ದೇವನಹಳ್ಳಿ: ವಿದ್ಯುತ್ ಕಡಿತವಾದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಉಪಗ್ರಹ ಆಧಾರಿತ ತರಬೇತಿ ಕಾರ್ಯಗಾರ ಸ್ಥಗಿತಗೊಂಡಿದ್ದರಿಂದ ತಾಪಂ ಕಚೇರಿಯ ತರಬೇತಿ ಕೇಂದ್ರದಲ್ಲಿ ಗ್ರಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಿಗಾಗಿ ಉಪಗ್ರಹ ಆಧಾರಿತವಾಗಿ ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಂಸ್ಥೆಯ ವತಿಯಿಂದ ಸಬ್ ಕೀ ಯೋಜನಾ ಸಬ್ ಕಾ ವಿಕಾಸ್ ಯೋಜನೆ ಅಡಿಯಲ್ಲಿ ಮಿಷನ್ ಅಂತ್ಯೋದಯ ಮತ್ತು ಜನರ ಯೋಜನೆಯ ಅಭಿವೃದ್ಧಿ ಹಾಗೂ 2020-21ರ ನಮ್ಮ ಗ್ರಾಮ ಯೋಜನೆಗೆ ಸಿದ್ಧ ಪಡಿಸುವ ಕುರಿತು ಗ್ರಾಪಂ ಸದಸ್ಯರಿಗೆ ಉಪಗ್ರಹ ಆಧಾರಿತ ತರಬೇತಿ ಮೂಲಕ ಸಂವಾದ ನಡೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಹಾರೋಹಳ್ಳಿ ಗ್ರಾಪಂ ಸದಸ್ಯ ಬುಳ್ಳ ಹಳ್ಳಿ ರಾಜಪ್ಪ ಮಾತನಾಡಿ, ಸೆ.3 ರಿಂದ 15ರ ವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಪ್ರತಿ ತರಬೇತಿ ಶಿಬಿರಕ್ಕೆ ತಲಾ 3 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಪಂ ಸದಸ್ಯರಿಗೆ ಇಂತಹ ತರಬೇತಿಗಳು ಅನವಶ್ಯಕವಾಗಿದೆ. ಆದರೆ ತರಬೇತಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. 1 ಗಂಟೆ 20 ನಿಮಿಷ ವಿದ್ಯುತ್ ಪೂರೈಕೆ ಇಲ್ಲ. ಕಾಟಾಚಾರಕ್ಕೆ ತರಬೇತಿ ಆಯೋಜಿಸಿದರೆ ಹೇಗೆ? ಸ್ಥಳೀಯ ಮೂಲ ಸೌಲಭ್ಯಗಳು ಇಲ್ಲವಾದರೆ ಕೋಟ್ಯಾಂತರ ರೂ. ವೆಚ್ಚದ ಬಹು ನಿರೀಕ್ಷಿತ ಯೋಜನೆಗಳು ಸಫಲ ವಾಗುವುದಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಗೊಂಡು ಮೂಲಭೂತ ಸೌಲಭ್ಯಗಳು ಕಲ್ಪಿಸಬೇಕು ಎಂದರು.
ಗ್ರಾಪಂ ಸದಸ್ಯೆ ವರಲಕ್ಷ್ಮೀ ಮಾತನಾಡಿ, ಗ್ರಾಪಂ ಸದಸ್ಯರಾಗಿ ಆಯ್ಕೆ ಗೊಂಡು 2 ವರ್ಷ ಕಳೆದ ನಂತರ ಪ್ರಸ್ತುತ ರಾಜ್ಯ ಸರ್ಕಾರ ತರಬೇತಿ ಶಿಬಿರ ನಡೆಸಲು ಅವಕಾಶ ಕಲ್ಪಿಸಿದೆ. ಆಸಕ್ತರು ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಯಾವುದೇ ಕಾರ್ಯಕ್ರಮ ಪೂರ್ವ ಸಿದ್ಧತೆಯ ಬಗ್ಗೆ ಸ್ಪಷ್ಟತೆ ಇರಬೇಕು ನಮಗೂ ಮಾಹಿತಿ ಪಡೆಯುವ ಕುತೂಹಲ ಇದ್ದು, ಕಾಲಹರಣ ಮಾಡಲು ಇಲ್ಲಿಗೆ ಯಾರು ಬರುವುದಿಲ್ಲ. ತರಬೇತಿಯಲ್ಲಿ ಹೆಚ್ಚಿನ ಮಾಹಿತಿ ಪಡೆದರೆ ಹೆಚ್ಚಿನ ಕಾರ್ಯ ನಿರ್ವಹಿಸಲು ಅನುಕೂಲ ಎಂದು ಹೇಳಿದರು.
ತಾಪಂ ಇಒ ಮುರುಡಯ್ಯ ಮಾತನಾಡಿ ವಿದ್ಯುತ್ ಪೂರೈಕೆ ಸ್ಥಗಿತದ ಬಗ್ಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಜನರೇಟರ್ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗಲೂ ಸಹ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರೂ ಸಹ ಸದಸ್ಯರು ಎದ್ದು ಹೊರ ನಡೆದರು ಎಂದು ತಿಳಿಸಿದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಹರೀಶ್, ಸದಸ್ಯರಾದ ಮಾಲ, ಮುನಿರಾಜು ಮತ್ತಿತರರಿದ್ದರು.