ಧಾರವಾಡ: ಮಕ್ಕಳ ಭವಿಷ್ಯಕ್ಕಾಗಿ ದಿನವಿಡೀ ಕಷ್ಟಪಡುವ ತಂದೆ-ತಾಯಿಯ ಸಂಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತವಳು. ಇಬ್ಬರು ತಮ್ಮಂದಿರ ಮುಂದಿನ ಭವಿಷ್ಯ ರೂಪಿಸಲು ಹಾಗೂ ಪೋಷಕರ ಸಂಕಷ್ಟ ಪರಿಹಾರಮಾಡುವತ್ತ ದಿಟ್ಟ ಹೆಜ್ಜೆ. ಅದಕ್ಕಾಗಿ ಕಷ್ಟಪಟ್ಟು ಬೆವರು ಹರಿಸಿದ ಫಲವೇ ಈಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ.
ಇದು ಕಥೆಯಲ್ಲ. ಭೀಮಕ್ಕ ಚವ್ಹಾಣ ಎಂಬುವಳ ಜೀವನಗಾಥೆ. ಧಾರವಾಡ ತಾಲೂಕಿನಿಂದ 30 ಕಿಮೀ ದೂರದಲ್ಲಿರುವ ತೇಗೂರ ಗ್ರಾಪಂ ವ್ಯಾಪ್ತಿಯ ಮದಿಕೊಪ್ಪ ಗ್ರಾಮದ ಭೀಮಕ್ಕ ಈಗ ಭಾರತೀಯ ಸೇನೆಗೆ ಆಯ್ಕೆ ಆಗಿದ್ದು, ಇದರಿಂದ ಕುಟುಂಬಸ್ಥರಲ್ಲಿ ಅಷ್ಟೇ ಅಲ್ಲ ಇಡೀ ಗ್ರಾಮಸ್ಥರ ಸಂತಸ ಇಮ್ಮಡಿಗೊಳಿಸಿದೆ. ಗ್ರಾಮದ ಎಲ್ಲರ ಬಾಯಲ್ಲೂ ನಿಜಕ್ಕೂ “ಭೀಮ’ಕ್ಕಳಾಗಿದ್ದಾಳೆ.
ಮಂಗಳೂರು ವಿಭಾಗದಿಂದ ಆಯ್ಕೆ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಮಾಡಿ 100 ಹುದ್ದೆ ಭರ್ತಿ ಮಾಡಿಕೊಳ್ಳಲು ನಿರ್ಣಯಿಸಲಾಗಿತ್ತು. ಈ ಹುದ್ದೆಗಳ ನೇಮಕಾತಿಗಾಗಿ 8.5 ಲಕ್ಷ ಅರ್ಜಿಗಳು ಬಂದಿದ್ದವು. ಈ 100 ಹುದ್ದೆಗಳಲ್ಲಿ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ 5 ರಾಜ್ಯಗಳನ್ನು ಸೇರಿಸಿ ದಕ್ಷಿಣ ಭಾರತಕ್ಕೆ 20 ಹುದ್ದೆ ನಿಗದಿಗೊಳಿಸಿ, ಶೇ.86ಕ್ಕಿಂತ ಹೆಚ್ಚು ಅಂಕ ಪಡೆದ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಲಾಗಿತ್ತು. ಇದರಲ್ಲಿ ಆಯ್ಕೆಯಾದವರಿಗೆ ಆ.1ರಂದು ಬೆಳಗಾವಿಯಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಆಯ್ಕೆಯಾಗಿದ್ದ 175 ಮಹಿಳೆಯರ ಪೈಕಿ ಎನ್‌ಸಿಸಿ “ಸಿ’ ಪ್ರಮಾಣಪತ್ರ ಹೊಂದಿದ 12 ಜನರನ್ನು ಹೊರತುಪಡಿಸಿ ಉಳಿದವರು ಅ.26ರಂದು ಅಂತಿಮ ಪರೀಕ್ಷೆ ಬರೆದಿದ್ದರು. ರವಿವಾರ ಫಲಿತಾಂಶ ಪ್ರಕಟಗೊಂಡಿದ್ದು, ಭೀಮಕ್ಕ ಅರ್ಹತೆ ಪಡೆದಿದ್ದಾಳೆ. ಉತ್ತರ ಕರ್ನಾಟಕದ 11 ಜಿಲ್ಲೆಗಳನ್ನು ಸೇರಿಸಿ ರೂಪಿಸಿದ್ದ ಮಂಗಳೂರು ವಿಭಾಗದಿಂದ ಆಯ್ಕೆಗೊಂಡ ಏಕೈಕ ಮಹಿಳೆ ಭೀಮಕ್ಕ.
