Advertisement

ಲಂಕೇಶ್‌ ನಾಡು ಕಂಡಂತಹ ಅದ್ಭುತ ಪ್ರತಿಭೆ

01:17 PM Mar 13, 2017 | |

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಕಂಡು ಬರುತ್ತಿರುವ ಅಧಿಕಾರ ಭೋಗ, ಹಣದ ಹಿಂದೆ ಬಿದ್ದಿರುವ ಮನಸ್ಸುಗಳಿಂದಾಗಿ ಸಾಮಾಜಿಕ ಚಿಂತನೆಯೇ ಕಾಣೆಯಾಗುತ್ತಿದೆ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದ್ದಾರೆ. 

Advertisement

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಿರಿಯ ಪತ್ರಕರ್ತ ಪಿ. ಲಂಕೇಶ್‌ರವರ 82ನೇ ಜನ್ಮ ದಿನ, ಗೌರಿ ಲಂಕೇಶ್‌ ಪತ್ರಿಕೆಯ 12ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಈಗ ಸಾಮಾಜಿಕ ವಾತಾವರಣ ಹಿತಕರವಾಗಿಲ್ಲ. ಅಧಿಕಾರ, ಹಣದ ಬೆನ್ನತ್ತಿರುವ ಮನೋಸ್ಥಿತಿಯಿಂದಾಗಿ ಒಳ್ಳೆಯ ಸಾಮಾಜಿಕ ಚಿಂತನೆಗಳೇ ಕಾಣೆಯಾಗುತ್ತಿರುವುದು ನಿರಾಶೆ ಮೂಡಿಸುತ್ತಿದೆ.

ಆದರೂ, ಸಮಾಜದ ಸಮಗ್ರ ಬದಲಾವಣೆಗೆ ತೀರಾ ಅಗತ್ಯವಾಗಿರುವ  ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದುತಿಳಿಸಿದರು. ಹಿರಿಯ ಪತ್ರಕರ್ತ ಪಿ. ಲಂಕೇಶ್‌ ನಾಡು ಕಂಡಂತಹ ಅಪ್ರತಿಮ, ಅದ್ಭುತ ಪ್ರತಿಭೆ. ಆಡು ಮುಟ್ಟದ ಸೊಪ್ಪಿಲ್ಲ… ಎನ್ನುವಂತೆ ಪಿ. ಲಂಕೇಶ್‌ ಕೆಲಸ ಮಾಡದೇ ಇರುವಂತಹ ಕ್ಷೇತ್ರವೇ ಇಲ್ಲ.

ಯಾವುದೇ ಕ್ಷೇತ್ರದಲ್ಲೇ ಆಗಲಿ ಅವರು ಮೈಗೂಡಿಸಿಕೊಂಡಿದ್ದ ಕಾಯಕಶ್ರದ್ಧೆ, ಹೋರಾಟದ  ಛಲ, ಮನೋಭಾವ ಎಲ್ಲ ಕ್ಷೇತ್ರದಲ್ಲಿ ಸಾಧನೆಗೆಕಾರಣವಾಯಿತು. ಸಾಯುವ ಮುನ್ನಾ  ದಿನ ಸಂಪಾದಕೀಯ ಬರೆದಿದ್ದು ಅವರಲ್ಲಿನ ಕಾಯಕಶ್ರದ್ಧೆಗೆ ಸಾಕ್ಷಿ ಎಂದು ತಿಳಿಸಿದರು. 

ಕನಗವಳ್ಳಿಯಂತಹ ಕುಗ್ರಾಮದ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಲಂಕೇಶ್‌ ಬಡತನ ಹಾಗೂ ಅನಾರೋಗ್ಯದ ಜೊತೆಗೆ ಬದುಕಿನ ಹೋರಾಟ ನಡೆಸಿದವರು. ವೈದ್ಯರಾಗಬೇಕೆಂದುಕೊಂಡಿದ್ದ ಅವರು ಕೊನೆಗೆಆದುದ್ದು ಆಂಗ್ಲ ಉಪನ್ಯಾಸಕ. ಸಾಮಾಜಿಕ ಕಳಕಳಿ, ಜನ ಜಾಗೃತಿ ಹಿನ್ನೆಲೆಯಲ್ಲಿ ತಮ್ಮದೇ ಹೆಸರಿನ ವಾರಪತ್ರಿಕೆ ಪ್ರಾರಂಭಿಸುವ ಮೂಲಕ ಬಂಡಾಯದ ಧ್ವನಿ ಮೊಳಗಿಸಿದರು.

Advertisement

ತಮ್ಮ ಪತ್ರಿಕೆಯಲ್ಲಿ ಅನೇಕ ಬಂಡಾಯ ಬರಹಗಾರರಿಗೆ ಅವಕಾಶ ಕೊಡುವ ಮೂಲಕ ಬಂಡಾಯದ ನೆಲೆಯಲ್ಲಿ ನೈತಿಕ ನೆಲೆಗಟ್ಟು ಭದ್ರಪಡಿಸುವ ಪ್ರಯತ್ನ ಮಾಡಿದರು. ಅನೇಕಾನೇಕ ನಿಷ್ಟುರ ಲೇಖನಗಳ ಮೂಲಕ ತಪ್ಪನ್ನು ಸರಿಪಡಿಸುವ ಗಂಭೀರ ಪ್ರಯತ್ನ ನಡೆಸಿದರು.

