Advertisement

UPCLನಿಂದ ಕೇರಳಕ್ಕೆ ವಿದ್ಯುತ್‌ ಲೈನ್‌ :ಕೇರಳ ಮಾದರಿ ಪರಿಹಾರ: ಸಮಿತಿ ರಚನೆ

01:10 AM Sep 21, 2023 | Team Udayavani |

ಮಂಗಳೂರು: ಉಡುಪಿ ಎಲ್ಲೂರಿನ ಯುಪಿಸಿಎಲ್‌ನಿಂದ ಕೇರಳಕ್ಕೆ ವಿದ್ಯುತ್‌ ಲೈನ್‌ ಹಾದುಹೋಗುವ ದ.ಕ. ಜಿಲ್ಲೆಯ ವ್ಯಾಪ್ತಿಯ ಪ್ರದೇಶಗಳ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲಿ ಗರಿಷ್ಠ ಪರಿಹಾರ ನೀಡುವ ಸಂಬಂಧ ಸಮಿತಿ ರಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಸಂತ್ರಸ್ತರ ಅಹವಾಲು ಸ್ವೀಕರಿಸಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ ತೆಂಗು ಮತ್ತು ಅಡಿಕೆ ತೋಟಗಳಿಗೆ ಕಂಪೆನಿಯವರು ತೀರಾ ಕಡಿಮೆ ಪರಿಹಾರ ನೀಡುತ್ತಿರುವ ಬಗ್ಗೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೇರಳ ಮಾದರಿಯಲ್ಲೇ ಪರಿಹಾರ ಸಿಗಬೇಕು ಎಂಬುದು ಅವರ ಬೇಡಿಕೆ. ಹಾಗಾಗಿ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಗರಿಷ್ಠ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಎಂಎಸ್‌ಇಝೆಡ್‌ ಕಂಪೆನಿಗೆ ಸೂಚನೆ
ಎಂಎಸ್‌ಇಝಡ್‌ನ‌ಲ್ಲಿರುವ ಜೆಬಿಎಫ್ ಕಂಪೆನಿಯಿಂದ ಖಾಯಂ ಉದ್ಯೋಗ ವಂಚಿತರ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವರು, ಈ ಬಗ್ಗೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಲಾಗುವುದು. ಕಂಪೆನಿ ಆಡಳಿತ ಮಂಡಳಿ ಖಾಯಂ ಉದ್ಯೋಗಕ್ಕೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಬೇಕು ಎಂದು ಹೇಳಿದರು.

ಸೌಜನ್ಯಾ ತಾಯಿ ಮನವಿ
ಹತ್ಯೆಗೊಳಗಾದ ಸೌಜನ್ಯಾಳಿಗೆ ನ್ಯಾಯ ಸಿಗ ಬೇಕೆಂದು ಹೋರಾಟ ನಡೆಸುತ್ತಿರುವವರಿಗೆ ಕಿರುಕುಳ ನೀಡಲಾಗುತ್ತಿದೆ. ಹೋರಾಟಗಾರರಿಗೆ ರಕ್ಷಣೆ ನೀಡಬೇಕು ಎಂದು ಸೌಜನ್ಯಾ ತಾಯಿ ಕುಸುಮಾವತಿ ಸಚಿವರಿಗೆ ಮನವಿ ಮಾಡಿದರು.

ಮೂವರು ಡಿಸಿಎಂ ತಪ್ಪೇನಿಲ್ಲ
ಮಂಗಳೂರು: ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡಿದರೆ ತಪ್ಪೇನಿಲ್ಲ. ಆದರೆ ಇದನ್ನು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಇದನ್ನು ಬಹಿರಂಗವಾಗಿ ಚರ್ಚಿಸುವ ಅಗತ್ಯ ಇಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಅವರು ಮಾತನಾಡಿ, ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಸೋತಿದ್ದಾರೆ. ಹೀಗಾಗಿ ಅವರು ಸುಮ್ಮನಿದ್ದರೆ ಒಳ್ಳೆಯದು ಎಂದರಲ್ಲದೇ ಚುನಾವಣ ಪೂರ್ವದಲ್ಲೂ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದ್ದರು. ನಾವು ಈಗಲೂ ಒಗ್ಗಟ್ಟಲ್ಲಿ ಇದ್ದೇವೆ ಎಂದರು.

ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಮಳೆ ಕೂಡ ಕಡಿಮೆಯಾಗಿ ನಮ್ಮಲ್ಲೇ ನೀರು ಇಲ್ಲ. ಈ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಚರ್ಚಿಸೋಣ ಎಂದ ಅವರು ಕಾವೇರಿ ವಿಚಾರದಲ್ಲಿ ಕೋರ್ಟ್‌ಗಳು ಆದೇಶ ಕೊಡುತ್ತವೆ. ಆದರೆ ಕೆಲವು ವಿಚಾರಗಳಲ್ಲಿ ಸರಕಾರ ಜನರ ಪರವಾಗಿ ನಿಲ್ಲಬೇಕಿದೆ ಎಂದವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹುಕ್ಕಾ ಬಾರ್‌ ನಿಷೇಧ
ರಾಜ್ಯದಲ್ಲಿ ಹುಕ್ಕಾ ಬಾರ್‌ ನಿಷೇಧ ಬಗ್ಗೆ ಚಿಂತನೆ ಇದೆ. ಹುಕ್ಕಾ ಬಾರ್‌ಗಳಿಂದ ತೊಂದರೆ ಆಗುತ್ತಿದೆ. ಸಾರ್ವಜನಿಕರಿಗೆ ಅನಾರೋಗ್ಯ ಅಗುತ್ತಿದೆ. ಹೀಗಾಗಿ ಕಾಯಿದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next