Advertisement

ಪುತ್ತೂರು-ಸವಣೂರು ವಿದ್ಯುತ್‌ ದ್ವಿಮಾರ್ಗ ಕಾಮಗಾರಿ ಪೂರ್ಣ

11:54 PM Mar 11, 2020 | mahesh |

ಕಡಬ : ಪುತ್ತೂರಿನಿಂದ ಸವಣೂರು ವರೆಗಿನ ವಿದ್ಯುತ್‌ ಲೈನ್‌ನ ಏಕ ಮಾರ್ಗವನ್ನು ದ್ವಿಮಾರ್ಗವಾಗಿ ಪರಿವರ್ತಿಸುವ ಕಾಮಗಾರಿ ಮುಗಿದು ಚಾಲನೆಗೊಂಡಿರುವುದರಿಂದ ನೆಲ್ಯಾಡಿ ಹಾಗೂ ಸವಣೂರು ಸಬ್‌ಸ್ಟೇಷನ್‌ ವ್ಯಾಪ್ತಿಯ ಬಳಕೆದಾರರಿಗೆ ಒಂದು ವಾರದಿಂದ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಬಳಕೆದಾರರಲ್ಲಿ ಸಂತಸ ಮೂಡಿದೆ.

Advertisement

ಪುತ್ತೂರು ತಾಲೂಕಿನ ಬನ್ನೂರಿನಲ್ಲಿರುವ 110 ಕೆ.ವಿ. ಸಬ್‌ಸ್ಟೇಷನ್‌ನಿಂದ ಸವಣೂರು, ನೆಲ್ಯಾಡಿ, ಕಡಬ ಹಾಗೂ ಸುಬ್ರಹ್ಮಣ್ಯ 33 ಕೆ.ವಿ. ಸಬ್‌ಸ್ಟೇಷನ್‌ಗಳಿಗೆ ಏಕಮಾರ್ಗದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿತ್ತು. ನಾಲ್ಕು ಸಬ್‌ಸ್ಟೇಷನ್‌ಗಳಿಗೂ ಏಕಮಾರ್ಗದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿರುವುದರಿಂದ ತಾಂತ್ರಿಕ ಸಮಸ್ಯೆ ಎದುರಾಗುತ್ತಿತ್ತು. ಓವರ್‌ ಲೋಡ್‌ನಿಂದಾಗಿ ಮೆಸ್ಕಾಂಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸುವಲ್ಲಿ ಅಡಚಣೆಯಾಗುತ್ತಿತ್ತು. ಇದು ಬಳಕೆದಾರರ ಆಕ್ರೋಶಕ್ಕೂ ಕಾರಣವಾಗುತ್ತಿತ್ತು. ಈ ಸಮಸ್ಯೆ 30 ವರ್ಷಗಳಿಂದ ಇದ್ದು, ಬಳಕೆದಾರರಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್‌ ಪೂರೈಸಲು ಮೆಸ್ಕಾಂಗೆ ಸಾಧ್ಯವಾಗುತ್ತಿರಲಿಲ್ಲ. ಸಾಕಷ್ಟು ವಿದ್ಯುತ್‌ ಇದ್ದರೂ ತಾಂತ್ರಿಕ ಸಮಸ್ಯೆಗಳಿಂದಾಗಿ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್‌ ಪೂರೈಸುವಲ್ಲಿ ತೊಂದರೆಯಾಗಿತ್ತು.

