Advertisement

ಹೆಣ್ಣು ಮಕ್ಕಳೆಂಬ ಶಕ್ತಿ ಪ್ರತೀಕಗಳು

11:22 AM Oct 05, 2019 | mahesh |

ಈ ದಿನಗಳಲ್ಲಿ ಒಂದು ವೀಡಿಯೋ ವಾಟ್ಸಾಪ್‌ಗ್ಳಲ್ಲಿ ಹರಿದಾಡುತ್ತಿದೆ. ಅದು ಕೂಡ ನವ ರಾತ್ರಿ ದಿನಗಳಲ್ಲಿಯೇ ಇದು ಜನಪ್ರಿಯವಾಗುತ್ತಿರುವುದು ವಿಶೇಷ. ಒಬ್ಟಾಕೆ ಒಂಟಿಯಾಗಿ ನೀರು ತರಲು ಹೋಗುತ್ತಾಳೆ. ಕಾರಿನಲ್ಲಿ ಬಂದ ಯಾರೋ ಕೆಲವು ಗಂಡಸರು ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಾರೆ. ಮತ್ತೂಮ್ಮೆ ಆಕೆ ಅತ್ಯಾಚಾರ ಮಾಡುವವರ ಮುಂದೆ ದೇವಿಯಾಗಿ ಕಾಣಿಸಿಕೊಳ್ಳುತ್ತಾಳೆ.

Advertisement

ಕೆಲವು ಸಮಯ ಹಿಂದೆ ಹುಡುಗಿಯರ ಮೇಲೆ ಅತ್ಯಾಚಾರದ ಸುದ್ದಿಗಳು ತುಂಬಾ ಇದ್ದವು. ಈಗ ಕಡಿಮೆ ಇದೆ ಎಂದರ್ಥವಲ್ಲ. ದೆಹಲಿಯ “ಅಭಯಾ ಪ್ರಕರಣ’ ಮರೆವಿಗೆ ಸರಿಯುವ ಮೊದಲೇ ಸನಿಹದ ಪುತ್ತೂರಿನಲ್ಲೊಂದು ಪ್ರಕರಣ ನಡೆಯಿತು. ಪತ್ರಿಕೆಗಳಲ್ಲಿ ಈ ಸುದ್ದಿಯನ್ನು ಓದುವುದೇ ಒಂದು ಬಗೆಯ “ಹಿಂಸೆ’ ಭಾವವನ್ನು ಮೂಡಿಸುತ್ತದೆ.

ಬಹುಶಃ ಬೇರೆ ಹಬ್ಬಗಳಿಗೆ ಇಂಥ ಸಾಮಾಜಿಕ ಆಯಾಮವಿಲ್ಲ, ನವರಾತ್ರಿ ಬಂದ ಕೂಡಲೇ ನವದುರ್ಗೆಯರು ಮನಸ್ಸಿಗೆ ಬರುತ್ತಾರೆ. ದುರ್ಗೆಯರೆಂದರೆ ಶಕ್ತಿಗಳು. ಶಕ್ತಿ ಎಂದರೆ ಪ್ರಕೃತಿ. ಪ್ರಕೃತಿ ಎಂದರೆ ಹೆಣ್ಣು. ಹೆಣ್ಣು ತನ್ನ ಸ್ವಾಭಿಮಾನವನ್ನು ಬಿಂಬಿಸುವ ದ್ಯೋತಕವಾಗಿಯೂ ನವ ರಾತ್ರಿ ಆಚರಿಸಲ್ಪಡುತ್ತಿರುವುದು ಅಭಿಮಾನದ ಸಂಗತಿ. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ದಸರೆ ನಾಡಹಬ್ಬವಾಗಿತ್ತು. ಈಗ ಅದರ ಅರ್ಥ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿದಂತಾಗಿದೆ.

ದೇವಿಯನ್ನು ಎಲ್ಲರೂ “ಅಮ್ಮ’ ಎಂದೇ ಕರೆಯುತ್ತಾರೆ. ಹೆಣ್ಣು ಮಕ್ಕಳಲ್ಲಿನ “ಮಾತೃಭಾವ’ವನ್ನು ಅರಿತುಕೊಳ್ಳುವ ಎಚ್ಚರ ಸಮಾಜದಲ್ಲಿ ಮೂಡುವುದಕ್ಕೆ ಈ ಹಬ್ಬ ಪ್ರೇರಣೆಯಾದರೆ ಅದಕ್ಕಿಂತ ಮಿಗಿಲಾದ ಅರ್ಥಪೂರ್ಣತೆ ಬೇರಿಲ್ಲ.

