ಹರಪನಹಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ದಾಖಲೆಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿರುವ ಘಟನೆ ಪಟ್ಟಣದ ಬಿಇಒ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕಚೇರಿ ಹಿಂಭಾಗದಲ್ಲಿರುವ ದಾಖಲಾತಿ ಕೊಠಡಿಯಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ನೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷೇತ್ರಸಮನ್ವಯಾಧಿಕಾರಿಗಳ ಹಾಗೂ ಬಿಇಒ ಕಚೇರಿಯ ಕೆಲವೊಂದು ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಕಂಪ್ಯೂಟರ್, ಗಣಕ ಯಂತ್ರಗಳು, ಪ್ರಿಂಟರ್, ಕೊಠಡಿ ಗೋಡೆ, ವಿದ್ಯುತ್ ಉಪಕರಣಗಳು ಸುಟ್ಟಿದ್ದು, ಬೆಂಕಿ ಇನ್ನೂ ಹೆಚ್ಚು ಹರಡುವ ಪೂರ್ವದಲ್ಲಿಯೇ ಕಚೇರಿ ಹಿಂಭಾಗದ ಸಾರ್ವಜನಿಕರು ನೀರನ್ನು ಹಾಕಿದ್ದಾರೆ. ನಂತರ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಿದೆ. ಈ ಕುರಿತು ಪ್ರಭಾರಿ ಬಿಆರ್‌ಸಿ ನಾಗರಾಜ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಇಒ ಬಸವರಾಜಪ್ಪನವರು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.