ದ್ವಿಮಾರ್ಗವಾಗಿ ಪರಿವರ್ತನೆ
ಪುತ್ತೂರು 110 ಕೆ.ವಿ. ಸಬ್‌ ಸ್ಟೇಷನ್‌ನಿಂದ ಸವ ಣೂರು, ನೆಲ್ಯಾಡಿ, ಕಡಬ ಹಾಗೂ ಸುಬ್ರಹ್ಮಣ್ಯ ಸಬ್‌ಸ್ಟೇಷನ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲು ಇದ್ದ ಏಕಮಾರ್ಗವನ್ನು ದ್ವಿಮಾರ್ಗವಾಗಿ ಪರಿವರ್ತನೆಗೊಳಿಸಿದಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯುತ್‌ ಸಮಸ್ಯೆಗೆ ಮುಕ್ತಿ ಸಿಗಬಹುದು ಎಂದು ಚಿಂತನೆ ನಡೆಸಿದ ಮೆಸ್ಕಾಂ, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸುಮಾರು 2 ಕೋಟಿ ರೂ. ವೆಚ್ಚದ ಈ ಯೋಜನೆಗೆ ಮೇ 2018ರಲ್ಲಿ ಮಂಜೂರಾತಿ ದೊರೆತಿತ್ತು. ಮೆಸ್ಕಾಂ ಅಧಿಕಾರಿಗಳ ಸತತ ಪ್ರಯತ್ನದಿಂದ 2020ರ ಜನವರಿ ವೇಳೆಗೆ ದ್ವಿಮಾರ್ಗ ಪರಿವರ್ತನೆ ಕಾಮಗಾರಿ ಪೂರ್ಣಗೊಂಡಿದೆ.

ಗುಣಮಟ್ಟದ ವಿದ್ಯುತ್‌
ಏಕಮಾರ್ಗವನ್ನು ದ್ವಿಮಾರ್ಗಗೊಳಿಸಿ ನೆಲ್ಯಾಡಿ ಹಾಗೂ ಸವಣೂರು ಸಬ್‌ಸ್ಟೇಷನ್‌ ಪ್ರತ್ಯೇಕಿಸಿರುವುದರಿಂದ ಈ ಎರಡೂ ಸಬ್‌ಸ್ಟೇಷನ್‌ಗಳಿಗೆ ಈಗ ಪುತ್ತೂರು 110 ಕೆ.ವಿ. ಸಬ್‌ಸ್ಟೇಷನ್‌ನಿಂದ ಅಡಚಣೆ ಇಲ್ಲದೆ ವಿದ್ಯುತ್‌ ಪೂರೈಕೆಯಾಗುತ್ತಿದೆ. ಲೋಡ್‌ ಶೆಡ್ಡಿಂಗ್‌ ಇಲ್ಲದೆ ನೆಲ್ಯಾಡಿ ಹಾಗೂ ಸವಣೂರು ಭಾಗಕ್ಕೆ ನಿರಂತರ ಗುಣಮಟ್ಟದ ವಿದ್ಯುತ್‌ ಪೂರೈಕೆ ಆಗುತ್ತಿದೆ. ಹಗಲು 8 ಗಂಟೆ ಮತ್ತು ರಾತ್ರಿ 4 ಗಂಟೆ ತ್ರಿಫೇಸ್‌ ಹಾಗೂ ಉಳಿದ 12 ಗಂಟೆ ಸಿಂಗಲ್‌ ಫೇಸ್‌ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತಿದೆ. ಈ ಭಾಗದ ಕೃಷಿಕರು, ಉದ್ಯಮಿಗಳು ಸಹಿತ ವಿದ್ಯುತ್‌ ಬಳಕೆದಾರರೂ ಖುಷಿಯಾಗಿದ್ದಾರೆ.

ಹೆಚ್ಚುವರಿ ಟಿಸಿ ಅಳವಡಿಕೆ ಕೆಲಸ ಪ್ರಗತಿ
ಕಡಬ ಸಬ್‌ಸ್ಟೇಷನ್‌ ವ್ಯಾಪ್ತಿಯಲ್ಲಿ 8 ಫೀಡರ್‌ ಇರುವುದರಿಂದ ಓವರ್‌ಲೋಡ್‌ ಇದೆ. 8 ಫೀಡರ್‌ಗೆ ಕಡಿಮೆ ಸಾಮರ್ಥ್ಯದ ಎರಡು ಪರಿವರ್ತಕಗಳಿರುವುದರಿಂದ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ.