ದೇವಿಯ ಪ್ರಾತಿನಿಧಿಕ ರೂಪವಾಗಿ ನಮ್ಮ ಕಣ್ಣೆದುರು ಬರುವುದು ಚಾಮುಂಡಿ. ಆಕೆ ಮಹಿಷಾಸುರ ಮರ್ದಿನಿಯೂ ಹೌದು. ಮಹಿಷಾಸುರ ಎಂದರೆ ವಿಚಿತ್ರ ಸ್ವರೂಪದವನು. ಅವನಿಗೆ ಕೊಂಬು ಇದೆ. ಕೊಂಬು ಎಂದರೆ ಜಂಭ, ಅಹಂಕಾರ ಎಲ್ಲದರ ಸಂಕೇತವೂ ಹೌದು. ಒಂದು ಬಗೆಯಲ್ಲಿ ಅದು ಪುರುಷಹಂಕಾರವೂ ಹೌದು. ಅವನನ್ನು ದಮನಿಸುವುದಕ್ಕಾಗಿ ದುರ್ಗೆಯೇ ಬರುತ್ತಾಳೆ. ಕಾಳಿಯಾಗಿ ಚಂಡ ಮುಂಡರೆಂಬವರ ಎದೆಯನ್ನು ಮೆಟ್ಟಿನಿಲ್ಲುತ್ತಾಳೆ.

Advertisement

ಪ್ರಕೃತಿ ಮತ್ತು ಹೆಣ್ಣು ಒಂದೇ ಎಂಬ ಭಾವವಿದೆ. ಪುರುಷನೆಂಬವ ಪ್ರತ್ಯೇಕ. ಇವತ್ತು ಪ್ರಕೃತಿಯ ಮೇಲೂ ಹೆಣ್ಣಿನ ಮೇಲೂ ದೌರ್ಜನ್ಯ ಮುಂದುವರಿದಿದೆ. ಮಳೆಗಾಲದಲ್ಲಿ ಪ್ರಕೃತಿ ಮುನಿದಿರುವುದನ್ನು ನಾವು ಕಂಡಿದ್ದೇವೆ. ಅದು ಶಕ್ತಿ ದೇವತೆಯ ಮುನಿಸು ಕೂಡ ಹೌದು. ಹೆಣ್ಣು ಮಗಳಲೊಬ್ಬಳ ದೌರ್ಜನ್ಯದ ಸುದ್ದಿ ಓದುವಾಗ, “ಈ ಸಲ ನೆರೆಯುಕ್ಕಿ ಊರು ನಾಶವಾಗದೇ ಇರುತ್ತದೆಯೆ?’ ಎಂದು ಉದ್ಗರಿಸುವವರಿದ್ದಾರೆ. ಪ್ರಕೃತಿ-ಹೆಣ್ಣು ಎರಡಕ್ಕೂ ಬಳಸಬಹುದಾದ ಒಂದೇ ಪದ “ಶಕ್ತಿ ’. ಆದಿಶಕ್ತಿ, ಪರಾಶಕ್ತಿ, ಧೀಶಕ್ತಿ, ಸ್ತ್ರೀಶಕ್ತಿ… ಏನು ಬೇಕಾದರೂ ಅನ್ನಿ. ಎಲ್ಲ ಶಕ್ತಿಯ ಹಿಂದಿರುವುದು ಅವಳೇ.
.
ಟ್ಯಾಪ್‌ರೂಟ್‌ ಎಂಬ ಜಾಹೀರಾತು ಸಂಸ್ಥೆಯೊಂದು ನಮ್ಮ ತ್ರಿಮೂರ್ತಿಗಳ ಹಿಂದಿನ ಶಕ್ತಿಗಳಾದ ಮಹಾಸರಸ್ವತಿ, ಮಹಾಲಕ್ಷ್ಮಿ ಹಾಗೂ ಮಹಾಶಕ್ತಿಯರ ಪರಂಪರಾಗತ ಕ್ಯಾಲೆಂಡರ್‌ ಚಿತ್ರಗಳನ್ನು ಲೈಂಗಿಕ ದೌರ್ಜನ್ಯದ ವಿರುದ್ಧ ಎಚ್ಚರಿಕೆ ನೀಡುವ ಜಾಹೀರಾತುಗಳಲ್ಲಿ ಬಳಸಿಕೊಂಡಿದ್ದು ತುಂಬ ಸುದ್ದಿಯಾಗಿತ್ತು. ಈ ದೇವಿಯರ ಕೆನ್ನೆ, ತುಟಿ ಅಥವಾ ಕಣ್ಣುಗಳಲ್ಲಿ ಎದ್ದು ತೋರುವ ಗಾಯಗಳಿವೆ. ನಮ್ಮ ದೇವತೆಯರು ಕೂಡ ಮಾನವಕೃತ ದೌರ್ಜನ್ಯಗಳಿಂದ ಹೊರತಾಗಿಲ್ಲ ಎಂಬ ಪರೋಕ್ಷ ಸಂದೇಶವನ್ನು ಈ ಜಾಹೀರಾತುಗಳು ನೀಡುತ್ತವೆ. ಈ ದೇವಿಯರ ಒಂದೊಂದು ಫೋಟೋದ ಬಲಬದಿ ಹಾಗೂ ಕೆಳಬದಿಯ ಅಡ್ಡಸಾಲಿನಲ್ಲಿ ಭಾರತದ ಮನೆ ಮನೆಯಲ್ಲಿ ನಡೆಯಬಹುದಾದ ಹೆಣ್ಮಕ್ಕಳ ಮೇಲಿನ ದೌರ್ಜನ್ಯಗಳ ನಿದರ್ಶನ ಇದು ಎಂದು ತಿಳಿಸುವ ಪುಟ್ಟ ಪುಟ್ಟ, ಆದರೆ ದೊಡ್ಡ ರೀತಿಯಲ್ಲಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಬಲ್ಲ ಹಿಂಸೆ/ದೌರ್ಜನ್ಯದಂಥ ಘಟನಾವಳಿಗಳ ಛಾಯಾಚಿತ್ರಗಳಿವೆ. ಈ ಪ್ರಚಾರ ಪತ್ರದಲ್ಲಿ ಈ ಮಾತುಗಳಿವೆ: “”ಇಂಥ ದಿನ ಎಂದೂ ಬಾರದೆ ಇರಲಿ ಎಂದು ಪ್ರಾರ್ಥಿಸಿ! ಭಾರತದಲ್ಲಿಂದು ಸುಮಾರು ಶೇ. 68ಕ್ಕಿಂತಲೂ ಅಧಿಕ ಹೆಣ್ಣು ಜೀವಗಳು ಕೌಟುಂಬಿಕ ಹಿಂಸೆ ಅನುಭವಿಸುತ್ತಿವೆ. ನಾಳೆ ಯಾವ ಮಹಿಳೆಯೂ ಹಿಂಸೆಗೆ ಹೊರತಲ್ಲ ಎಂಬ ಗತಿ ಒದಗಬಹುದೇನೋ ಎಂದೇ ತೋರಿಬರುತ್ತಿದೆ”

