Advertisement

ವಿದ್ಯುತ್‌ ದರ ಹೆಚ್ಚಳ ಪ್ರಸ್ತಾವ ಮುಂದೂಡಿಕೆ

03:46 AM Mar 17, 2019 | |

ಮಂಗಳೂರು: ಈ ಬಾರಿ ರಾಜ್ಯದ ವಿದ್ಯುತ್‌ ಗ್ರಾಹಕರಿಗೆ ದರ ಏರಿಕೆಯ ಬಿಸಿ ಮೂರು ತಿಂಗಳು ತಡವಾಗಿ ತಟ್ಟಲಿದೆ. ಸಾಮಾನ್ಯವಾಗಿ ಪ್ರತಿ ಎಪ್ರಿಲ್‌ 1ರಿಂದ ಅನ್ವಯವಾಗುವಂತೆ ವಿದ್ಯುತ್‌ ದರ ಏರಿಸಲಾಗುತ್ತದೆ. ಈ ಸಂಬಂಧ ಒಂದು ತಿಂಗಳ ಹಿಂದೆಯಷ್ಟೇ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ದರ ಹೆಚ್ಚಳದ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ ಈಗ ಲೋಕಸಭಾ ಚುನಾವಣೆ ಎದುರಾಗಿರುವುದರಿಂದ ವಿದ್ಯುತ್‌ ದರ ಹೆಚ್ಚಳ ಪ್ರಕ್ರಿಯೆ ಕೂಡ ಮುಂದೂಡಿಕೆಯಾಗಿದೆ. 

Advertisement

ಚುನಾವಣ ನೀತಿ ಸಂಹಿತೆಯು ವಿದ್ಯುತ್‌ ದರ ಪರಿಷ್ಕರಣೆಗೂ ಅನ್ವಯವಾಗುವುದರಿಂದ ಎ.1ರಿಂದ ಜಾರಿಗೊಳ್ಳಬೇಕಾದ ದರ ಪರಿಷ್ಕರಣೆಯನ್ನು ಮುಂದೂಡುವುದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅನಿವಾರ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕೆಇಆರ್‌ಸಿ ಕಚೇರಿಯಲ್ಲಿ ಆಯೋಗದ ಅಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳು ಸಭೆ ನಡೆಸಿ ಈ ಕುರಿತಂತೆ ಚುನಾವಣ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಲು ತೀರ್ಮಾನಿಸಿದ್ದಾರೆ. ಕಳೆದ ವರ್ಷ ವಿಧಾನಸಭೆ ಚುನಾವಣೆ ನಡೆದಾಗಲೂ ಇದೇ ರೀತಿಯ ಪರಿಸ್ಥಿತಿ ಎದುರಾದ ಕಾರಣ ವಿದ್ಯುತ್‌ ದರ ಪರಿಷ್ಕರಣೆ  ನಿರ್ಧಾರವನ್ನು ಮುಂದಕ್ಕೆ ಹಾಕಿತ್ತು. ಚುನಾವಣ ಫಲಿತಾಂಶ ಪ್ರಕಟವಾದ ಬಳಿಕ ಪ್ರಕಟನೆ ಹೊರಡಿಸಿ ಜೂನ್‌ನಿಂದ ಅನ್ವಯವಾಗುವಂತೆ ಪರಿಷ್ಕೃತ ದರವನ್ನು ಅನ್ವಯಿಸಲಾಗಿತ್ತು. 

ಪ್ರಕ್ರಿಯೆ ಪೂರ್ಣ
ವಿದ್ಯುತ್‌ ದರ ಏರಿಕೆ ಮಾಡುವಂತೆ 2018 ನ.30ರಂದು ಎಲ್ಲಾ ಐದು ಎಸ್ಕಾಂಗಳು ಕೆಇಆರ್‌ಸಿಗೆ ಮನವಿ ಸಲ್ಲಿಸಿದ್ದವು. ಅದರ ಪ್ರಕಾರ ಕೆಇಆರ್‌ಸಿ ಪ್ರಕಟನೆಯನ್ನು ಹೊರಡಿಸಿ 2019 ಫೆಬ್ರವರಿಯಲ್ಲಿ ದರ ಪರಿಷ್ಕರಣೆ ಕುರಿತು ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಸೇರಿದಂತೆ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ವಿಚಾರಣೆ ನಡೆಸಿತ್ತು. ಬಳಿಕ ಎ.1ರಿಂದ ದರ ಹೆಚ್ಚಳ ಮಾಡುವ ಸಂಬಂಧ ಎಲ್ಲ ಕಂಪೆನಿಗಳು ತಮ್ಮ ವಲಯ ವ್ಯಾಪ್ತಿಯಲ್ಲಿ ಸೂಕ್ತ ದರ ಪರಿಷ್ಕರಣೆಯ ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸಿದ್ದವು. 

ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್‌ ವಿದ್ಯುತ್‌ಗೆ 1 ರೂ. ನಿಂದ 1 ರೂ. 65 ಪೈಸೆ ತನಕ ದರ ಏರಿಸಬೇಕೆಂದು ಮನವಿ ಮಾಡಿವೆ. ಮೆಸ್ಕಾಂ ಪ್ರತಿ ಯೂನಿಟ್‌ಗೆ 1.38 ರೂ. ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ದರ ಏರಿಕೆ ಕುರಿತಂತೆ ಕೆ.ಇ.ಆರ್‌.ಸಿ. ತನ್ನ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ದರ ಪರಿಷ್ಕರಣೆ ವಿಳಂಬವಾದ ಉದಾಹರಣೆ ಇದೆ. ಇದರೊಂದಿಗೆ ಚುನಾವಣ ಆಯೋಗ ಆದೇಶ ಮಾಡಿದರೆ ವಿದ್ಯುತ್‌ ನಿಯಂತ್ರಣ ಆಯೋಗ ಅದನ್ನು ಪಾಲಿಸಲೇಬೇಕಾಗುತ್ತದೆ ಎನ್ನುತ್ತವೆ ಕೆ.ಇ.ಆರ್‌.ಸಿ. ಮೂಲಗಳು.

ಕಳೆದ ವರ್ಷ
2017-18ರಲ್ಲಿ ಎಲ್ಲ 5 ಎಸ್ಕಾಂಗಳು 82 ಪೈಸೆಯಿಂದ 1 ರೂ. 62 ಪೈಸೆ ತನಕ ಏರಿಸಬೇಕೆಂದು ಮನವಿ ಸಲ್ಲಿಸಿದ್ದವು. ಆದರೆ ಕೆ.ಇ.ಆರ್‌.ಸಿ. 20 ಪೈಸೆಯಿಂದ 60 ಪೈಸೆಯಷ್ಟು (ಶೇ. 6) ದರ ಹೆಚ್ಚಳ ಮಾಡಿ ಪ್ರಕಟನೆ ಹೊರಡಿಸಿತ್ತು. 

Advertisement

ಪರಿಷ್ಕೃತ ವಿದ್ಯುತ್‌ ದರ ಜಾರಿ ದಿನಾಂಕವನ್ನು ಮುಂದೂಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕೆಇಆರ್‌ಸಿ ತೀರ್ಮಾನಿಸಲಿದೆ.
ಸ್ನೇಹಲ್‌ ಆರ್‌.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು

ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next