ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಆಸ್ತಿ ಕಳೆದ 5 ವರ್ಷಗಳಿಗಿಂತ ದುಪ್ಪಟ್ಟಾಗಿದೆ. ಈ ಬಾರಿ ಅವರು ತಮ್ಮ ಬಳಿ 548,85,20,592 ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಗುರುವಾರ ಕನಕಪುರ ತಾಲೂಕಿನ ಕಬ್ಬಾಳುವಿನಲ್ಲಿರುವ ಕಬ್ಬಾಳಮ್ಮ ದೇವಿಗೆ, ಕನಕಪುರದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಿವಕುಮಾರ್ ನಾಮಪತ್ರ ಸಲ್ಲಿಸಿದರು.
2013ರ ಚುನಾವಣೆ ವೇಳೆ ತನ್ನ ಬಳಿ 251 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. 2008ರ ಚುನಾವಣೆ ವೇಳೆ 75 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದರು.
ಸುಮಾರು 600 ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿರುವ ಡಿಕೆಶಿ 101 ಕೋಟಿ 77 ಲಕ್ಷದ 80 ಸಾವಿರದ 200 ರೂಪಾಯಿ ಸಾಲ ಮಾಡಿದ್ದಾರೆ. ಡಿಕೆಶಿ ಬಳಿ 548 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೆ, ಮಗಳು ಐಶ್ವರ್ಯ ಬಳಿ 102 ಕೋಟಿ ಮೌಲ್ಯದ ಆಸ್ತಿ ಇದೆ. ಪತ್ನಿ ಉಷಾ ಹತ್ತಿರ 86.95 ಕೋಟಿ ರೂ. ಮೌಲ್ಯದ ಆಸ್ತಿ ಇದೆ.
ದೇವಾಲಯದಿಂದ ಬೃಹತ್ ರ‍್ಯಾಲಿ ಮೂಲಕ ಸಾವಿರಾರು ಬೆಂಬಲಿಗರೊಡನೆ ತಾಲೂಕು ಕಚೇರಿಗೆ ಆಗಮಿಸಿದ ಸಚಿವರು ಚುನಾವಣಾಧಿಕಾರಿ ಉಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಉಷಾ, ತಾಯಿ ಗೌರಮ್ಮ, ತಮ್ಮ ಡಿ.ಕೆ.ಸುರೇಶ್ ಸಚಿವರ ಜೊತೆಗಿದ್ದರು.