Advertisement

ಶಿವನಸಮುದ್ರದಲ್ಲಿ ವಿದ್ಯುತ್‌ ಉತ್ಪಾದನೆ ಕುಸಿತ

02:44 PM Jun 19, 2023 | Team Udayavani |

ಮಂಡ್ಯ: ಏಷ್ಯಾ ಖಂಡದಲ್ಲಿಯೇ ಮೊದಲ ಜಲ ವಿದ್ಯುತ್‌ ಉತ್ಪಾದನಾ ಘಟಕವಾಗಿರುವ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ(ಬ್ಲಿಫ್‌)ದಲ್ಲಿ ನೀರಿನ ಅಭಾವದಿಂದ 5 ವರ್ಷಗಳಲ್ಲಿ ಪ್ರಸ್ತುತ ವರ್ಷ ವಿದ್ಯುತ್‌ ಉತ್ಪಾದನೆ ಕುಸಿತವಾಗಿದೆ.

Advertisement

ಪೂರ್ವ ಹಾಗೂ ಮುಂಗಾರು ಮಳೆ ಬಾರದ ಹಿನ್ನೆಲೆ ಕೃಷ್ಣರಾಜಸಾಗರ ಜಲಾಶಯದ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಇದರಿಂದ ಕಾವೇರಿ ನದಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದು ಶಿವನಸಮುದ್ರದ ವಿದ್ಯುತ್‌ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ.

6 ಘಟಕ ಸ್ಥಗಿತ: ಪ್ರಸ್ತುತ ಶಿವನಸಮುದ್ರ ವಿದ್ಯುತ್‌ ಉತ್ಪಾದನಾ ಕೇಂದ್ರದಲ್ಲಿ 10 ಘಟಕ ಕಾರ್ಯನಿರ್ವಹಿಸುತ್ತಿವೆ. ಆದರೆ, ಮಳೆ ಇಲ್ಲದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದ್ದು 6 ಘಟಕ ಸ್ಥಗಿತಗೊಂಡಿವೆ. ಉಳಿದ 4 ಘಟಕ ಜಲಾಶಯದಿಂದ ಕಾವೇರಿ ನದಿಯಲ್ಲಿ ಹರಿದು ಬರುತ್ತಿರುವ ಅಲ್ಪ ಪ್ರಮಾಣದ ನೀರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪರಿಸ್ಥಿತಿ ಮುಂದುವರಿದರೆ 4ಘಟಕಗಳು ಸ್ಥಗಿತವಾಗುವ ಸಾಧ್ಯತೆ ಇದೆ.

42 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ: ಉತ್ತಮ ಮಳೆಯಾಗಿ ನದಿಯಲ್ಲಿ ನೀರು ಹರಿದರೆ 10 ಘಟಕಗಳಿಂದ 42 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಕಳೆದ 5ವರ್ಷಗಳಿಂದ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಕಾವೇರಿ ನದಿಯಲ್ಲಿ ಅಧಿ ಕ ಪ್ರಮಾಣದ ನೀರು ಹರಿದಿತ್ತು. ಅಲ್ಲದೆ, ಜಲಾಶಯದಿಂದಲೂ ಸುಮಾರು 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿಸಲಾಗಿತ್ತು. ಇದರಿಂದ ಬ್ಲಿಫ್‌ನಲ್ಲಿ 10 ಘಟಕಗಳಿಂದ 42 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾ ಗುತ್ತಿತ್ತು. ಆದರೆ, ಪ್ರಸ್ತುತ ಮುಂಗಾರು ಮಳೆ ಸರಿಯಾಗಿ ಬೀಳದೇ ಇರುವುದರಿಂದ 4 ಘಟಕಗಳಿಂದ ಕೇವಲ 13 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ.

