ಬೆಂಗಳೂರು: ಲೋಕಸಭಾ ಚುನಾವಣೆ, ಎರಡು ವಿಧಾನಸಭೆ ಉಪಚುನಾವಣೆ, 61 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ಸರಾಸರಿ 33 ಪೈಸೆ ಹೆಚ್ಚಳವಾಗಿದ್ದು, ವಿದ್ಯುತ್ ಬಳಕೆದಾರರಿಗೆ ಶಾಕ್ ನೀಡಿದಂತಾಗಿದೆ. ಪರಿಷ್ಕೃತ ದರಗಳು ಏ.1ರಿಂದಲೇ ಪೂರ್ವಾನ್ವಯವಾಗಲಿವೆ.
ಬೆಸ್ಕಾಂ ಸೇರಿ ಎಲ್ಲ ಐದು ಎಸ್ಕಾಂಗಳು ಪ್ರತಿ ಯೂನಿಟ್ ದರ ಸರಾಸರಿ 1.20 ರೂ. (ಶೇ.17.37) ಹೆಚ್ಚಳಕ್ಕೆ ಸಲ್ಲಿಸಿದ್ದ ಪ್ರಸ್ತಾವಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸರಾಸರಿ 33 ಪೈಸೆ (ಶೇ. 4.8) ಏರಿಕೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಕಳೆದ ವರ್ಷ ಪ್ರತಿ ಯೂನಿಟ್ ದರ 34 ಪೈಸೆ ಹೆಚ್ಚಳವಾಗಿತ್ತು.
ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ದರ ಪರಿಷ್ಕರಣೆ ವಿವರ ನೀಡಿದರು. ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಅಧೀನದ ಗ್ರಾಮೀಣ ಪ್ರದೇಶದಲ್ಲಿದ್ದ ಐದು ಹಂತದ ಸ್ಲಾéಬ್ ದರವನ್ನು ನಾಲ್ಕು ಸ್ಲಾಬ್ ಮಾರ್ಪಡಿಸಲಾಗಿದೆ. ಗೃಹ ಬಳಕೆ ಉದ್ದೇಶಕ್ಕೆ ಮೊದಲ 30 ಯೂನಿಟ್‌ವರೆಗಿನ ವಿದ್ಯುತ್ ದರ 3.40 ರೂ.ನಿಂದ 3.65 ರೂ.ಗೆ, 31ರಿಂದ 100 ಯೂನಿಟ್‌ವರೆಗಿನ ದರ 4.65 ರೂ.ನಿಂದ 4.90 ರೂ., 101ರಿಂದ 200 ಯೂನಿಟ್‌ವರೆಗಿನ ಬಳಕೆ ವಿದ್ಯುತ್ ದರ 6.20 ರೂ.ನಿಂದ 6.45 ರೂ.ಗೆ ಏರಿಕೆಯಾಗಿದೆ.
ಹಾಗೆಯೇ 201ರಿಂದ 300 ಯೂನಿಟ್‌ವರೆಗೆ ಬಳಸುವ ಪ್ರತಿ ಯೂನಿಟ್ ದರ 7.05 ರೂ., 300 ಯೂನಿಟ್ ಮೇಲ್ಪಟ್ಟ ಬಳಕೆ ದರ 7.10 ರೂ. ಇದ್ದು, ಕ್ರಮವಾಗಿ ಪ್ರತಿ ಯೂನಿಟ್‌ಗೆ 25 ಪೈಸೆ ಹಾಗೂ 20 ಪೈಸೆ ಏರಿಕೆ ಮಾಡಿ ದರವನ್ನು ಪ್ರತಿ ಯೂನಿಟ್‌ಗೆ 7.30 ರೂ.ಗೆ ನಿಗದಿಪಡಿಸಲಾಗಿದೆ.
ಬೆಸ್ಕಾಂ ಹೊರತುಪಡಿಸಿ ಉಳಿದ ನಾಲ್ಕು ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶಗಳಲ್ಲಿನ ಗೃಹ ಬಳಕೆ ವಿದ್ಯುತ್ 30 ಯೂನಿಟ್‌ವರೆಗಿನ ಬಳಕೆಗೆ ಪ್ರತಿ ಯೂನಿಟ್ ದರ 3.45 ರೂ. ನಿಂದ 3.70 ರೂ., 31ರಿಂದ 100 ಯೂನಿಟ್‌ವರೆಗಿನ ವಿದ್ಯುತ್ ದರ 4.95 ರೂ.ನಿಂದ 5.20 ರೂ., 101 ಯೂನಿಟ್‌ನಿಂದ 200 ಯೂನಿಟ್‌ವರೆಗಿನ ಬಳಕೆ ದರ 6.50 ರೂ.ನಿಂದ 6.75 ರೂ. ಹಾಗೂ 200 ಯೂನಿಟ್ ಮೇಲ್ಪಟ್ಟ ಬಳಕೆ ದರ 7.55 ರೂ.ನಿಂದ 7.80 ರೂ.ಗೆ ಹೆಚ್ಚಳ ಮಾಡಲಾಗಿದೆ.
ಎಲ್ಲ ಎಸ್ಕಾಂಗಳ ಗ್ರಾಮ ಪಂಚಾಯ್ತಿಗಳ ಪ್ರದೇಶಗಳಲ್ಲಿನ ಗೃಹ ಬಳಕೆ 30 ಯೂನಿಟ್‌ವರೆಗಿನ ವಿದ್ಯುತ್ ದರ 30 ಯೂನಿಟ್‌ವರೆಗೆ 3.35 ರೂ.ನಿಂದ 3.60 ರೂ., 31- 100 ಯೂನಿಟ್‌ವರೆಗಿನ ಬಳಕೆ ದರ 4.65 ರೂ.ನಿಂದ 4.90 ರೂ., 101- 200 ಯೂನಿಟ್‌ವರೆಗಿನ ದರ 6.20 ರೂ.ನಿಂದ 6.45 ರೂ. ಹಾಗೂ 200 ಯೂನಿಟ್ ಮೇಲ್ಪಟ್ಟ ಬಳಕೆ ವಿದ್ಯುತ್ ದರ 7.05 ರೂ.ನಿಂದ 7.30 ರೂ.ಗೆ ಏರಿಕೆಯಾಗಿದೆ.