ಮಠ-ಸ್ವಾಮೀಜಿಯವರೊಂದಿಗೆ ಸದಾ ಅಂತರ ಕಾಪಾಡಿಕೊಂಡೇ ಬಂದಿದ್ದ ಅವರು ತಮ್ಮ ಲೇಖನವನ್ನೇ ಪ್ರಕಟಿಸರಲಿಲ್ಲ ಎಂದು ತಿಳಿಸಿದರು. ಲಂಕೇಶ್‌ ಎಂದಿಗೂ ತಮ್ಮ ಪತ್ರಿಕೆಯನ್ನು ಇನ್ನೊಬ್ಬರ ತೇಜೋವಧೆ, ಮತ್ತೂಬ್ಬರ ಪರವಾಗಿ ಬಳಸಿಕೊಳ್ಳಲೇ ಇಲ್ಲ. ಬಂಡಾಯ ಪ್ರಜ್ಞೆಯ ವಿಚಾರಗಳ ಮೂಲಕ ವಾಸ್ತವಿಕ ಸತ್ಯ ತಿಳಿಸುವ ಕೆಲಸ ಮಾಡಿದರು.

ರಂಜನೆ, ಚಿಂತನೆ ಮತ್ತು ಎಚ್ಚರಿಕೆ ಅವರ ಲೇಖನಗಳಲ್ಲಿ ಹಾಸು ಹೊಕ್ಕಾಗಿತ್ತು ಎಂದು ತಿಳಿಸಿದರು. ಲಂಕೇಶ್‌ ಇದ್ದಿದ್ದರೆ… ವಿಷಯ ಕುರಿತು ಮಾತನಾಡಿದ ಲೇಖಕ ಪ್ರೊ| ರಾಜೇಂದ್ರ ಚೆನ್ನಿ, ಲಂಕೇಶ್‌ ಇದ್ದಿದ್ದರೆ ಇಂದಿನ ಸಾಮಾಜಿಕ ತಲ್ಲಣ, ದಿಗಮೆ ವಾತಾವರಣದಲ್ಲಿ ನಮ್ಮ ಶತ್ರುಗಳು ಯಾರು, ಏನೂ ಮಾಡಬೇಕು ಎಂಬ ಸ್ಪಷ್ಟ ಮಾರ್ಗದರ್ಶನ ನೀಡುತ್ತಿದ್ದರು.

ತಮ್ಮೆಲ್ಲರ ಪ್ರಕಾರ ಲಂಕೇಶ್‌ ಈಗಲೂ ನಮ್ಮೊಂದಿಗೆ ಇದ್ದಾರೆ ಎಂದು ಪ್ರತಿಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಗೌರಿ ಲಂಕೇಶ್‌ ಮಾತನಾಡಿ, ಮಣಿಪುರ ವಿಧಾನ ಸಭಾ ಚುನಾವಣೆಯಲ್ಲಿ 16 ವರ್ಷ ಹೋರಾಟ ನಡೆಸಿದ ಐರೋಮ್‌ ಶರ್ಮಿಳಾಗೆ 90 ಮತ ಬಂದಿರುವುದನ್ನು ನೋಡಿದರೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೇಗೆ ಒಪ್ಪಿಕೊಳ್ಳಲಿಕ್ಕಾಗುತ್ತದೆ. 

ಮೋದಿ ಮೇನಿಯಾ ವಿರುದ್ಧ ಎಲ್ಲ ಪ್ರಗತಿಪರ ಸಂಘಟನೆಗಳು ಒಂದಾಗಬೇಕಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ಕುರ್ಕಿ, ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ವಕೀಲ ಅನೀಸ್‌ ಪಾಷಾ ಮಾತನಾಡಿದರು. ಪ್ರೊ| ಬಿ.ವಿ. ವೀರಭದ್ರಪ್ಪ, ಬಿ.ಎಂ. ಹನುಮಂತಪ್ಪ, ಚಂದ್ರಶೇಖರ ತೋರಣಗಟ್ಟೆ, ಹೆಗ್ಗೆರೆ ರಂಗಪ್ಪ, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ ಇತರರು ಇದ್ದರು. 

ಬಿ. ಚಂದ್ರೇಗೌಡ ಪ್ರಾರ್ಥಿಸಿದರು. ಐರಣಿ ಚಂದ್ರು ಜಾಗೃತಿ ಗೀತೆ ಹಾಡಿದರು. ಗಿರೀಶ್‌ ತಾಳಿಕಟ್ಟೆ ಸ್ವಾಗತಿಸಿದರು. ಜಿ.ಎಚ್‌. ರಾಜಶೇಖರ್‌ ಗುಂಡಗಟ್ಟಿ ನಿರೂಪಿಸಿದರು. ಪ್ರೊ| ಬಿ.ವಿ. ವೀರಭದ್ರಪ್ಪನವರ ನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು.  

Advertisement

Udayavani is now on Telegram. Click here to join our channel and stay updated with the latest news.

Next