Advertisement

ಇಲ್ಲಿನ ಓವರ್‌ಲೋಡ್‌ ಕಡಿಮೆ ಗೊಳಿಸುವ ಉದ್ದೇಶದಿಂದಾಗಿ ಇಲ್ಲಿಗೆ 5 ಮೆ.ವ್ಯಾ. ಸಾಮರ್ಥ್ಯದ ಹೆಚ್ಚುವರಿ ವಿದ್ಯುತ್‌ ಪರಿವರ್ತಕ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಈ ಕೆಲಸ ಮುಗಿದಾಗ ಬಹುತೇಕ ಸಮಸ್ಯೆ ನಿವಾರಣೆಯಾಗಲಿದೆ. ಮಳೆಗಾಲ ಮುಗಿಯುವ ವೇಳೆಗೆ ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ ಲೈನ್‌ನಿಂದ ನೆಲ್ಯಾಡಿಯನ್ನು ಪ್ರತ್ಯೇಕಿಸುವ ಕೆಲಸ ಮುಗಿಯಲಿದ್ದು, ಬಳಿಕ ಕಡಬದ ವಿದ್ಯುತ್‌ ಪೂರೈಕೆ ಅಬಾಧಿತವಾಗಲಿದೆ ಎಂದು ಮೆಸ್ಕಾಂ ಪುತ್ತೂರು ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

 ಸುಧಾರಣೆಯಾಗಿದೆ
ವಿದ್ಯುತ್‌ ಸಮಸ್ಯೆಯ ವಿರುದ್ಧ ಕಡಬದಲ್ಲಿ ನಡೆದ ಪ್ರತಿಭಟನೆ ಬಳಿಕ ಪೂರೈಕೆಯಲ್ಲಿ ಸುಧಾರಣೆಯಾಗಿದೆ. ಕಡಬ ಸಬ್‌ಸ್ಟೇಶನ್‌ನಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಕೆ ಕಾರ್ಯ ಮುಗಿದಾಗ ಬಹುತೇಕ ಸಮಸ್ಯೆ ನಿವಾರಣೆಯಾಗಲಿದೆ ಎನ್ನುವ ಭರವಸೆಯನ್ನು ಮೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ. ಕಡಬ ಸಬ್‌ಸ್ಟೇಶನ್‌ ಸುಧಾರಣೆ ಕೆಲಸಗಳು ಶೀಘ್ರ ಗತಿಯಲ್ಲಿ ನಡೆಯುವಲ್ಲಿ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಬೇಡಿಕೆ ಯನ್ನು ಈಡೇರಿಸಲಿ ಎನ್ನುವುದು ನಮ್ಮ ಆಶಯ.
 - ಜೋಸ್‌ ಕೆ.ಜೆ., ವಿದ್ಯುತ್‌ ಬಳಕೆದಾರ, ಕಡಬ

ಗುಣಮಟ್ಟದ ಸೇವೆ
ಒಂದು ವಾರದಿಂದ ನೆಲ್ಯಾಡಿ ಭಾಗಕ್ಕೆ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತಿದೆ. ಮೆಸ್ಕಾಂ ಅಧಿಕಾರಿಗಳ ಸತತ ಪ್ರಯತ್ನದಿಂದ ಈ ಕೆಲಸ ಸಾಧ್ಯವಾಗಿದೆ. ಈ ಹಿಂದೆ ಪದೇ ಪದೇ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆ ಉಂಟಾಗುತ್ತಿದ್ದುದರಿಂದ ಜನರು ರೋಸಿ ಹೋಗಿದ್ದರು. ಈಗ ವೋಲ್ಟೆàಜ್‌ನಲ್ಲೂ ಸುಧಾರಣೆಯಾಗಿದ್ದು ಪರೀಕ್ಷೆ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಈ ವ್ಯವಸ್ಥೆ ಶಾಶ್ವತ ವಾಗಿರ ಬೇಕೆಂಬುದು ಬಳಕೆದಾರರ ಅಪೇಕ್ಷೆ.
– ರವೀಂದ್ರ ಟಿ., ಕಾರ್ಯದರ್ಶಿ, ವಿದ್ಯುತ್‌ ಬಳಕೆದಾರರ ವೇದಿಕೆ, ನೆಲ್ಯಾಡಿ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next