ಗಗನಚುಕ್ಕಿ, ಭರಚುಕ್ಕಿಯಲ್ಲೂ ನೀರಿಲ್ಲ; ಕಲ್ಲುಬಂಡೆ ಗೋಚರ : ಜಿಲ್ಲೆಯಲ್ಲಿ ಮುಂಗಾರು ಮಳೆ ಸರಿಯಾಗಿ ಬೀಳದ ಪರಿಣಾಮ ಕಾವೇರಿ ನದಿಯಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ಮಳವಳ್ಳಿ ಸಮೀಪವಿರುವ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ಕಲ್ಲುಬಂಡೆಗಳು ಗೋಚರವಾಗುತ್ತಿವೆ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಈಗಾಗಲೇ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಕುಸಿತವಾಗುತ್ತಿದ್ದು, ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲು ಸಾಧ್ಯವಾಗುತ್ತಿಲ.

Advertisement

ಕಳೆದ ವರ್ಷ 10 ಘಟಕ ಕಾರ್ಯನಿರ್ವಹಣೆ : ಮಳೆಯಾಗದ ಹಿನ್ನೆಲೆ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿದು ಬರುತ್ತಿಲ್ಲ. ಇದರಿಂದ ಶಿವನ ಸಮುದ್ರ (ಬ್ಲಿಫ್‌)ದ 10 ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ 4 ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ 10 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಶೇ.25 ವಿದ್ಯುತ್‌ ಉತ್ಪಾದನೆ ಕುಸಿತವಾಗಿದೆ. ಕೆಆರ್‌ಎಸ್‌ ಜಲಾಶಯ ದಿಂದ ಬಿಟ್ಟಿರುವ ಅಲ್ಪ ಪ್ರಮಾಣದ ನೀರಿನಿಂದಲೇ 4 ಘಟಕಗಳಿಂದ 13-14 ಮೆಗಾವ್ಯಾಟ್‌ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ತೊಂದರೆಯಾಗಲಿದ್ದು, ವಿದ್ಯುತ್‌ ಉತ್ಪಾದನೆ ಕುಸಿತವಾಗಲಿದೆ ಎಂದು ಶಿವನಸಮುದ್ರ(ಬ್ಲಿಫ್‌)ಯೋಜನಾ ಮುಖ್ಯಸ್ಥ ಎನ್‌.ನವೀನ್‌ಕುಮಾರ್‌ ತಿಳಿಸಿದರು.

ಬರಿದಾಗುತ್ತಿರುವ ಕೆಆರ್‌ಎಸ್‌ ಒಡಲು: ಕಾವೇರಿ ಕೊಳ್ಳದಲ್ಲಿ ಮಳೆಯಾಗದ ಪರಿಣಾಮ ಕೃಷ್ಣರಾಜ ಸಾಗರ ಜಲಾಶಯದ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಈಗಾಗಲೇ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಅತ್ತ ಕಾವೇರಿ ನದಿಗೂ ಅಲ್ಪ ನೀರು ಹರಿಸಲಾಗುತ್ತಿದೆ. ಇದರಿಂದ ಜಲಾಶಯದ ನೀರಿನಮಟ್ಟ ಕುಸಿಯುತ್ತಿದೆ. ಶಿವನಸಮುದ್ರದ ವಿದ್ಯುತ್‌ ಉತ್ಪಾದನೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯಬೇಕು. ಆದರೆ, ಜಲಾಶಯ ದಲ್ಲಿ ನೀರಿಲ್ಲದ ಪರಿಣಾಮ ಹರಿಸಲು ಸಾಧ್ಯ ವಾಗುತ್ತಿಲ್ಲ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 80.62 ಅಡಿಗೆ ಇಳಿದಿದೆ. ಒಳಹರಿವು 319 ಕ್ಯೂಸೆಕ್‌ ಇದ್ದರೆ, ಹೊರಹರಿವು 3275 ಕ್ಯೂಸೆಕ್‌ ಇದೆ. ಇದ ರಲ್ಲಿ ಕಾವೇರಿ ನದಿಗೆ 614 ಕ್ಯೂಸೆಕ್‌ ಹರಿಸಿದರೆ, ನಾಲೆಗೆ 2611 ಕ್ಯೂಸೆಕ್‌ ಹರಿಸಲಾಗುತ್ತಿದೆ. ಜಲಾಶಯದಲ್ಲಿ ಒಟ್ಟು 11.062 ಟಿಎಂಸಿ ನೀರು ಸಂಗ್ರಹವಾಗಿದೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next