ಇದೊಂಥರ ವಿಚಿತ್ರ ಕಾಲ. ಅಪ್ರದಕ್ಷಿಣೆಯಿಂದ ಸುತ್ತಿದಂತೆ ಭಾವನೆಯುಂಟು ಮಾಡುವ ಕಾಲ. ಇಲ್ಲದೇ ಹೋಗಿದ್ದರೆ ಇಂದಿನ ಸಂದರ್ಭ ಸ್ತ್ರೀಯರಲ್ಲಿ ಸ್ವಾಭಿಮಾನವನ್ನೂ ಆತ್ಮವಿಶ್ವಾಸವನ್ನೂ ಅಧಿಕಗೊಳಿಸಬೇಕಾಗಿತ್ತು. ಆದರೆ, ಅವರು ಮನಸ್ಸಿನಲ್ಲಿ ಭೀತಿಯ ಮೂಟೆಯನ್ನೇ ಹೊತ್ತು ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಅದು ಒಂದು ಹಳ್ಳಿ ಪ್ರದೇಶವೇ ಇರಬಹುದು, ಡಿಲ್ಲಿಯೇ ಇರಬಹುದು. ಎಲ್ಲ ಕಡೆ ಒಂದೇ ರೀತಿ. ಈ ಮೊದಲೆಲ್ಲ ಸ್ತ್ರೀಯರನ್ನು ಮೋಹಿಸುವುದಕ್ಕೂ ಒಂದು ಮರ್ಯಾದೆಯ ಅಂತರವಿತ್ತು. ರಾಜರ ಪರಂಪರೆಯಲ್ಲಿ ವೇಶ್ಯಾವಾಟಿಕೆಗಳಿದ್ದವು. ಸ್ತ್ರೀಯರು ಸ್ವಯಂಇಚ್ಛೆಯಿಂದ ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಾಮಾಜಿಕ ಸ್ವಾಸ್ಥ್ಯಕ್ಕೆ ಈ ವ್ಯವಸ್ಥೆ ಅಗತ್ಯವೆಂದು ಕೆಲವರು ವಾದಿಸುತ್ತಿದ್ದ ಕಾಲವೂ ಇತ್ತು. ಆದರೆ, ಇದು ಕೂಡ ಎಂಥ ಅಮಾನವೀಯವಾದದ್ದು ಎಂದು ಜನಸಮೂಹಕ್ಕೆ ಗೊತ್ತಾದಾಗ ಇಂಥ ಪದ್ಧತಿಗಳು ಕಣ್ಮರೆಯಾಗತೊಡಗಿದವು. ನಿಜವಾದ ಸಾಮಾಜಿಕ ಸ್ವಾಸ್ಥ್ಯವಿರುವುದು ವೇಶ್ಯಾವಾಟಿಕೆಯಲ್ಲಲ್ಲ. ವೇಶ್ಯಾವಾಟಿಕೆಯನ್ನು ಬಯಸದ ಮಾನವೀಯ ಮನಸ್ಸಿನಲ್ಲಿ ಎಂಬುದು ಗೊತ್ತಾಗತೊಡಗಿತ್ತು.

