ಚಿಕ್ಕೋಡಿ: ಕೋವಿಡ್ ಲಾಕಡೌನ್ ಎಲ್ಲರನ್ನು ಮನೆಯಲ್ಲಿ ಕೂಡ್ರಿಸಿದ್ದು, ಎಲ್ಲರಿಗೂ ಗೊತ್ತಿರುವ ವಿಷಯ. ಲಾಕಡೌನ್ ವೇಳೆಯಲ್ಲಿ ಶಾಲಾ-ಕಾಲೇಜು ಬಂದ್ ಆಗಿ ಆಟ, ಮೋಜು ಮಸ್ತಿಯಲ್ಲಿ ಕಾಲ ಕಳೆದವರೇ ಹೆಚ್ಚು, ಆದರೆ ಗಡಿ ಭಾಗದ ನಿಪ್ಪಾಣಿ ನಗರದ ಯುವಕನೋರ್ವ ಲಾಕಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಇಲೆಕ್ಟ್ರಿಕಲ್ ಬೈಕ್ ತಯಾರಿಸಿ ಸಾಧನೆಯತ್ತ ಮುಖ ಮಾಡಿದ್ದಾನೆ.
ಹೌದು, ಗಡಿ ಭಾಗದ ನಿಪ್ಪಾಣಿ ನಗರದ ನಿವಾಸಿ ವಾಸಂತಿ ಹಾಗೂ ಪ್ರಕಾಶ ಸುತಾರ ದಂಪತಿ ಪುತ್ರ ಹತ್ತನೆ ತರಗತಿಯಲ್ಲಿ ಓದುತ್ತಿರುವ ಪ್ರಥಮೇಶ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್‌ಚಾಲಿತ ಬೈಕ್ ತಯಾರಿಸಿ ಮಾದರಿಯಾಗಿದ್ದಾನೆ.ಕುಟುಂಬಸ್ಥರ ಸಹಕಾರದಿಂದ ಹಳೆಯ ನಿರುಪಯುಕ್ತ ಬೈಕ್‌ಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಅವುಗಳಿಗೆ ಲಿಡ್ ಆ್ಯಸಿಡ್ 48 ವೋಲ್ಟೆಜ್ ಬ್ಯಾಟರಿ, 48 ವೋಲ್ಟೇಜ್‌ಮೋಟರ್, 750 ವ್ಯಾಟ್ ಸಾಮರ್ಥ್ಯದ ಮೋಟರ್ ಬಳಕೆ ಮಾಡಿ, ಮೋಟರ್ ಮತ್ತು ಬ್ಯಾಟರಿ ನಿಯಂತ್ರಣ ಯಂತ್ರ ಬಳಸಿ ಇಪ್ಪತ್ತೈದು ಸಾವಿರ ವೆಚ್ಚದಲ್ಲಿ ಬೈಕ್ ತಯಾರಿಸಿ ಸಾಧನೆ ಮೆರೆದಿದ್ದಾನೆ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಈ ಸಂಕಷ್ಟದಿಂದ ಪಾರಾಗಲು ವಿದ್ಯುತ್ ಚಾಲಿತ ಬೈಕ್ ಗಳ ಅವಶ್ಯಕತೆಯಿದೆ ಎನ್ನುತ್ತಾನೆ ಬಾಲಕ ಪ್ರಥಮೇಶ.
ಇನ್ನು ಈ ಇಲಕ್ಟ್ರಿಕಲ್ ಬೈಕ್ 4 ಗಂಟೆ ಫುಲ್ ಚಾರ್ಜಿಂಗ್ ಮಾಡಿದರೆ ಸುಮಾರು 35 ಕಿ.ಮಿ ಕ್ರಮಿಸುತ್ತದೆ. ಹಾಗೂ ಗಂಟೆಗೆ 40 ಕಿಮಿವೇಗದಲ್ಲಿ ಓಡುವ ಈ ಬೈಕ್ ನ ವಿಶೇಷ ಎಂದರೆ ರಿವರ್ಸ್ ಕೂಡ ಚಲಿಸುತ್ತದೆ. ಪ್ರಥಮೇಶನ ಸಾಧನೆಗೆ ಕುಟುಂಬಸ್ಥರು ಸಹಕಾರ ನೀಡಿದ್ದು, ಇವರ ತಂದೆ ಪ್ರಕಾಶ ಸುತಾರ ಕೂಡ ವೃತ್ತಿಯಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಕೋವಿಡ್ ಲಾಕ್‌ಡೌನ್ ವೇಳೆ ತಮ್ಮ ಮಗ ಈ ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ್ದು. ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನಿಪ್ಪಾಣಿ ನಗರದ ಮಾಡರ್ನ ಇಂಗ್ಲಿಷ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನಾನು ಶಾಲೆಯಲ್ಲಿ ವಸ್ತುಪ್ರದರ್ಶನ ಇದ್ದಾಗ ವಿದ್ಯುತ್ ಚಾಲಿತ ಬೈಕ್ ಗಳ ಕುರಿತು ಪ್ರಯೋಗ ಮಾಡಿದ್ದೆ. ಲಾಕಡೌನ್ ಅವಧಿಯಲ್ಲಿ ಹಳೆ ಬೈಕ್ ಗಳ ಬಿಡಿ ಭಾಗಗಳನ್ನು ಉಪಯೋಗಿಸಿ ವಿದ್ಯುತ್ ಚಾಲಿತ ಬೈಕ್ ತಯಾರಿಸಿ ಓಡಿಸಿದ್ದೇನೆ. ದೇಶ ಸೇವೆ ಜೊತೆಗೆ ತಂದೆ-ತಾಯಿ ಪ್ರೇರಣೆಯಿಂದ ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜನೀಯರಿಂಗ್ ಮಾಡುವ ಆಸಕ್ತಿ ಇದೆ.
ಪ್ರಥಮೇಶ ಸುತಾರ, ವಿದ್ಯುತ್ ಚಾಲಿತ ಬೈಕ್ ತಯಾರಕ.
ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡುವ ಛಲ ಹೊಂದಿರುವ ಪುತ್ರ ಪ್ರಥಮೇಶನು ನಿರುಪಯುಕ್ತ ಬೈಕ್ ಬಿಡಿ ಭಾಗಗಳನ್ನು ಉಪಯೋಗಿಸಿಕೊಂಡು ವಿದ್ಯುತ್ ಚಾಲಿತ ಬೈಕ್ ತಯಾರಿಸಿದ್ದು ಸಂತಸ ತಂದಿದೆ.
-ವಾಸಂತಿ ಸುತಾರ, ತಾಯಿ.