ದೋಟಿಹಾಳ: ಇಲ್ಲಿಗೆ ಸಮೀಪದ ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬದ ತಂತಿಗಳು ಮನೆಗಳ ಮೇಲೆ ಹಾಯ್ದು ಹೋಗಿದ್ದು, ಗ್ರಾಮಸ್ಥರು ನಿತ್ಯ ಅಪಾಯ ಮತ್ತು ಮಳೆ ಬಂದಾಗ ವಿದ್ಯುತ್ ಸ್ಪರ್ಷ ಆಗುವುದೆಂಬ ಭಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.
ಗ್ರಾಮದಲ್ಲಿ ಜೆಸ್ಕಾಂ ಇಲಾಖೆಯವರು ವ್ಯವಸ್ಥಿತವಾಗಿ ವಿದ್ಯುತ್ ಕಂಬಗಳನ್ನು ಹಾಕಿಲ್ಲ. ಹೀಗಾಗಿ ಮುಖ್ಯರಸ್ತೆ ಸೇರಿದಂತೆ ಒಳ ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಕಾಣಸಿಗದೇ ಮನೆಯ ಹಿಂಭಾಗ ಅಥವಾ ರಸ್ತೆ ಮಧ್ಯೆ ಇರುವುದು ಕಂಡುಬರುತ್ತದೆ. ಹೀಗಾಗಿ ಕಂಬಗಳಿಗೆ ಜೋಡಿಸಲಾದ ವಿದ್ಯುತ್ ತಂತಿಗಳು ಮನೆಯೇ ಮೇಲೆ ಹಾಯ್ದು ಹೋಗಿವೆ. ಸದ್ಯ ಜೆಸ್ಕಾಂ ಸಿಬ್ಬಂದಿ ನಿರ್ವಹಣೆ ಇಲ್ಲದೇ ತಂತಿಗಳು ಮನೆ ಮಾಳಿಗೆ(ಚಾವಣಿ)ಯನ್ನು ತಾಗುತ್ತಿವೆ. ಎಷ್ಟೋ ಸಲ ಬೀಸುವ ಗಾಳಿಗೆ ತಂತಿ ಅಲುಗಾಡಿ ಬೆಂಕಿ ಕಿಡಿ ಕಾಣಿಸಿಕೊಂಡಿದ್ದುಂಟು. ಆಗ ಮನೆಯಲ್ಲಿದ್ದ ಜನರು ಭಯ ಭೀತರಾಗಿ ಮನೆಯಿಂದ ಹೊರಗಡೆ ಬಂದಿರುತ್ತಾರೆ ಮತ್ತು ಗ್ರಾಮದ ಹುಡುಗರು, ಮಹಿಳೆಯರು ಅಪಾಯಕ್ಕೆ ಸಿಲುಕಿದ ಉದಾಹರಣೆಗಳಿವೆ ಎಂದು ಗ್ರಾಮಸ್ಥರು ದೂರುತ್ತಾರೆ.
ಕಣ್ಣು ಮುಚ್ಚಿ ಕುಳಿತ ಜೆಸ್ಕಾಂ: ಅಪಾಯಕ್ಕೆ ಸಿಲುಕಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ದೂರು ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ಕುಷ್ಟಗಿಯ ಜೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ತಾವೇ ತಂತಿಗಳಿಗೆ ಪ್ಲ್ಯಾಸ್ಟಿಕ್ ಪೈಪ್ ಅಥವಾ ಕಟ್ಟಿಗೆಗಳಿಂದ ರಕ್ಷಣೆ ಮಾಡಿಕೊಂಡಿದ್ದೇವೆ ಎಂದು ಗ್ರಾಮದ ಮಂಗಳಪ್ಪ ವಾಲಿಕಾರ, ಚಂದನಗೌಡ ಪೋಲಿಸ್ ಪಾಟೀಲ್ ಸೇರಿದಂತೆ ಇತರರು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ವಿವರಿಸಿದರು.
ಗ್ರಾ.ಪಂ. ವಾದ: ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ಜೋಡಿಸಿಲಾದ ತಂತಿಗಳ ಸಾಲು ಕೆಳಗೆಯೇ ಕೆಲ ಗ್ರಾಮಸ್ಥರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಅಂತಹ ಮನೆಗಳಲ್ಲಿ ವಾಸಿಸುವವರಿಗೆ ಅಪಾಯ ತಗಲುವುದು ಖಂಡಿತ. ಈ ಕುರಿತು ಬಹು ದಿನಗಳಿಂದ ಕುಷ್ಟಗಿಯ ಜೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಜೊತೆಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ. ಏನು ಮಾಡದ ಸ್ಥಿತಿ ಪಂಚಾಯಿತಿಗೆ ಎದುರಾಗಿದೆ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಜಿಲ್ಲೇಯ ಅನೇಕ ಕಡೆಗಳಲ್ಲಿ ವಿದ್ಯುತ್ ಅವಗಡದಿಂದ ಅನಾಹುತಗಳು ಸಂಭವಿಸಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಜೆಸ್ಕಾಂ ಇಲಾಖೆಯವರು ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬುದು ಸಾರ್ವಜನಿಕರ ಕಳಕಳಿಯಾಗಿದೆ.
ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸರ‍್ಮರ್(ವಿದ್ಯುತ್ ಪರಿವರ್ತಕ) ಬೇರೆಕಡೆಗೆ ಸ್ಥಳಾಂತರಿಸಬೇಕೆಂದು ಜೆಸ್ಕಾಂ ಇಲಾಖೆಗೆ ಹೀಗಾಗಲೇ 2-3ಪತ್ರಗಳನ್ನು ಬರೆಯಲಾಗಿದೆ ಅವರಿಂದ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
-ಅಮೀನಸಾಬ್ ಅಲಂದಾರ, ಪಿಡಿಒ ಕೇಸೂರ ಗ್ರಾ.ಪಂ.
ಕಡೇಕೊಪ್ಪ ಗ್ರಾಮದಲ್ಲಿ ಮನೆಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ಕಂಬದ ತಂತಿಗಳು ಸರಿಪಡಿಸಲು ಒಂದು ಕ್ರೀಯಾ ಯೋಜನೆಯನ್ನು ಸಿದ್ದಪಡಿಸಿ ಅನುಮೋದನೆಗೆ ಗಂಗಾವತಿ ಡಿವಿಜನ್ ಆಫೀಸಿಗೆ ಕಳಿಸಿಕೊಡಲಾಗಿದೆ. ಅಲ್ಲಿದ ಅನುಮೋದನೆಯಾಗಿ ಬಂದ ಕೂಡಲೇ ಕಂಬ, ತಂತಿಗಳನ್ನು ಸ್ಥಳಾಂತರಿಸುತ್ತೇವೆ.
-ದವಲಸಾಬ್ ನಧಾಫ್. ಎಇಇ ಕುಷ್ಟಗಿ.
-ವರದಿ: ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