ಕಿತ್ತೂರಿನಲ್ಲಿ ತರಬೇತಿ: ಚನ್ನಮ್ಮನ ಕಿತ್ತೂರಿನಲ್ಲಿರುವ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದಲ್ಲಿ ಎರಡು ತಿಂಗಳ ಕಾಲ ಭೀಮಕ್ಕಳಿಗೆ ತರಬೇತುದಾರ ಪರ್ವೆಜ್ ಹವಾಲ್ದಾರ ತರಬೇತಿ ನೀಡಿದ್ದರು. 20 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿ ಪಡೆದು ಈ ಕೇಂದ್ರ ಆರಂಭಿಸಿ 2 ವರ್ಷದಲ್ಲಿ 122 ಯುವಕರನ್ನು ಸೇನೆಗೆ ಸೇರಿಸಿದ ಕೀರ್ತಿ ಇವರಿಗಿದೆ. ಈ ಕೇಂದ್ರದಲ್ಲಿ ಮೂರು ಯುವತಿಯರಿಗೆ ತರಬೇತಿ ನೀಡಿದ್ದು, ಈ ಪೈಕಿ ಭೀಮಕ್ಕ ಮಾತ್ರ ಆಯ್ಕೆಯಾಗಿದ್ದಾಳೆ.
ಕುಟುಂಬದ ಕಷ್ಟಗಳಿಗೆ ಕೈ ಜೋಡಿಸಲು ಕೆಲಸಕ್ಕಾಗಿ ಅರ್ಜಿ ಹಾಕಿದ್ದೆ. ಅದಕ್ಕಾಗಿ ಒಂದಿಷ್ಟು ತಯಾರಿ ಮಾಡಿಕೊಂಡಿದ್ದೆ. ಮನೆಯಲ್ಲಿ ಪೋಷಕರೊಂದಿಗೆ ಮಾಡಿದ ಕಷ್ಟದ ಕೆಲಸಗಳೇ ದೈಹಿಕ ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿತು. ಇನ್ನೊಂದಿಷ್ಟು ಕಷ್ಟಪಟ್ಟು ಓದಿದ ಪರಿಣಾಮ ಈ ಅವಕಾಶ ಒದಗಿ ಬಂದಿದ್ದು, ಖುಷಿ ತಂದಿದೆ.
–ಭೀಮಕ್ಕ ಚವ್ಹಾಣ, ಸೇನೆಗೆ ಆಯ್ಕೆಯಾದ ಯುವತಿ
ನಾವಂತೂ ಶಾಲಿ ಕಲಿತಿಲ್ಲ. ಮಗಳು ಕಲೀತಾಳೆ ಅಂದಳು. ಅದಕ್ಕಾಗಿ ನಮಗೆ ಎಷ್ಟೇ ಕಷ್ಟವಾದ್ರೂ ಮಗಳನ್ನು ಓದಿಸ್ತಾ ಇದೇವಿ. ಈಗ ನಮ್ಮ ಮಗಳು ನಾವೇ ಹೆಮ್ಮೆ ಪಡುವಷ್ಟು ಸಾಧನೆ ಮಾಡಿದ್ದು ಖುಷಿ ಆಗೈತ್ರಿ.
– ನೀಲಮ್ಮ ಚವ್ಹಾಣ, ಭೀಮಕ್ಕಳ ತಾಯಿ
ಎರಡು ತಿಂಗಳು ಅಷ್ಟೇ ನಾವು ತರಬೇತಿ ನೀಡಿದ್ದು. ಆ ಅವಧಿಯಲ್ಲಿ ಪರಿಪಕ್ವವಾಗಿದ್ದ ಭೀಮಕ್ಕ ಚವ್ಹಾಣ ಕಷ್ಟಪಟ್ಟು ಈಗ ಸೇನೆಗೆ ಆಯ್ಕೆ ಆಗಿದ್ದು ಖುಷಿ ಆಗಿದೆ. ಚೆನ್ನಮ್ಮಳ ಕಿತ್ತೂರಿನ ಕೇಂದ್ರದಲ್ಲಿ ಮೂವರು ಯುವತಿಯರಿಗೆ ನಾವು ತರಬೇತಿ ನೀಡಿದ್ದು, ಈ ಪೈಕಿ ಭೀಮಕ್ಕ ಮಾತ್ರ ಆಯ್ಕೆಯಾಗಿದ್ದಾಳೆ.
–ಪರ್ವೆಜ್ ಹವಾಲ್ದಾರ, ತರಬೇತುದಾರ
-ಶಶಿಧರ್ ಬುದ್ನಿ