ನಮ್ಮ ಪುರಾಣ ಕತೆಗಳಲ್ಲಿ ಒಂಟಿಯಾಗಿರುವ ಋಷಿಪತ್ನಿಯನ್ನು ರಾಕ್ಷಸನೊಬ್ಬ ಬಲಾತ್ಕರಿಸಲು ಹೋಗುವುದು, ಬಳಿಕ ಶಾಪಕ್ಕೊಳಗಾಗುವುದು ಈ ಮುಂತಾದ ಕಥೆಗಳಿವೆ. ಋಷಿಯೊಬ್ಬನ ಆಶ್ರಮದ ಹೋಮಕುಂಡದಲ್ಲಿ ಪ್ರಜ್ವಲಿಸುತ್ತಿದ್ದ ಅಗ್ನಿಯೇ ರಾಕ್ಷಸನನ್ನು ಓಡಿಸಿ ಋಷಿಪತ್ನಿಯನ್ನು ರಕ್ಷಿಸಿದ ಉದಾಹರಣೆಗಳಿವೆ. ಆದರೆ, ಹಿಂದೂ ಪುರಾಣದ ಯಾವ ಕಥೆಯಲ್ಲಿಯೂ ಒಬ್ಬಳೇ ತರುಣಿಯನ್ನು ಹಲವಾರು ಮಂದಿ ರಾಕ್ಷಸರು ಏಕಕಾಲದಲ್ಲಿ ಭೋಗಿಸಿದ ಉದಾಹರಣೆಗಳಿಲ್ಲ. ಬಹುಶಃ ಪ್ರಾಣಿ ವರ್ಗದಲ್ಲಿಯೂ ಇಂಥ ಪರಿಪಾಠವಿಲ್ಲ. ಆದರೆ, ಇಂಥ ಕಥೆ ಸಂಭವಿಸುತ್ತಿರುವುದು ಸದ್ಯಕ್ಕೆ ವಿವಿಧ ಪಟ್ಟಣಗಳಲ್ಲಿ ಮಾತ್ರ. ಈಗೀಗ, ಭಾರತದ ಹಲವೆಡೆ ಇದು ನಡೆಯುತ್ತಿರಬಹುದು. ಕೆಲವು ಸುದ್ದಿಗಳಾಗುತ್ತವೆ, ಕೆಲವು ಆಗುವುದಿಲ್ಲ.
.
ಹಬ್ಬಗಳಿರುವುದು ಸಂಭ್ರಮ ಪಡುವುದಕ್ಕೆ ಎಂಬುದು ನಿಜವೇ. ಜೊತೆಗೆ ಮಾನವೀಯತೆಯ ಜಾಗೃತಿಗಾಗಿಯೂ ಹೌದು !

ಶ್ರೀವಾಣಿ

Advertisement

Udayavani is now on Telegram. Click here to join our channel and stay updated with the latest news.

Next