ಕೆ.ಆರ್.ಪೇಟೆ: ಸರ್ಕಾರ ಜನರಿಗೆ ಸೌಲಭ್ಯ ಒದಗಿಸಲು ರಸ್ತೆ, ಚರಂಡಿ, ನೀರು ವ್ಯವಸ್ಥೆ ಮಾಡುತ್ತಾರೆ. ಆದರೆ ತಾಲೂಕಿನ ಮಾರುತಿ ನಗರದಲ್ಲಿ ಮಂಡ್ಯ ಜಿಪಂ ವತಿಯಿಂದ ನಿರ್ಮಿಸಿದ ರಸ್ತೆಯೇ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ರಸ್ತೆ ಮಧ್ಯೇ ವಿದ್ಯುತ್ ಕಂಬ ಬಿಟ್ಟು, ಕಳಪೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಒಡಾಟಕ್ಕೆ ತೊಂದರೆ ಮಾಡಲಾಗಿದೆ.
ತಾಲೂಕಿನ ಮೇಲುಕೋಟೆ ರಸ್ತೆಯಲ್ಲಿರುವ ಮಾರುತಿನಗರ ಗ್ರಾಮದಲ್ಲಿ ಜಿಪಂ ಎಂಜಿನಿಯರಿಂಗ್ ವತಿಯಿಂದ ರಸ್ತೆಗೆ ಕಾಂಕ್ರೀಟ್ ಹಾಕಿದ್ದಾರೆ. ಈಗ ರಸ್ತೆ ಅಭಿವೃದ್ಧಿ ಮಾಡಿರುವುದರಿಂದಲೇ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡದಂತಾಗಿದೆ. ಏಕೆಂದರೆ ಈ ಹಿಂದೆ ಇದ್ದ ಮಣ್ಣಿನ ರಸ್ತೆಯಲ್ಲಿ ಸಾರ್ವಜನಿಕರು ಸರಾಗವಾಗಿ ಓಡಾಡಿಕೊಂಡಿದ್ದರು. ಆದರೆ ರಸ್ತೆಯನ್ನು ಅಭಿವೃದ್ಧಿ ಮಾಡುವುದಾಗಿ ಎರಡೂ ಕಡೆಗಳಲ್ಲಿ ಗುಂಡಿ ತೆಗೆದು ರಸ್ತೆ ಪಕ್ಕದಲ್ಲಿದ್ದಂತಹ ವಿದ್ಯುತ್ ಕಂಬಗಳನ್ನು ರಸ್ತೆಯ ಮಧ್ಯಭಾಗಕ್ಕೆ ಬರುವಂತೆಮಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಈಗ ಎತ್ತಿನಗಾಡಿಗಳು, ಕಾರ್, ಟ್ರಾಕ್ಟರ್ ಮತ್ತಿತರ ವಾಹನಗಳು ರಸ್ತೆಯಲ್ಲಿ ಓಡಾಡದಂತಾಗಿದೆ. ಗ್ರಾಮಸ್ಥರು ಈ ಬಗ್ಗೆ ಜಿಪಂ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿ ಕಂಬವನ್ನು ರಸ್ತೆ ಪಕಕ್ಕೆ ಅಳವಡಿಸಿ ಎಂದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಮುಳ್ಳಿನ ರಸ್ತೆ:ರಸ್ತೆ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಹಾಳಾಗಿದ್ದು ಜಲ್ಲಿಕಲ್ಲುಗಳು ಕಿತ್ತು ಬಂದಿದ್ದು ಕಾಂಕ್ರೀಟ್ ರಸ್ತೆ ಈಗ ಮುಳ್ಳಿನ ರಸ್ತೆಯಾಗಿ ನಿರ್ಮಾಣವಾಗಿದೆ. ಜನರು ಕಾಲಿಗೆ ಚಪ್ಪಲಿ ಹಾಕಿಕೊಳ್ಳದೆ ರಸ್ತೆಯಲ್ಲಿ ಓಡಾಡಲು ಅಸಾಧ್ಯ. ಆದರೆ ಈ ಹಿಂದೆ ಮಣ್ಣಿನ ರಸ್ತೆಯಲ್ಲಿಯೇ ಸರಿಯಾಗಿತ್ತು ಎನ್ನುವ ಸ್ಥಿತಿಗೆ ಸ್ಥಳೀಯರು ತಲುಪಿದ್ದಾರೆ. ರಸ್ತೆಯನ್ನು ನಿರ್ಮಾಣ ಮಾಡಿದ್ದ ಕೆಲವೇ ತಿಂಗಳಲ್ಲಿ ಕಿತ್ತು ಬಂದಿರುವ ಬಗ್ಗೆ ಕಾರ್ಯನಿರ್ವಹಿಸಿದ್ದ ಎಂಜಿನಿಯರ್ ಲೊಕೇಶ್ ರವರನ್ನು ಪ್ರಶ್ನಿಸಿದರೆ ನಾವು ರಸ್ತೆ ನಿರ್ಮಾಣ ಮಾಡಿ ಬಹಳ ದಿನವಾಗಿದೆ ಹಾಗಾಗಿ ಕಿತ್ತು ಬಂದಿದೆ ಇದರ ಜೊತೆಗೆ ನಾವು ಎಂ ಸ್ಯಾಂಡ್‌ನಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಮೇಲಿನ ಕೆನೆ ಮಾತ್ರ ಕಿತ್ತು ಬಂದಿದೆ ಆದರೆ ಜಲ್ಲಿಗಳೇನು ಕಿತ್ತುಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಸ್ತೆಗೆ ಸರ್ಕಾರದಿಂದ ಎಷ್ಟು ಹಣ ಬಿಡುಗಡೆ ಮಾಡಿಕೊಂಡಿರಿ ಎಂದರೆ ಮಾತ್ರ ಅದಕ್ಕೆ ಉತ್ತರ ನೀಡುವುದಿಲ್ಲ.
ರಸ್ತೆ ನಿರ್ಮಾಣವೇ ಆಗಿಲ್ಲ: ತಾಲೂಕಿನಲ್ಲಿ ಜಿಪಂ ಎಂಜಿನಿಯರಿಂಗ್ ಇಲಾಖೆಯಿಂದ ಯಾವುದೆ ಕೆಲಸವನ್ನು ನಿರ್ವಹಿಸಲು ಅನುಮೋದನೆ ಪಡೆಯಲು, ಕಾಮಗಾರಿ ಆರಂಭಿಸಲು ಮತ್ತು ಕಾಮಗಾರಿ ಮುಗಿದ ನಂತರ ಹಣ ಬಿಡುಗಡೆಮಾಡಲು ಸಹಿ ಮಾಡುವ ಜಿಪಂ ಸಹಾಯಕ ಕಾರ್ಯಪಾಲ ಎಂಜಿನಿಯರ್ ರವರನ್ನು ಮಾರುತಿ ನಗರದಲ್ಲಿ ಅವೈಜ್ಷಾನಿಕ ಮತ್ತು ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಪ್ರಶ್ನೆಮಾಡಿದರೆ ನಮ್ಮ ಇಲಾಖೆಯಿಂದ ಮಾರುತಿ ನಗರದಲ್ಲಿ ಯಾವುದೆ ರಸ್ತೆ ನಿರ್ಮಾಣ ಮಾಡಿಲ್ಲ ಕುತೂಹಲ ಕರ ಮಾಹಿತಿ ನೀಡಿದ್ದಾರೆ.
•ಎಚ್.ಬಿ.ಮಂಜುನಾಥ