Advertisement

Transfer: ವರ್ಗಾವಣೆ ಅಧಿಕಾರ ಇರುವುದು ಸರಕಾರಕ್ಕೆ: ಸಿದ್ದರಾಮಯ್ಯ

11:11 PM Nov 19, 2023 | Team Udayavani |

ಬೆಂಗಳೂರು: ಆಡಳಿತಯಂತ್ರದ ಸುಧಾರಣೆಗಾಗಿ ವರ್ಗಾವಣೆ ಮಾಡಬೇಕಾ ಗುತ್ತದೆ. ಅದೊಂದು ಸಹಜ ಪ್ರಕ್ರಿಯೆ ಅಷ್ಟೇ. ಅಷ್ಟಕ್ಕೂ ವರ್ಗಾವಣೆ ಮಾಡುವ ಅಧಿಕಾರ ಸರಕಾರಕ್ಕಿದೆ. ಆ ಅಧಿಕಾರ ಇರುವುದು ಇವರಿಗಾ (ಕುಮಾರಸ್ವಾಮಿಗೆ)? ಅಥವಾ ಬಿಜೆಪಿಗಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಹಮ್ಮಿಕೊಂ ಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಮತ್ತು ನಗರ ಜಿಲ್ಲೆಯ ಐದು ವಿಭಾಗಗಳ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮ ಕಾಲದಲ್ಲಿ ಇವರು (ಕುಮಾರಸ್ವಾಮಿ) ಲಂಚ ತೆಗೆದುಕೊಂಡು ವರ್ಗಾವಣೆ ಮಾಡುತ್ತಿ ದ್ದರು. ಅದೇ ಈಗಲೂ ಆಗುತ್ತಿರಬಹುದು ಅಂದುಕೊಂಡಿದ್ದಾರೋ ಅಥವಾ ಸರಕಾರದ ವಿರುದ್ಧ ಅಪಪ್ರಚಾರ ಮಾಡಬೇಕು ಅಂತ ಹೀಗೆ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಆಡಳಿತಯಂತ್ರ ಸುಧಾರಣೆಗಾಗಿ ವರ್ಗಾವಣೆ ಮಾಡುವುದು ಸಹಜ ಪ್ರಕ್ರಿಯೆ. ಅದನ್ನೇ ವರ್ಗಾವಣೆ ದಂಧೆ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ವರ್ಗಾವಣೆಗೆ ಸಮರ್ಥನೆ ನೀಡಿದರು.

ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ
ತಮಗೆ ಈ ಹಿಂದೆ ಅಧಿಕಾರ ಕೊಟ್ಟರೂ ಸರಿಯಾಗಿ ಮಾಡಲಾಗದೆ ಜನರಿಂದ ತಿರಸ್ಕರಿಸಲ್ಪಟ್ಟರು. ಈಗ ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಇವರು ಹೊಟ್ಟೆಕಿಚ್ಚು, ದ್ವೇಷದ ರಾಜಕಾರಣದಿಂದ ಹೇಗಾದರೂ ಮಾಡಿ ಸರಕಾರಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಾನು ಒಂದೇ ಒಂದು ರೂಪಾಯಿ ಲಂಚ ತೆಗೆದುಕೊಂಡಿದ್ದೇನೆ ಎಂಬುದನ್ನು ಅವರು ಸಾಬೀತುಪಡಿಸಿದರೆ, ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಸವಾಲು ಹಾಕಿದರು.

