Advertisement

ಯಡಿಯೂರಪ್ಪನವರ ಸಿಎಂ ಅಧಿಕಾರ: ಬೆಳಗಾವಿಯಿಂದಲೇ ಆರಂಭ ಬೆಳಗಾವಿಯಿಂದಲೇ ಅಂತ್ಯ

01:08 AM Jul 27, 2021 | Team Udayavani |

ವರದಿ: ಭೈರೋಬಾ ಕಾಂಬಳೆ

Advertisement

 ಬೆಳಗಾವಿ: 2019ರಲ್ಲಿ ಉತ್ತರ ಕನಾಟಕದಲ್ಲಿ ಅಪ್ಪಳಿಸಿದ್ದ ಪ್ರವಾಹದ ವೇಳೆ ಬೆಳಗಾವಿಯಿಂದಲೇ ನಾಲ್ಕನೇ ಬಾರಿಯ ಮುಖ್ಯಮಂತ್ರಿಯ ಆಡಳಿತ ಆರಂಭಿಸಿದ್ದ ಬಿ.ಎಸ್. ಯಡಿಯೂರಪ್ಪನವರು ಈಗ 2021 ರ ಪ್ರವಾಹದ ಮಧ್ಯೆ ಬೆಳಗಾವಿಯಿಂದಲೇ ತಮ್ಮ ಅಧಿಕಾರವನ್ನು ಅಂತ್ಯಗೊಳಿಸಿದ್ದು ವಿಶೇಷವಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನಾ ದಿನವಾದ ರವಿವಾರ(ಜು.25) ಬಿಎಸ್. ಯಡಿಯೂರಪ್ಪನವರು ಬೆಳಗಾವಿ ಜಿಲ್ಲೆಯ ಪ್ರವಾಹಬಾಧಿತ ಸ್ಥಳಗಳಿಗೆ ಭೇಟಿ ನೀಡಿದ್ದರು. ಬೆಳಗಾವಿ ಪ್ರವಾಸದಿಂದಲೇ ತಮ್ಮ ಆಡಳಿತವನ್ನು ಮುಗಿಸಿದ್ದಾರೆ. ಮೊದಲಿನಿಂದಲೂ ಬೆಳಗಾವಿಗೂ ಯಡಿಯೂರಪ್ಪನವರಿಗೂ ಅವಿನಾಭಾವ ಸಂಬಂಧವಿದೆ.

ಈಗ ಕೆಲವು ದಿನಗಳಿಂದ ನಾಯಕತ್ವ ಬದಲಾವಣೆಯ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ತುಸು ವಿಚಲಿತರಾಗಿದ್ದ ಯಡಿಯೂರಪ್ಪನವರು ರವಿವಾರ ಜುಲೈ 24ರಂದು ಬೆಳಗಾವಿ ಪ್ರವಾಸ ಕೈಗೊಂಡು ಕುತೂಹಲ ಮೂಡಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡು ಬೆಳಗಾವಿಯ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದರು. ಬಹಳ ತಾಳ್ಮೆಯಿಂದಲೇ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುವಾಗ ಸ್ವಲ್ಪ ಸಿಡುಕಿನಿಂದಲೇ ಕೆಲ ಪ್ರಶ್ನೆಗಳಿಗೆ ಉತ್ತಿರಿಸಿ ಕಾದು ನೋಡೋಣ, ಕಾದು ನೋಡೋಣ ಎಂದಷ್ಟೇ ಹೇಳಿ ಬೆಂಗಳೂರಿನತ್ತ ವಾಪಸ್ಸಾಗಿದ್ದರು.

೨೦೧೯ರಲ್ಲಿ ಭೀಕರ ಪ್ರವಾಹದ ವೇಳೆಯೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. ಇನ್ನೂ ಸಚಿವ ಸಂಪುಟ ಪೂರ್ತಿ ಇಲ್ಲದ್ದಿದ್ದರೂ ಮೊದಲ ಪ್ರವಾಸವನ್ನು ಬೆಳಗಾವಿಯಿಂದ ಆರಂಭಿಸಿದ್ದರು. ಏಕಾಂಗಿಯಾಗಿಯೇ ನೆರೆ ಪರಿಸ್ಥಿತಿಯನ್ನು ಅವಲೋಕಿಸಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

Advertisement

ಬೆಳಗಾವಿಯೊಂದಿಗೆ ಅವಿನಾಭಾವ ಸಂಬಂಧ:

