂತೆ ಈ ದಂಡವನ್ನು ಪಾವತಿಸಬೇಕಾಗುತ್ತದೆ. ಶಶಿಕಲಾ ಕೂಡಿಟ್ಟಿರುವ ಅಕ್ರಮ ಚಿನ್ನ, ವಜ್ರಾಭರಣ, ವ್ಯಾಪಕ ಎಸ್ಟೇಟು, ಕಟ್ಟಡಗಳನ್ನೂ ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್‌ ಆದೇಶ ಹೊರಡಿಸಿದೆ. ಇದರೊಂದಿಗೆ ಕೋರ್ಟು ಜಯಲಲಿತಾ ಅವರಿಗೆ ಸೇರಿದ 250ಕ್ಕೂ ಹೆಚ್ಚು ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ. ಮದ್ರಾಸ್‌ ಹೈಕೋರ್ಟಿನಿಂದ ಪ್ರಕರಣ ಬೆಂಗಳೂರಿಗೆ ವರ್ಗಾವಣೆ ಆದಾಗ ಜಯಾ ನಿವಾಸದಲ್ಲಿ ಜಫ್ತಿಯಾದ ವಸ್ತುಗಳನ್ನು ಇಲ್ಲಿಗೆ ತರಲಾಗಿತ್ತು. ಬೆಂಳೂರಿನ ಸ್ಪೆಷೆಲ್‌ ಕೋರ್ಟ್‌ ಅಧೀನದಲ್ಲಿ ಜಯಾಗೆ ಸೇರಿದ 750 ಲಕ್ಷುರಿ ಚಪ್ಪಲಿಗಳು, ಸಿಟಿ ಸಿವಿಲ್‌ ಕೋರ್ಟ್‌ನ ಅಧೀನದಲ್ಲಿ 40,500 ಸೀರೆಗಳಿವೆ. ಇವೆಲ್ಲವುಗಳನ್ನೂ ಹರಾಜು ಹಾಕುವ ಸಾಧ್ಯತೆಯಿದೆ.

ಪ್ರಕರಣ ಸಾಗಿ ಬಂದ ಹಾದಿ
1996 : ಆಗಿನ ಜನತಾ ಪಾರ್ಟಿ ಮುಖ್ಯಸ್ಥ ಸುಬ್ರಮಣಿಯನ್‌ ಸ್ವಾಮಿ ಅವರಿಂದ ಆಗಿನ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲು. 1991-96 ಅವಧಿಯಲ್ಲಿ 66.65 ಕೋಟಿ ರೂ. ಆಸ್ತಿ ಹೊಂದಿದ್ದಾರೆಂದು ದೂರು 

1996 ಡಿ.7: ಅಕ್ರಮ ಆಸ್ತಿ ಸೇರಿದಂತೆ ವಿವಿಧ ಆರೋಪಗಳಡಿ ಜಯಲಲಿತಾ ಬಂಧನ.

1997: ಚೆನ್ನೈ ಸೆಷನ್ಸ್‌ ಕೋರ್ಟನಲ್ಲಿ ಜಯಾ ಸೇರಿ, ಇತರ ಮೂವರು ಆರೋಪಿಗಳ ವಿರುದ್ಧ ವಿಚಾರಣೆ ಆರಂಭ.

1997 ಜೂ.4: ಜಯಾ, ಶಶಿಕಲಾ, ಶಶಿಕಲಾ ಇಳವರಸಿ, ಸೋದರ ಸಂಬಂಧಿ ಸುಧಾಕರನ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಚಾರ್ಜ್‌ ಶೀಟ್‌ ಸಲ್ಲಿಕೆ.

2001 ಸೆ.21: ಸಿಎಂ ಆಗಿ ಮತ್ತೆ ಅಧಿಕಾರಕ್ಕೇರಿದ ಜಯಲಲಿತಾ.

2003: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ.ಅನºಗಳನ್‌. ಪ್ರಕರಣ ತಮಿಳುನಾಡಿನಿಂದ ಹೊರಗೆ ವಿಚಾರಣೆ ನಡೆಸಲು ಮನವಿ. ಪ್ರಭಾವ ಬೀರುತ್ತಿರುವುದಾಗಿ ಆರೋಪ. 

2003 ನ.18: ಬೆಂಗಳೂರಿಗೆ ಅಕ್ರಮ ಆಸ್ತಿ ಪ್ರಕರಣ ವಿಚಾರಣೆ ವರ್ಗಾವಣೆ, ವಿಚಾರಣೆ ಹೊಣೆ ವಿಶೇಷ ಕೋರ್ಟ್‌ಗೆ.  

2013 ಸೆ.30: ಅನºಗಳನ್‌ ಮನವಿ ಮನ್ನಿಸಿದ ಸುಪ್ರೀಂ- ಜಯಲಲಿತಾ ಅವರಿಂದ ವಶಪಡಿಸಿಕೊಂಡ ಆಭರಣಗಳ ರಕ್ಷಣೆಗೆ ಆರ್‌ಬಿಐಗೆ ಸುಪ್ರೀಂ ಆದೇಶ.

2014 ಸೆ.27: ಜಯಲಲಿತಾ, ಶಶಿಕಲಾ ಮತ್ತಿಬ್ಬರ ವಿರುದ್ಧ ಆರೋಪ ಸಾಬೀತು, ಜಯಲಲಿತಾಗೆ 100 ಕೋಟಿ ರೂ. ದಂಡ, 4 ವರ್ಷ ಸಾಮಾನ್ಯ ಜೈಲು ಶಿಕ್ಷೆ. ಶಶಿಕಲಾ, ಮತ್ತಿಬ್ಬರಿಗೆ 4 ವರ್ಷ ಜೈಲು ತಲಾ 10 ಕೋಟಿ ರೂ. ದಂಡ. 

2014 ಸೆ.29: ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಜಯಲಲಿತಾ, ಜಾಮೀನಿಗೆ ಅರ್ಜಿ. 

2014 ಅ.7: ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್‌. 

2014 ಅ.17: ಜಯಲಲಿತಾಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌. 

2014 ಅ.18: ಪರಪ್ಪನ ಅಗ್ರಹಾರ ಜೈಲಿಂದ ಜಯಲಲಿತಾ ಬಿಡುಗಡೆ, ಮೂರು ತಿಂಗಳ ಒಳಗಾಗಿ ವಿಚಾರಣೆ ಮುಕ್ತಾಯಗೊಳಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ. 

2015, ಮೇ.11: ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ, ಶಶಿಕಲಾ ಮತ್ತಿಬ್ಬರ ಖುಲಾಸೆ. 

2015 ಜೂ.23: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ.

2016 ಜೂ.7: ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌. 

2016, ಡಿ.5: ಅನಾರೋಗ್ಯದಿಂದಾಗಿ ಜಯಲಲಿತಾ ಚೆನ್ನೈನಲ್ಲಿ ನಿಧನ. 

2017 ಫೆ.14: ಶಶಿಕಲಾ ಮತ್ತು ಆಕೆಯ ಇಬ್ಬರು ಸಂಬಂಧಿಗಳು ಅಪರಾಧಿಗಳೆಂದು ವಿಶೇಷ ಕೋರ್ಟ್‌ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌.

Advertisement

Udayavani is now on Telegram. Click here to join our channel and stay updated with the latest news.

Next