Advertisement
ಬೆಂಗಳೂರು ಬುಲ್ಸ್ ಎಂದರೆ ಕಬಡ್ಡಿ ಅಭಿಮಾನಿಗಳಿಗೆ ಮೊದಲು ನೆನಪಾಗುವುದು ಹೈ ಫ್ಲೈಯರ್ ಎಂದೇ ಖ್ಯಾತರಾಗಿರುವ ಪವನ್ ಸೆಹ್ರಾವತ್. ಹೌದು ಪವನ್ ಅಂತಹ ಛಾಪನ್ನು ಪಿಕೆಎಲ್ ನಲ್ಲಿ ಮೂಡಿಸಿದ್ದಾರೆ.
Related Articles
Advertisement
ಏಳು ಮತ್ತು ಎಂಟನೇ ಆವೃತ್ತಿಗಳಲ್ಲಿಯೂ ಬುಲ್ಸ್ ಪರ ಆಡಿದ್ದ ಪವನ್ ಆ ಆವೃತ್ತಿಗಳ ಅತೀ ಹೆಚ್ಚು ಅಂಕ ಪಡೆದ ರೈಡರ್ ಆಗಿ ಹೊರ ಹೊಮ್ಮಿದ್ದರು. ಹೀಗೆ ಬುಲ್ಸ್ ನ ಬೆನ್ನುಲುಬಾಗಿದ್ದ ಪವನ್ ಒಂಬತ್ತನೇ ಆವೃತ್ತಿಯ ಹಾರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ತಮಿಳ್ ತಲೈವಾಸ್ ತಂಡದ ಪಾಲಾದರು. ಪವನ್ ಬುಲ್ಸ್ ನಿಂದ ಬೇರ್ಪಟ್ಟಿದ್ದು ಬೆಂಗಳೂರು ಬುಲ್ಸ್ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು. ಪವನ್ ಇಲ್ಲದ ಬುಲ್ಸ್ ನ ಊಹಿಸಿಕೊಳ್ಳಲು ಕಷ್ಟ ಆಗಿತ್ತು. ಮತ್ತೆ ಬೆಂಗಳೂರ್ ತಂಡ ಸೋಲಿನ ಸುಳಿಗೆ ಸಿಲುಕಿದರೆ ಎನ್ನುವ ಆತಂಕ ಕಾಡಿದ್ದಂತೂ ಸುಳ್ಳಲ್ಲ.
ಇಂತಹ ಸಮಯದಲ್ಲಿಯೇ ಬೆಂಗಳೂರು ಬುಲ್ಸ್’ಗೆ ಭರವಸೆಯ ಬೆಳಕಾಗಿ ಬಂದಿದ್ದು ಹರಿಯಾಣದ ಇಪ್ಪತ್ತೆರಡರ ಹರೆಯದ ಭರತ್ ಹೂಡಾ. ಕಳೆದ ಆವೃತ್ತಿಯಲ್ಲಿ ಪವನ್’ಗೆ ಸಪೋರ್ಟ್ ರೈಡರ್ ಆಗಿದ್ದ ಭರತ್ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಾದರೂ ಪವನ್ ಮುಂದೆ ಅವರಿಗೆ ಮಿಂಚಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಪವನ್ ಅನುಪಸ್ಥಿತಿಯಲ್ಲಿ ತಂಡದ ರೈಡಿಂಗ್ ಜವಾಬ್ದಾರಿಯನ್ನು ವಿಕಾಸ್ ಖಂಡೋಲ ಜೊತೆ ಜಂಟಿಯಾಗಿ ಹೊತ್ತಿರುವ ಭರತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸೂಪರ್ ರೈಡ್’ನ ಮೂಲಕ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡುತ್ತಿದ್ದಾರೆ.