ಮೊದಲಿನಿಂದಲೂ ಬೆಳಗಾವಿಗೆ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಯಡಿಯೂರಪ್ಪನವರು 1988 ರಿಂದ ಗಡಿ ಜಿಲ್ಲೆಗೆ ಪಕ್ಷ ಸಂಘಟನೆಗೆ ಬರುತ್ತಿದ್ದರು. ಬಸ್‌ನಲ್ಲಿಯೇ ಪ್ರವಾಸ ಮಾಡಿ ಬೆಳಗಾವಿಗೆ ಬರುತ್ತಿದ್ದರು. ಬಿಜೆಪಿಯ ಸಂಘಟಕ ದಿ. ಅರ್ಜುನ ಹಂಪಿಹೊಳಿ ಅವರೊಂದಿಗೆ ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದರು. ಬಸ್ ನಿಲ್ಲದಾಣದಲ್ಲಿಯೇ ಚಪಾತಿ, ರೊಟ್ಟಿ, ಪಲ್ಯೆ ತಿಂದು ಯಡಿಯೂರಪ್ಪನವರು ಶಿವಮೊಗ್ಗ ಬಸ್ ಹತ್ತುತ್ತಿದ್ದರು. ಅನೇಕ ಸಲ ಬೆಳಗಾವಿಗೆ ಬಂದು ಪಕ್ಷ ಸಂಗಟನೆಯ ಸಭೆಗಳನ್ನು ನಡೆಸಿರುವ ಶ್ರೇಯಸ್ಸು ಯಡಿಯೂರಪ್ಪನವರಿಗೆ ಸಲ್ಲುತ್ತದೆ.

ಲಿಂಗಾಯತ ನಾಯಕರಾದ ಬಿಎಸ್‌ವೈ:

1992ರಲ್ಲಿ ಜನತಾ ಪರಿವಾರದಿಂದ ಅಮರಸಿಂಹ ಪಾಟೀಲ ಬಿಜೆಪಿಗೆ ಸೇರಿದ್ದರು. ಗೋಕಾಕನ ವಾಲ್ಮೀಕಿ ಕ್ರೀಡಾಂಗಣದಲ್ಲಿ 100-200 ಜನ ಸೇರುತ್ತಿದ್ದ ಆಗಿನ ಕಾಲದಲ್ಲಿ ಯಡಿಯೂರಪ್ಪ ಬಂದಾಗ 20 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಜಿಲ್ಲೆಯಾದ್ಯಂತ ಹವಾ ಎಬ್ಬಿಸಿದರು. ಆಗಿನಿಂದಲೇ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸಂಘಟಿಸುವಲ್ಲಿ ಬಿಎಸ್‌ವೈ ಕಾರ್ಯಪ್ರವೃತ್ತರಾದರು. ಉತ್ತರ ಕರ್ನಾಟಕದ ಜನತಾ ಪರಿವಾರದಿಂದ 54 ಜನ ನಾಯಕರು ಬಿಜೆಪಿ ಸೇರ್ಪಡೆಯಾದರು. ನಂತರದ ದಿನಗಳಲ್ಲಿ ಬಿಎಸ್‌ವೈ ಲಿಂಗಾಯತ ನಾಯಕರಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇಡೀ ದಿನ ಬೆಳಗಾವಿಯಲ್ಲೇ ಇದ್ದರು :

ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ದಿಢೀರ್ ಬೆಳಗಾವಿಯತ್ತ ರವಿವಾರ ಆಗಮಿಸಿದ್ದ ಯಡಿಯೂರಪ್ಪನವರು ಇಡೀ ದಿನ ಇಲ್ಲಿಯೇ ಠಿಕಾಣಿ ಹೂಡಿದ್ದರು. ಕಂದಾಯ ಸಚಿವ ಆರ್. ಅಶೋಕ, ಡಿಸಿಎಂಗಳಾದ ಲಕ್ಷö್ಮಣ ಸವದಿ, ಗೋವಿಂದ ಕಾರಜೋಳ ಅವರನ್ನು ತಮ್ಮ ಕಾರಿನ ಹಿಂದಬಸಿ ಸೀಟ್‌ನಲ್ಲಿ ಕೂರಿಸಿಕೊಂಡು ಎಲ್ಲ ಕಡೆಗೂ ತಿರುಗಾಡಿದ್ದರು. ನಂತರ ಸಭೆ ನಡೆಸುವಾಗಲೂ ಈ ಮೂವರೂ ಸಚಿವರು ಜೊತೆಗೇ ಇದ್ದರು. ಬೆಂಗಳೂರಿಗೆ ವಾಪಸ್ ಹೋಗುವಾಗಲೂ ಇವರನ್ನು ಬಿಎಸ್‌ವೈ ಜೊತೆಗೆ ಕರೆದುಕೊಂಡು ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next