ಕುಮಾರಸ್ವಾಮಿ ನನ್ನ ಮತ್ತು ಡಿ.ಕೆ. ಶಿವಕುಮಾರ್‌ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಅದರಲ್ಲಿ ಒಂದಾದರೂ ಸಾಬೀತಾಗಿದೆಯೇ? ಒಂದಕ್ಕಾದರೂ ದಾಖಲೆ ನೀಡಿದ್ದಾರಾ? ಇಲ್ಲ. ಅವರದ್ದು ಬರೀ “ಹಿಟ್‌ ಆ್ಯಂಡ್‌ ರನ್‌’ ಕೇಸ್‌. ಸುಳ್ಳು ಅವರ ಮನೆದೇವರು. ಇನ್ನು ಸೋತು ಸುಣ್ಣವಾಗಿರುವ ಬಿಜೆಪಿಯವರಿಗೂ ಹೀಗೆ ಆರೋಪ ಮಾಡುವುದೇ ಬೇಕಾಗಿದೆ. ಇವೆರಡೂ (ಬಿಜೆಪಿ-ಜೆಡಿಎಸ್‌) ಒಂದು ರೀತಿ ಅನ್ನ ಹಳಸಿತ್ತು ಮತ್ತು ನಾಯಿ ಕಾದಿತ್ತು ಅನ್ನುವಂತಿದೆ ಎಂದು ಟೀಕಿಸಿದರು.

Advertisement

ಮುಂದೆ ನಮಗೆ ಲೋಕಸಭಾ ಚುನಾವಣೆಯ ದೊಡ್ಡ ಸವಾಲಿದೆ. ಬೆಂಗಳೂರಿನ ಮೂರು ಸ್ಥಾನಗಳು ಸಹಿತ ಎಲ್ಲ 28 ಸ್ಥಾನಗಳನ್ನು ಗೆಲ್ಲಲೇಬೇಕು. ಇದರ ಬೆನ್ನಲ್ಲೇ ಪಾಲಿಕೆ ಚುನಾವಣೆ ಬರಲಿದ್ದು, ಅಲ್ಲಿಯೂ ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ನೂತನವಾಗಿ ಪದಗ್ರಹಣ ಮಾಡಿದ ನಗರ ಜಿಲ್ಲೆಯ ಐದು ವಿಭಾಗಗಳ ನೂತನ ಜಿಲ್ಲಾಧ್ಯಕ್ಷರ ಮೇಲೆ ಹೊಣೆ ಹೆಚ್ಚಿದೆ ಎಂದರು.

ಬಿಜೆಪಿ ಗೆದ್ದರೆ ಗ್ಯಾರಂಟಿಗೆ ಕೊಕ್ಕೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್‌ ಸರಕಾರವು ನುಡಿದಂತೆ ನಡೆದು, ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ವೋಟಿನ ಮೂಲಕ ಇದರ ಲಾಭ ಪಡೆಯಬೇಕು. ಬಿಜೆಪಿ ಅಥವಾ ಜೆಡಿಎಸ್‌ಗೆ ಮತ ಚಲಾಯಿಸಿದರೆ, ಈ ಗ್ಯಾರಂಟಿಗಳನ್ನು ನೀಡದಂತೆ ಯಾವುದಾದರೂ ಕಾನೂನು ತರಲಿದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸಬೇಕು ಎಂದರು.

ನರೇಂದ್ರ ಮೋದಿ ಕಾಂಗ್ರೆಸ್‌ನ ಗ್ಯಾರಂಟಿ ಗಳನ್ನು ವಿರೋಧಿಸಿದ್ದರು. ಇದರಿಂದ ಆರ್ಥಿಕ ದಿವಾಳಿ ಆಗಲಿದೆ ಎಂದು ಆರೋಪಿಸಿದ್ದರು. ಆದರೆ ಈ ಯೋಜನೆಗಳನ್ನು ಕದ್ದು, ಅವರು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕರೆಂಟ್‌ ಕದ್ದ ಕ್ಷುಲ್ಲಕ ವ್ಯಕ್ತಿ
ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದವರು ಕರೆಂಟ್‌ ಕದ್ದು ಕ್ಷುಲ್ಲಕ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಮೂದಲಿಸಿದರು. ದಂಡ ಪಾವತಿಸಿದ್ದಾರೆ ಎಂದರೆ ತಪ್ಪು ಮಾಡಿದ್ದಾರೆ ಎಂದರ್ಥ ಅಲ್ಲವೇ? ಅಂಥವರು ನಮ್ಮ ಮೇಲೆ ವರ್ಗಾವಣೆ ದಂಧೆ ಆರೋಪ ಮಾಡುತ್ತಾರೆ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next