ಲೋಕಲ್ ಕಬಡ್ಡಿ ಪಂದ್ಯಾವಳಿಗಳಲ್ಲಿ ಆಡುತ್ತಿದ್ದ ಕಡು ಬಡತನದ ಕುಟುಂಬದಿಂದ ಬಂದ ಭರತ್ ಬೆಂಗಳೂರು ತಂಡ ಸೇರಿದ್ದೇ ಒಂದು ರೋಚಕ ಕತೆ. ಬುಲ್ಸ್ ನ ಸ್ಟಾರ್ ಡಿಫೆಂಡರ್ ಸೌರಭ್ ನಂದಾಲ್ ಅವರ ಹುಟ್ಟೂರಿನಲ್ಲಿ ನಡೆದ ಒಂದು ಸ್ಥಳೀಯ ಕಬಡ್ಡಿ ಪಂದ್ಯಾಟಕ್ಕೆ ಶಿಷ್ಯನ ಆಹ್ವಾನದ ಮೇಲೆ ಕೋಚ್ ರಣಧೀರ್ ಸಿಂಗ್ ಮುಖ್ಯ ಅತಿಥಿಯಾಗಿ ಹೋಗಿರುತ್ತಾರೆ. ಆ ಪಂದ್ಯಾವಳಿಯಲ್ಲಿ ಭರತ್ ಕೂಡ ಭಾಗವಹಿಸಿರುತ್ತಾರಲ್ಲದೇ ಉತ್ತಮ ಪ್ರದರ್ಶನ ಕೂಡ ನೀಡುತ್ತಾರೆ. ಅವರ ಆಟದಿಂದ ಖುಷಿಯಾದ ರಣಧೀರ್ ಸಿಂಗ್ ಭರತ್ ಗೆ ಬುಲ್ಸ್ ಬರುವಂತೆ ಆಹ್ವಾನಿಸುತ್ತಾರೆ. ಆಗ ಹರಿದ ಚಪ್ಪಲಿ ಧರಿಸಿದ್ದ ಭರತ್ ಗೆ ಧನ ಸಹಾಯವನ್ನೂ ಮಾಡುತ್ತಾರೆ. ಹೀಗೆ ಪ್ರೊ ಕಬಡ್ಡಿಯ ಎಂಟನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಸೇರಿಕೊಂಡ ಭರತ್, ಗುರು ರಣಧೀರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಆಟಗಾರನಾಗಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುತ್ತಿದ್ದಾರೆ.
ಎರಡೂ ಕಡೆಗಳಿಂದ ದಾಳಿ ನಡೆಸಬಲ್ಲ ಎತ್ತರದ ನಿಲುವಿನ ಭರತ್ ಎದುರಾಳಿಯ ಕೋಟೆಗೆ ನುಗ್ಗಿ ಸೂಪರ್ ರೈಡ್ ಮೂಲಕ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸಿ ಸಿಂಹಸ್ಪಪ್ನರಾಗುತ್ತಿದ್ದಾರೆ. ರೈಡಿಂಗ್ ಜೊತೆ ಡಿಫೆನ್ಸ್ ನಲ್ಲಿಯೂ ಉತ್ತಮ ಸಹಾಯ ನೀಡುತ್ತಿರುವ ಅವರು ಆ್ಯಂಕಲ್ ಹೋಲ್ಡ್ ಮೂಲಕ ಎದುರಾಳಿ ರೈಡರ್ ನ ಕಟ್ಟಿಹಾಕುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ.
ಪ್ರಸ್ತುತ ಒಂಬತ್ತನೇ ಆವೃತ್ತಿಯ ಎರಡನೇ ಉತ್ತಮ ರೈಡರ್ ಆಗಿರುವ ಭರತ್, ಬುಲ್ಸ್ ಗೆ ಹೊಸ ಭರವಸೆಯನ್ನು ತುಂಬುತ್ತಿದ್ದಾರೆ. ಯಾವಾಗಲೂ ಡಿಫೆನ್ಸ್ ನಲ್ಲಿ ಎಡವುತ್ತಿದ್ದ ಬುಲ್ಸ್ ಈ ಭಾರಿ ಎಲ್ಲ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಸೌರಭ್ ನಂದಾಲ್ ಡಿಫೆನ್ಸ್ ನಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದರೆ, ಭರತ್ ರೈಡಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಪವನ್ ಇಲ್ಲದ ಕೊರಗು ಕಾಡದ ರೀತಿಯಲ್ಲಿ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಬುಲ್ಸ್ ಈ ಬಾರಿ ಎರಡನೇ ಸಲ ಕಪ್ ಎತ್ತುವ ಕನಸನ್ನು ನನಸು ಮಾಡುವತ್ತ ದಾಪುಗಾಲಿಡುತ್ತಿದೆ.
ಬೆಂಗಳೂರು ಬುಲ್ಸ್ ಮತ್ತೊಂದು ಕಪ್ ಗೆದ್ದು ತನ್ನ ಕೊಂಬಿನ ಉದ್ದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎನ್ನುವುದು ಬುಲ್ಸ್ ಆಭಿಮಾನಿಗಳ ಬಯಕೆ.
ಸುಶ್ಮಿತಾ ನೇರಳಕಟ್ಟೆ