ಮಣಿಪಾಲ: 1976ರಲ್ಲಿ ತೆರೆಕಂಡ ‘ಪ್ರೇಮದ ಕಾಣಿಕೆ’ ಚಿತ್ರ ತೆರೆಕಂಡಿತ್ತು. ಆ ಚಿತ್ರದಲ್ಲಿ ರಾಜ್ ಕುಮಾರ್ ಕುಟುಂಬದ ಮಗುವೊಂದು ಕಾಣಿಸಿಕೊಂಡಿತ್ತು. ಆ ಮಗುವಿಗೆ ಕೇವಲ ಆರು ತಿಂಗಳು. ಆ ಮಗುವೇ ಮುಂದೆ ಕನ್ನಡ ಚಿತ್ರರಂಗದಲ್ಲಿ ‘ರಾಜಕುಮಾರ’ನಾಗಿ, ‘ಯುವರತ್ನ’ ನಾಗಿ ಮೆರೆದ ಪುನೀತ್ ರಾಜ್ ಕುಮಾರ್.
ಅಣ್ಣಾವ್ರ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಹೆಸರು ಲೋಹಿತ್. 1975ರ ಮಾರ್ಚ್ 17ರಂದು ಜನಿಸಿದ್ದ ಪುನೀತ್ ಹಲವು ಚಿತ್ರಗಳಲ್ಲಿ ಬಾಲ್ಯನಟನಾಗಿ ನಟಿಸಿದ್ದರು.
2002ರಲ್ಲಿ ಪುನೀತ್ ರಾಜ್ ಕುಮಾರ್ ಪೂರ್ಣಪ್ರಮಾಣದ ನಾಯಕ ನಟನಾಗಿ ಕನ್ನಡ ಚಿತ್ರಂಗಕ್ಕೆ ಕಾಲಿರಿಸಿದ್ದರು. ತಾಯಿ ಪಾರ್ವತ್ತಮ ರಾಜ್ ಕುಮಾರ್ ನಿರ್ಮಿಸಿದ್ದ, ಪುರಿ ಜಗನ್ನಾಥ್ ನಿರ್ದೇಶಿಸಿದ್ದ ‘ಅಪ್ಪು’ ಮೊದಲ ಚಿತ್ರ. ಮೊದಲ ಚಿತ್ರವೇ ಬಾಕ್ಸ್ ಆಫೀಸ್ ಹಿಟ್.
ಇದನ್ನೂ ಓದಿ:BIG BREAKING NEWS: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ!
2003ರಲ್ಲಿ ದಿನೇಶ್ ಬಾಬು ನಿರ್ದೇಶಿಸಿದ್ದ ‘ಅಭಿ’ ಚಿತ್ರದಲ್ಲಿ ಪುನೀತ್ ನಟಿಸಿದ್ದರು. ಈ ಚಿತ್ರದಲ್ಲಿ ಮೊದಲ ಬಾರಿಗೆ ರಮ್ಯ ಕಾಣಿಸಿಕೊಂಡಿದ್ದರು. 2004ರಲ್ಲಿ ವೀರ ಕನ್ನಡಿಗ, ನಂತರ ‘ಮೌರ್ಯ’ ಚಿತ್ರಗಳಲ್ಲಿ ಅಭಿನಯಿಸಿದ್ದರು.
2005ರಲ್ಲಿ ಆಕಾಶ್, ನಮ್ಮ ಬಸವ, 2006ರಲ್ಲಿ ತೆರೆಕಂಡ ಅಜಯ್ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ಬಳಿಕ ಪುನೀತ್ ರಾಜ್ ಕುಮಾರ್ ಗೆ ‘ಪವರ್ ಸ್ಟಾರ್’ ಎಂಬ ಬಿರುದು ಲಭಿಸಿತು.
2007ರಲ್ಲಿ ತೆರೆಕಂಡ ಅರಸು ಚಿತ್ರಕ್ಕೆ ಪುನೀತ್ ಮೊದಲ ಬಾರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ನಂತರ ಬಿಡುಗಡೆಯಾದ ಮಿಲನ ಚಿತ್ರ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಒಲಿದು ಬಂದಿತ್ತು.
2010ರಲ್ಲಿ ಬಿಡುಗಡೆಯಾದ ಸೂರಿ ನಿರ್ದೇಶನದ ‘ಜಾಕಿ’ ಚಿತ್ರ ಪುನೀತ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ನಂತರ ಬಂದ ಹುಡುಗರು, ಪರಮಾತ್ಮ ಚಿತ್ರಗಳು ಬಾಕ್ಸ್ ಆಫೀಸ್ ಹಿಟ್ ಮಾತ್ರವಲ್ಲದೆ ಪುನೀತ್ ಅಭಿನಯಕ್ಕೂ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತ್ತು.
ನಂತರದ ಅಣ್ಣಾ ಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ ಚಿತ್ರಗಳು ದೊಡ್ಡ ಹಿಟ್ ಆಗದಿದ್ದರೂ, ತೆಲುಗು ರಿಮೇಕ್ ಚಿತ್ರ ‘ಪವರ್’ ದಾಖಲೆಯ ಗಳಿಕೆ ನಿರ್ಮಸಿತ್ತು. ನಂತರ ಪುನೀತ್ ಅವರು ರಣ ವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡುಗ ಚಿತ್ರಗಳು ಯಶಸ್ವಿಯಾಗಿದ್ದವು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲು ಪೊಲೀಸ್ ಸುತ್ತೋಲೆ; ಗೃಹ ಸಚಿವರ ದೌಡು
2017ರಲ್ಲಿ ತೆರೆಕಂಡ ಸಂತೋಶ್ ಆನಂದ್ ರಾಮ್ ನಿರ್ದೇಶನದ ‘ರಾಜಕುಮಾರ’ ಚಿತ್ರ ಸ್ಯಾಂಡಲ್ ವುಡ್ ನ ಆ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿತ್ತು. ಮುಂಗಾರು ಮಳೆ ಚಿತ್ರದ ದಾಖಲೆ ಮುರಿದು ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎಂಬ ದಾಖಲೆ ಬರೆದಿತ್ತು.
ನಂತರ ಬಿಡುಗಡೆಯಾದ ಅಂಜನಿಪುತ್ರ, ನಟ ಸಾರ್ವಭೌಮ ಚಿತ್ರಗಳೂ ಉತ್ತಮ ಗಳಿಕೆ ಮಾಡಿದ್ದವು. ಸಂತೋಶ್ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’ ಪುನೀತ್ ಅವರ ನಟನೆಯ ಬಿಡುಗಡೆಯಾದ ಕೊನೆಯ ಚಿತ್ರ.
ಪುನೀತ್ ಅವರು ಇನ್ನು ಬಿಡುಗಡೆಯಾಗಬೇಕಾದ ಚೇತನ್ ನಿರ್ದೇಶನದ ‘ಜೇಮ್ಸ್’ ಪವನ್ ಕುಮಾರ್ ರ ‘ದ್ವಿತ್ವ’ ಚಿತ್ರಗಳಲ್ಲಿ ನಟಿಸಿದ್ದರು.